ರಾಜಕೀಯವಾಗಿ ಬೆಳೆಯದಿದ್ದರೆ ಭವಿಷ್ಯವಿಲ್ಲ

brahmana sabha
ಸಾಗರದ ಶೃಂಗೇರಿ ಶಂಕರ ಮಠದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಹಾಗೂ ಬ್ರಾಹ್ಮಣ ಮಂಡಳಿಯಿಂದ ಸಿಗುವ ಸೌಲಭ್ಯಗಳ ಕುರಿತ ಕಾರ್ಯಾಗಾರದಲ್ಲಿ ಮಂಡಳಿ ಅಧ್ಯಕ್ಷ ಜಯಸಿಂಹ ಅಸಗೋಡು ಅವರನ್ನು ಸನ್ಮಾನಿಸಲಾಯಿತು. ಅಶ್ವಿನಿಕುಮಾರ್, ಹರನಾಥ ರಾವ್, ಬಿ.ಆರ್.ಜಯಂತ್, ರಾಘವೇಂದ್ರ ರಾವ್, ನವೀನ್ ಜೋಯ್ಸ್ ಇತರರಿದ್ದರು.
Published on

ಸಾಗರ: ಒಂದು ಕಾಲದಲ್ಲಿ ದೇಶದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬ್ರಾಹ್ಮಣ ಸಮುದಾಯ ಪ್ರಸ್ತುತ ರಾಜಕೀಯವಾಗಿ ವಿಮುಖವಾಗುತ್ತಿದೆ. ನಮ್ಮ ಸಮುದಾಯ ರಾಜಕೀಯದಲ್ಲಿ ಸಕ್ರಿಯವಾಗದಿದ್ದರೆ ಬೆಳವಣಿಗೆ ಕಾಣುವುದು ಅಸಾಧ್ಯ ಎಂದು ಕರ್ನಾಟಕ ಬ್ರಾಹ್ಮಣ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಹೇಳಿದರು.

