

ನವದೆಹಲಿ: ದೇಶದಲ್ಲಿ ಜಾತಿಗಣತಿ ನಡೆಸುವುದಾಗಿ ನವದೆಹಲಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಜಾತಿ ಗಣತಿ ವಿಷಯದಲ್ಲಿ ಕೆಲ ಸರ್ಕಾರಗಳು ರಾಜಕೀಯ ಮಾಡಿವೆ, ಇದೀಗ ಕೇಂದ್ರ ಸರ್ಕಾರದಿಂದ ಜಾತಿ ಗಣತಿ ಸರ್ವೇ ಮಾಡಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ದೇಶಾದ್ಯಂತ ಜನಗಣತಿ ಜತೆಗೆ ಜಾತಿಗಣತಿ ಮಾಡುತ್ತೇವೆ, ಕಾಂಗ್ರೆಸ್ ಆಢಳಿತವಿರುವ ರಾಜ್ಯದಲ್ಲಿ ಅವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದೆ. ಮುಂಬರುವ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಸೇರಿಸಬೇಕೆಂದು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಇಂದು ನಿರ್ಧರಿಸಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮುಂಬರುವ ಜನಗಣತಿಯಲ್ಲಿ 'ಜಾತಿ ಎಣಿಕೆ'ಯನ್ನು ಪಾರದರ್ಶಕ ರೀತಿಯಲ್ಲಿ ಸೇರಿಸಲು ಸರ್ಕಾರ ನಿರ್ಧರಿಸಿದೆ. ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಿದ ಅಶ್ವಿನಿ ವೈಷ್ಣವ್, ಜನಗಣತಿ ಕೇಂದ್ರದ ವ್ಯಾಪ್ತಿಗೆ ಬರುತ್ತದೆ ಆದರೆ ಕೆಲವು ರಾಜ್ಯಗಳು ಸಮೀಕ್ಷೆಗಳ ಹೆಸರಿನಲ್ಲಿ ಜಾತಿ ಎಣಿಕೆಯನ್ನು ಮಾಡಿವೆ ಎಂದು ಹೇಳಿದರು.