

ಸಕಲೇಶಪುರ; ಸೌಲಭ್ಯ ಹಾಗೂ ಸ್ವಚ್ಛತೆ ವಿಚಾರದಲ್ಲಿ ಕ್ರಾಫರ್ಡ್ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಶಾಸಕ ಸೀಮೆಂಟ್ ಮಂಜು ಹೇಳಿದರು.
ಶನಿವಾರ ಕ್ರಾಫರ್ಡ್ ಆಸ್ಪತ್ರೆ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿ, ಆಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ರೋಗಿಗಳಿಗೆ ನೀಡಬೇಕಿರುವ ಸೌಲಭ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ವಿಚಾರವೇ ಇಲ್ಲ. ಸದ್ಯ ಆಸ್ಪತ್ರೆಯನ್ನು ಬಾಧಿಸುತ್ತಿರುವ ನೀರಿನ ಪೈಪ್‌ಗಳ ಸಮಸ್ಯೆ ವಿದ್ಯುತ್ ಲೈನ್ ಸಮಸ್ಯೆ ಹಾಗೂ ಮಳೆ ನೀರಿನಿಂದ ಸೋರುತ್ತಿರುವ ಛಾವಣಿ ದುರಸ್ತಿಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆ ಶೌಚಗೃಹಗಳನ್ನು ಅತ್ಯಂತ ಶುದ್ಧವಾಗಿಟ್ಟುಕೊಳ್ಳಬೇಕು. ಒಳರೋಗಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಸ್ಪತ್ರೆಯ ಭದ್ರತೆಗಾಗಿ ಇಬ್ಬರು ಹಂಗಾಮಿ ಸಿಬ್ಬಂದಿ ನೇಮಿಸಿಕೊಳ್ಳಿ, ಆಸ್ಪತ್ರೆಯ ಅವರಣದಲ್ಲಿ ಖಾಸಗಿ ಆಂಬುಲೆನ್ಸ್‌ಗೆ ಅವಕಾಶ ನೀಡ ಬೇಡಿ, ಹದ್ದುಮೀರಿ ವರ್ತಿಸುವವರ ವಿರುದ್ಧ ಠಾಣೆಗೆ ದೂರು ನೀಡಿ ಎಂದು ಸೂಚಿಸಿದರು.
ಸದ್ಯ ಆಸ್ಪತ್ರೆಯಲ್ಲಿ ರೇಡಿಯಲಾಜಿಸ್ಟ್ ಹಾಗೂ ಅರಿವಳಿಕೆ ತಜ್ಞರ ಕೊರತೆ ಇದ್ದು ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಮಲೆನಾಡು ಎಂಬ ಕಾರಣಕ್ಕೆ ವೈದ್ಯರು ಇಲ್ಲಿಗೆ ಬರಲು ಅಂಜುತ್ತಾರೆ. ಆದ್ದರಿಂದ, ಖಾಸಗಿ ವೈದ್ಯರನ್ನಾದರೂ ಇಲ್ಲಿಗೆ ನೇಮಿಸುವಂತೆ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಅನಿಲ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರುತಿ, ತಹಸೀಲ್ದಾರ್ ಅರವಿಂದ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅರುಣ್, ರಕ್ಷಾ ಸಮಿತಿ ಸದಸ್ಯರಾದ ಬ್ಯಾಕರವಳ್ಳಿ ಜಯಣ್ಣ, ವಳಲಹಳ್ಳಿ ಅಶ್ವತ್ಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.