ಸಾಗರದ ಶೃಂಗೇರಿ ಶಂಕರ ಮಠದಲ್ಲಿ ಭಾನುವಾರ ಕಾರ್ಯನಿರತ ಮತ್ತು ನಿವೃತ್ತ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ, ವೈದಿಕ ಪರಿಷತ್ ಹಾಗೂ ಜೋಶಿ ಫೌಂಡೇಶನ್‌ನಿಂದ ಹಮ್ಮಿಕೊಂಡಿದ್ದ ಬ್ರಾಹ್ಮಣ ಮಂಡಳಿಯಿಂದ ಸಿಗುವ ಸೌಲಭ್ಯಗಳ ಕುರಿತ ಮಾಹಿತಿ ಕಾರ್ಯಾಗಾರ ಮತ್ತು ರಾಜ್ಯ ಸರ್ಕಾರದಲ್ಲಿ ವಿವಿಧ ಸಮಿತಿಗಳಿಗೆ ನೇಮಕಗೊಂಡ ಬ್ರಾಹ್ಮಣ ಸಮಾಜದವರಿಗೆ ಏರ್ಪಡಿಸಿದ್ದ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
2018ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಆರ್.ವಿ.ದೇಶಪಾಂಡೆ ಮತ್ತು ದಿನೇಶ್ ಗುಂಡೂರಾವ್ ಪ್ರಯತ್ನದಿಂದ ಬ್ರಾಹ್ಮಣ ಮಂಡಳಿ ರಚನೆಯಾಯಿತು. ಆಗ 50 ಕೋಟಿ ರೂ. ವಾಗ್ದಾನ ಮಾಡಿದ್ದರೂ 25 ಕೋಟಿ ರೂ. ಬಿಡುಗಡೆಯಾಗಿತ್ತು. ನಂತರ ಬಂದ ಯಡಿಯೂರಪ್ಪ ನೇತೃತ್ವದ ಸರ್ಕಾರ 5 ಕೋಟಿ ರೂ. ಭರವಸೆ ನೀಡಿ 3.29 ಕೋಟಿ ರೂ. ಕೊಟ್ಟರು. ಈಗಿನ ಸರ್ಕಾರ 10 ಕೋಟಿ ರೂ. ನೀಡಿದೆ. ಬ್ರಾಹ್ಮಣರು ಅಲಕ್ಷಿತರಾಗಿದ್ದಾರೆ ಎಂದು ದೂರಿದರು.
ರಾಜ್ಯದ 30-40 ಕ್ಷೇತ್ರಗಳಲ್ಲಿ ಗೆಲ್ಲಲು ಬ್ರಾಹ್ಮಣರ ಮತಗಳೇ ನಿರ್ಣಾಯಕ. ನಾವು ನಿಂತ ನೀರಾಗದೇ ನಿರ್ಣಾಯಕ ಘಟ್ಟದಲ್ಲಿ ಒಗ್ಗಟ್ಟಾಗಬೇಕು. ಇಲ್ಲದಿದ್ದರೆ ನಾವು ನಿರ್ಲಕ್ಷೃಕ್ಕೆ ಒಳಗಾಗುತ್ತೇವೆ. ನಮ್ಮ ಸಮುದಾಯದವರು ರಾಜಕೀಯದಲ್ಲಿ ತೊಡಗಿಕೊಂಡಾಗ ಅವರಿಗೆ ಸಹಕರಿಸಬೇಕು. ಯಾವುದೇ ಸಮುದಾಯ ಒಳ್ಳೆಯ ಕೆಲಸ ಮಾಡುತ್ತಿದ್ದರೆ ಅಂಥವರನ್ನು ಬೆನ್ನು ತಟ್ಟಿ ಕೈಲಾದಷ್ಟು ಸಹಕಾರವನ್ನು ಬ್ರಾಹ್ಮಣ ಸಮುದಾಯ ನೀಡುತ್ತಿದೆ ಎಂದರು.
ತಾಲೂಕು ಕೆಡಿಪಿ ಸಮಿತಿ ಸದಸ್ಯ ವೆಂಕಟರಾವ್, ನಗರಸಭೆ ನಾಮ ನಿರ್ದೇಶಿತ ಸದಸ್ಯೆ ಸರಸ್ವತಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶಬಾಬು, ಸುಬ್ಬರಾವ್, ಪಿ.ಬಿ.ಶ್ರೀನಿವಾಸ್, ಗಣಪತಿ ಎಂ. ಹೆಗಡೆ ಅವರನ್ನು ಗೌರವಿಸಲಾಯಿತು.
ಎಂಡಿಎಫ್ ಅಧ್ಯಕ್ಷ ಎಂ.ಹರನಾಥ ರಾವ್ ಮಾತನಾಡಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕ್ಯಾನ್ಸರ್, ಹೃದಯ ಚಿಕಿತ್ಸೆಗೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ನಮ್ಮ ಅಹವಾಲು ಮುಂದಿಡಬೇಕು. ಮಂಡಳಿಗೆ ಕೇವಲ 10 ಕೋಟಿ ರೂ. ನೀಡಿರುವುದು ಬೇಸರದ ಸಂಗತಿ. ಕನಿಷ್ಠ 25 ಕೋಟಿ ರೂ. ಕೊಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಸಾಗರ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಅಶ್ವಿನಿಕುಮಾರ್, ಸಂಘದ ಹಿರಿಯರಾದ ರಾಘವೇಂದ್ರ ರಾವ್, ನವೀನ್ ಜೋಯ್ಸ್, ಎನ್.ಜಿ.ವಿನಾಯಕ ಜೋಯ್ಸ್, ಕಾರ್ಯಕ್ರಮ ಸಂಯೋಜಕ ಮ.ಸ.ನಂಜುಂಡಸ್ವಾಮಿ, ಪ್ರಸನ್ನ, ನಾರಾಯಣಮೂರ್ತಿ ಕಾನುಗೋಡು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net