

ಶಿವಮೊಗ್ಗ: ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಯುವ ಜನರು ಮಾಧ್ಯಮವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಎನ್‌ಎಸ್‌ಎಸ್ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಪುರಸ್ಕೃತ ಡಾ. ಬಾಲಕೃಷ್ಣ ಹೆಗಡೆ ಹೇಳಿದರು.
ಹಾರನಹಳ್ಳಿಯಲ್ಲಿ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜಿನಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಯುವ ಜನತೆ ಮತ್ತು ಮಾಧ್ಯಮ ವಿಷಯ ಕುರಿತು ಉಪನ್ಯಾಸ ನೀಡಿದರು.
ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಪ್ರಕಾರಗಳಲ್ಲಿ ಅನೇಕ ಪರಿವರ್ತನೆಗಳಾಗಿದ್ದು, ಮಾಧ್ಯಮಗಳು ಇಂದು ವಿವಿಧ ರೀತಿಯ ಸುಧಾರಣೆಗೆ ಒಗ್ಗಿಕೊಂಡಿವೆ. ಯುವ ಸಮೂಹ ಇವುಗಳ ಕುರಿತು ಅರಿತುಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪದವಿ ನಂತರ ಮುದ್ರಣ, ವಿದ್ಯುನ್ಮಾನ ಅಥವಾ ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಂಡು ಆಸಕ್ತಿಯಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಅವಲಂಬನೆಯಿಂದ ಓದುವ ಮತ್ತು ಬರೆಯುವ ಪ್ರವೃತ್ತಿಯಿಂದ ಯುವ ಜನರು ವಿಮುಖರಾಗುತ್ತಿರುವುದು ದುರದೃಷ್ಟಕರ ಎಂದರು.
ಬರವಣಿಗೆಯ ಹವ್ಯಾಸವಿದ್ದರೆ ಶಿಕ್ಷಣದ ವೆಚ್ಚವನ್ನು ಪಾಲಕರಿಂದ ಪಡೆಯುವ ಬದಲು ಸ್ವತಃ ಸಂಪಾದನೆ ಮಾಡಬಹುದು. ಇದಕ್ಕಾಗಿ ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಮುಕ್ತ ಅವಕಾಶಗಳು ಯುವ ಸಮೂಹವನ್ನು ಕೈಬೀಸಿ ಕರೆಯುತ್ತಿವೆ ಎಂದು ವಿವಿಧ ಉದಾಹರಣೆಗಳ ಮೂಲಕ ವಿವರಿಸಿದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಪ್ರವೀಣಚಂದ್ರ, ಪತ್ರಕರ್ತ ಜಿ.ರಂಜನ್, ಪ್ರೊ. ಕಾಂತರಾಜ, ಪ್ರೊ. ಶಿವಾನಿ, ಪ್ರೊ. ಅನು ಉಪಸ್ಥಿತರಿದ್ದರು.