ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ: ಸಿ.ಟಿ.ರವಿ ಟೀಕೆ | Ruling party MLAs in crisis

C T Ravi
Published on

ಬೆಂಗಳೂರು: ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ; ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ. ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದು ನಾಣ್ಯದ ಎರಡು ಮುಖಗಳು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಟೀಕಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲವೋ ಹಾಗೆ ಕಾಂಗ್ರೆಸ್ ಭ್ರಷ್ಟಾಚಾರ ನೋಡುವುದಕ್ಕೆ ನಾವು ಸ್ಕ್ಯಾನ್ ಮಾಡುವ ಅವಶ್ಯಕತೆ ಇಲ್ಲ; ಕಣ್ಣಿಗೆ ಕಾಣುತ್ತದೆ ಎಂದು ಛೇಡಿಸಿದರು.

ಕಾಂಗ್ರೆಸ್ ಶಾಸಕರಾದ ಬಿ.ಆರ್ ಪಾಟೀಲ್ ಅವರ ಹೇಳಿಕೆಯಲ್ಲದೆ ಎಲ್ಲ ವಿಷಯವು ಕಣ್ಣಿಗೆ ಕಾಣುತ್ತದೆ. ಮೋಹನ್ ದಾಸ್ ಪೈ ರವರು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬಿಲ್ಡರ್ಸ್‍ಗಳ ಕಷ್ಟ ಏನು ಎನ್ನುವುದನ್ನು ಅವರಿಗೆ ಆದ ಅನುಭವದ ಆಧಾರದಲ್ಲಿ ವ್ಯಕ್ತಪಡಿಸಿದರು.

ಅಡಿಗೆ 100 ರೂ ಫಿಕ್ಸ್

ಪ್ಲಾನ್ ಮಂಜೂರು ಮಾಡಬೇಕಾದರೆ ಒಂದು ಅಡಿಗೆ 100 ರೂ ಕೊಡಬೇಕು, ಭೂ ಬದಲಾವಣೆ ಮಾಡಬೇಕಾದರೆ 25 ಲಕ್ಷ ರೂ ಅನ್ನು ಒಂದು ಎಕರೆ ಜಮೀನಿಗೆ ಕೊಡಬೇಕು. ಕಾಂಗ್ರೆಸ್ ಸರ್ಕಾರ ಎಲ್ಲದರಲ್ಲೂ ಲಂಚ ಪಡೆಯುತ್ತಿದೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಲಂಚ ಕೊಟ್ಟರೆ ಮಾತ್ರ ಮೊದಲು ಅನುದಾನ ಸಿಗುತ್ತದೆ. ಇದು ಕೇವಲ ಅಡ್ವಾನ್ಸ್; ಬಿಲ್ಲು ಮಾಡಿಸಿಕೊಳ್ಳಲು ಪ್ರತ್ಯೇಕ, ಎನ್‍ಓಸಿ ತೆಗೆದುಕೊಳ್ಳುವುದಕ್ಕೆ ಪ್ರತ್ಯೇಕ, ಕಾಮಗಾರಿ ತೆಗೆದುಕೊಳ್ಳಲು ಲಂಚ ಕೊಡಬೇಕು. ಯಾವ ಇಲಾಖೆಯಲ್ಲೂ ಭ್ರಷ್ಟಾಚಾರ ಬಿಟ್ಟಿಲ್ಲ. ರಕ್ತ ಹೀರುತ್ತಿದ್ದಾರೆ, ಜಿಗಣೆಯಾದರೆ ರಕ್ತವನ್ನು ಹೀರಿ ಬಿಡುತ್ತದೆ. ಆದರೆ ಇವರು ಹೀರುತ್ತಲೇ ಇದ್ದಾರೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ಸಿನ ಹಲವಾರು ಶಾಸಕರು ನಮ್ಮ ಕ್ಷೇತ್ರದಲ್ಲಿ ಕಲ್ಲು ಇಡಲು ಆಗುತ್ತಿಲ್ಲ, ಚರಂಡಿ ಮಾಡಲು ಆಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಆಡಳಿತ ಪಕ್ಷದ ಬಹುತೇಕ ಶಾಸಕರ ಒಳ ಸಂಕಟವಿದು ಎಂದರು.

