

ತಿಳಿದವರ ಮಾತು ಮೃದು ಮಧುರ. ಆಡುವ ಮೊದಲು ಹೃದಯ ತಕ್ಕಡಿಯಲ್ಲಿ ತೂಗಿ ನಂತರ ಅವರು ಮಾತನಾಡುತ್ತಾರೆ. ಮೌಲ್ಯ ಅರಿಯಲಾರದವರು ಮೊದಲು ಮಾತನಾಡಿ ನಂತರ ಪಶ್ಚಾತ್ತಾಪ ಪಡುತ್ತಾರೆ. ಇನ್ನೊಬ್ಬರ ಬದುಕನ್ನು ಇಣುಕಿ ನೋಡುವುದನ್ನು ಬಿಟ್ಟಾಗಲೇ ಬದುಕು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ.
ಬದುಕು ಮನೆ ಕಿಟಕಿ ಇದ್ದಂತೆ. ತೆರೆದರೆ ಬೆಳಕು ಇಲ್ಲದಿದ್ದರೆ ಕತ್ತಲು. ಸಮಯಕ್ಕೆ ತಕ್ಕ ಹಾಗೆ ಬದಲಾಗುವವರ ಸಹವಾಸ ಯಾವತ್ತೂ ಮಾಡಬಾರದು. ಅದೇ ನಮ್ಮ ಸಮಯಕ್ಕೆ ಸಮಯ ಕೊಟ್ಟು ಸ್ಪಂದಿಸುವ ವ್ಯಕ್ತಿಗಳನ್ನು ಯಾವತ್ತೂ ಮರೆಯಬಾರದು. ರಸ್ತೆಯಲ್ಲಿ ಮುಳ್ಳು ಬಿದ್ದರೆ ಬದಿಯಲ್ಲಿ ಸರಿದು ಹೋಗುವುದು ಬುದ್ಧಿವಂತಿಕೆ. ಮುಳ್ಳನ್ನು ಬದಿಗೆ ಸರಿಸಿ ಹೋಗುವುದು ಹೃದಯವಂತಿಕೆ.
ನಾವಾಡುವ ಒಂದು ಉತ್ತಮ ಮಾತು ಮತ್ತೊಬ್ಬರ ಯಶಸ್ಸಿಗೆ ಕಾರಣ ವಾಗಬಹುದು. ಹಾಗೆಯೇ ಒಂದು ಕೆಟ್ಟ ಮಾತು ಅಳಿವಿಗೂ ಕಾರಣವಾಗಬಹುದು. ಸಂಬಂಧಗಳು ಇನ್ನೊಬ್ಬರ ನೋವನ್ನು ಹಂಚಿಕೊಳ್ಳುವ ತರ ಇರಬೇಕೇ ಹೊರತು ನೋವನ್ನು ಹೆಚ್ಚಿಸುವ ತರ ಇರಬಾರದು. ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆಗೆ ದೈವ ಶಕ್ತಿ ಇರುತ್ತದೆ. ಪ್ರಕೃತಿ ನಮ್ಮೆಲ್ಲರಿಗೂ ಭರಿಸಲಾಗದಷ್ಟು ನೀಡುವ ಅಕ್ಷಯ ಪಾತ್ರೆ. ಉಪಯೋಗಿಸಿಕೊಳ್ಳಬೇಕು, ಹಾಗೆಯೇ ಕೊಡುವುದನ್ನು ಮರೆಯಬಾರದು.
ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ. ಆದರೆ ತಕ್ಷಣವೇ ಸಿಗುವುದಿಲ್ಲ ಅಷ್ಟೇ. ತಾಳ್ಮೆಯಿಂದ ಬಾಳಿದರೆ ಸಮಸ್ಯೆಗಳು ದೂರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಹಾರ ಮತ್ತು ಆಲೋಚನೆ ಇವೆರಡರಲ್ಲಿ ಯಾವುದು ಅತಿಯಾದರೂ ದೇಹ ಮತ್ತು ಮನಸ್ಸಿಗೆ ಅಪಾಯ ತಪ್ಪಿದ್ದಲ್ಲ. ವಿನಯ ಸರಳತೆ ಸಹಾನುಭೂತಿ ಸ್ವಾಭಿಮಾನದಂಥ ಗುಣ ವೈಶಿಷ್ಟ್ಯಗಳನ್ನು ಹೊಂದಿರುವಾತನೇ ನಿಜವಾದ ಸಂಪನ್ಮೂಲ ವ್ಯಕ್ತಿ. ಆರು ಅಡಿ ಉದ್ದದ ಮನುಷ್ಯನ ಘನತೆಯನ್ನು ನಾಲ್ಕು ಇಂಚು ಉದ್ದದ ನಾಲಿಗೆ ನಿರ್ಧರಿಸುತ್ತದೆ. ಸತ್ಯವನ್ನು ಯಾರೂ ಬದಲಿಸಲಾಗದು. ಆದರೆ ಸತ್ಯ ನಮ್ಮೆಲ್ಲರನ್ನು ಬದಲಾಯಿಸಬಹುದು. ಮನುಷ್ಯನ ನಡೆ ನುಡಿಗಳು ಯಾವಾಗಲೂ ಸತ್ಯದ ಪರವಾಗಿದ್ದರೆ ಯಾವ ಭಯವೂ ಇರುವುದಿಲ್ಲ.