ಮನ್‌ ಕಿ ಬಾತ್ ನಲ್ಲಿ ಏಕಮುಖವಾಗಿ ಹೇಳಿದ್ದನ್ನು ಕೇಳಬೇಕು ಎನ್ನುವ ಧೋರಣೆ ಇದೆ; ಇದು ಸರ್ವಾಧಿಕಾರಿ ಲಕ್ಷಣ: CM ಸಿದ್ದರಾಮಯ್ಯ

dk - 2025-04-30T164140.243
Published on

ಮನ್‌ ಕಿ ಬಾತ್ ನಲ್ಲಿ ಚರ್ಚೆ ಇಲ್ಲ. ಏಕಮುಖವಾಗಿ ಹೇಳಿದ್ದನ್ನು ಕೇಳಬೇಕು ಎನ್ನುವ ಧೋರಣೆ ಇದೆ. ಇದು ಸರ್ವಾಧಿಕಾರಿ ಲಕ್ಷಣ ಎಂದು ಮುಖ್ಯಮಂತ್ರಿ(CM)ಸಿದ್ದರಾಮಯ್ಯ ಟೀಕಿಸಿದರು.

ಕೂಡಲ ಸಂಗಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ "ಶರಣರ ವೈಭವ-2025" ನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಚರ್ಚೆ ಇರುತ್ತದೆ. ಸರ್ವಾಧಿಕಾರದಲ್ಲಿ ಚರ್ಚೆಗೆ ಅವಕಾಶ ಇಲ್ಲ. ಏಕಮುಖವಾಗಿ "ನಾನು ಹೇಳಿದ್ದನ್ನು ನೀವು ಕೇಳಿ" ಎನ್ನುವುದಷ್ಟೆ. "ಮನ್ ಕಿ ಬಾತ್" ರೀತಿ ನಾನು ಹೇಳ್ತೀನಿ, ನೀವು ಕೇಳಿ ಅನ್ನೋದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದರು.

ವಚನ ಎಂದರೆ ಮಾತು. ಶರಣರ ವಚನ ಜನರ ಭಾಷೆಯಲ್ಲಿವೆ. ಆದ್ದರಿಂದ ವಚನ ಸಾಹಿತ್ಯ, ಜನರ ಸಾಹಿತ್ಯ ಆಗಿದೆ. ಹಿಂದೆ ಸಂಸ್ಕೃತ ಕಲಿತರೆ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸ ಉಯ್ಯುವ ಶಿಕ್ಷೆ ಇತ್ತು. ಇದರಿಂದಲೇ ಭಾರತೀಯ ಶೂದ್ರ ಸಮುದಾಯ ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಶಿಕ್ಷಣ ಇಲ್ಲದ ಕಾರಣಕ್ಕೆ ಅಸಮಾನತೆ ಬೆಳೆಯಿತು ಎಂದರು.

"ನಮ್ಮ‌ ಸಂವಿಧಾನ ವೈರುದ್ಯತೆ ಇರುವ ಸಮಾಜದಲ್ಲಿ ಜಾರಿ ಆಗುತ್ತಿದೆ. ಪ್ರಜಾಪ್ರಭುತ್ವದ ಕಾರಣದಿಂದ ರಾಷ್ಟ್ರಪತಿಯಿಂದ ಪೌರ ಕಾರ್ಮಿಕರವರೆಗೂ ಎಲ್ಲರಿಗೂ ಒಂದೇ ಮತ ಎನ್ನುವ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಇದು ಸಿಗದೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇಲ್ಲ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದರು.

ಇವನಾರವ ಇವನಾರವ ಎಂದು ವಚನ ಹೇಳೋದು, ಈ ಕಡೆ ಬಂದು ಅವನು ಯಾವ ಜಾತಿ ಎಂದು ಕೇಳೋದು ನಡೆಯುತ್ತಿದೆ. ಹೀಗಾದರೆ ಬಸವಣ್ಣನವರ ಆಶಯದಂತೆ ಜಾತಿ ನಿರ್ಮೂಲನೆ ಆಗಲ್ಲ. ಜಾತಿಗೆ ಚಲನೆಯಿಲ್ಲ. ವರ್ಗಕ್ಕೆ ಚಲನೆ ಇದೆ. ಎಲ್ಲಾ ಜಾತಿಗಳಿಗೂ ಆರ್ಥಿಕ ಚಲನೆ ಸಿಕ್ಕಾಗ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ ಎಂದರು.

ಇವನಾರವ ಇವನಾರವ ಎಂದು ವಚನ ಹೇಳುತ್ತಲೇ ಜಾತಿ ಮಾಡುವವರು ಇದ್ದಾರೆ. ಬಸವಣ್ಣನವರು ಮತ್ತು ಶರಣರು ಕರ್ಮಸಿದ್ಧಾಂತದ ವಿರುದ್ಧ ಹೋರಾಟ ನಡೆಸಿದರು. ಆದರೆ ಈಗ ಶಿಕ್ಷಣ ಪಡೆದವರೇ ಜನ್ಮ ಜನ್ಮಗಳಲ್ಲಿ ನಂಬಿಕೆ ಇಟ್ಟು ಕರ್ಮಸಿದ್ಧಾಂತ ಆಚರಿಸುತ್ತಿದ್ದಾರೆ. ಒಂದು ಕಡೆ ಬಸವ ಜಯಂತಿ ಆಚರಿಸೋದು ಮತ್ತೊಂದು ಕಡೆ ಕರ್ಮಸಿದ್ಧಾಂತ ಆಚರಿಸೋದು ಮಾಡಿದರೆ ಬಸವ ಜಯಂತಿಗೆ ಅರ್ಥ ಇಲ್ಲ ಎಂದರು.

ಬಸವಣ್ಣ ಅರ್ಥ ಆಗ್ಬೇಕು ಅಂದ್ರೆ ಮೊದಲು ಕರ್ಮಸಿದ್ಧಾಂತ ಮತ್ತು ಹಣೆಬರಹ ಎನ್ನುವ ಮೌಡ್ಯವನ್ನು ಬಿಡುವ ಶಪಥ ಮಾಡಬೇಕು ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net