ವಿಪಕ್ಷದವರ ಗತಿ ಏನು ?

ಕೆಲವರು ಬಾಯಿ ಬಿಟ್ಟು ಹೇಳುತ್ತಾರೆ; ಕೆಲವರು ಬಾಯಿಬಿಟ್ಟು ಹೇಳುವುದಿಲ್ಲ ಇದು ಒಳ ಸಂಕಟ. ಇಂತಹ ಬಹುತೇಕ ಶಾಸಕರು ಇದ್ದಾರೆ. ಆಡಳಿತ ಪಕ್ಷದ ಶಾಸಕರ ಈ ಪರಿಪಾಠ ಆದರೆ ಇನ್ನು ವಿಪಕ್ಷ ಶಾಸಕರ ಗತಿ ಏನು ಆಗಬೇಕೆಂದು ಯೋಚನೆ ಮಾಡಿ ಎಂದು ಹೇಳಿದರು.

ಆಡಳಿತ ಪಕ್ಷದ ಶಾಸಕರೇ ಈ ಪರಿ ಪರಿತಾಪ ಪಡುತ್ತಿದ್ದಾರೆ. ಇನ್ನು ವಿಪಕ್ಷ ಶಾಸಕರ ಗೋಳು ಇದೆ. ಆದರೆ ಅವರ ಗೋಳು ಹೇಳಿಕೊಂಡರೆ ಪ್ರಯೋಜನವಿಲ್ಲ. ಗೋರ್ಕಲ್ಲ ಮೇಲೆ ಮಳೆ ಸುರಿದಂತೆ- ಸರ್ವಜ್ಞ ಎಂಬಂತೆ ಆಗಿದೆ ಎಂದು ಟೀಕಿಸಿದರು.

ಇದರ ಮೇಲೆ ಮುಖ್ಯಮಂತ್ರಿಗಳು ಬಿ.ಆರ್. ಪಾಟೀಲ್ ಕರೆದು ಮಾತನಾಡುತ್ತೇನೆ; ಎಚ್.ಕೆ ಪಾಟೀಲ್ ಅವರನ್ನು ಕರೆದು ಮಾತನಾಡುತ್ತೇನೆ; ರಾಜು ಕಾಗೆ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳುತ್ತಾರೆ. ಅಂದರೆ ಅವರೆಲ್ಲರು ಪ್ರೀತಿಯಿಂದ ನಿರಾಶೆಯಾದವರೇ ವ್ಯಂಗ್ಯವಾಗಿ ಕೇಳಿದರು.

ಇದು ಭ್ರಷ್ಟಾಚಾರದ ಪ್ರಶ್ನೆ, ಬಡವರಿಗೆ ಕೊಡುವ ಮನೆಯಲ್ಲಿ ಲೂಟಿ ಹೊಡೆದಿದ್ದಾರೆ. ಅವರೆಲ್ಲರನ್ನು ಕರೆದು ಮಾತನಾಡಿ ಭ್ರಷ್ಟಾಚಾರ ಮುಚ್ಚುಹಾಕುವುದಲ್ಲ. ನಿಮಗೆ ಪ್ರಾಮಾಣಿಕತೆ ಇದ್ದರೆ; ಬಡವರಿಗೆ ಅನ್ಯಾಯವಾಗಬಾರದು ಎಂದರೆ ನಿಮ್ಮ ಗೃಹ ಮಂತ್ರಿಯಾದ ಜಮೀರ್ ಅಹಮದ್ ಅವರ ರಾಜೀನಾಮೆ ತೆಗೆದುಕೊಂಡು, ಸ್ವತಂತ್ರ ನ್ಯಾಯಾಧೀಶರ ನ್ಯಾಯಾಂಗ ಸಮಿತಿ ನೇಮಿಸಿ ತನಿಖೆ ನಡೆಸಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net