

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಎಂಬವರು ಅರ್ಜಿ ನೀಡಿದ ಒಂದೇ ದಿನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿಂದೆ ರಾಜಕೀಯ ಹುನ್ನಾರ ಅಡಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಆರೋಪಿಸಿದರು.
ಭಾನುವಾರ ಹೋಟೆಲ್ ಗೋವರ್ಧನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ರಾಜಕೀಯ ಪಕ್ಷ ಮತ್ತೊಂದು ರಾಜಕೀಯ ಪಕ್ಷದ ಮೇಲೆ ಹಗೆ ಸಾಧಿಸಲು ಈ ರೀತಿ ಮಾಡಿದೆ ಎಂದು ಅವರು ಟೀಕಿಸಿದರು.
ನನಗೆ ಅಧಿಕಾರಿಯಾಗಬೇಕು ಎಂಬ ಆಸೆ ಇತ್ತು. ಮಹಾರಾಜ ಕಾಲೇಜಿನಲ್ಲಿ ಪದವಿಯಲ್ಲಿ ಪತ್ರಿಕೋದ್ಯಮ, ಸಾರ್ವಜನಿಕ ಆಡಳಿ ಹಾಗೂ ಇಂಗ್ಲಿಷ್ ಐಚ್ಛಿಕವಾಗಿ ತೆಗೆದುಕೊಂಡು ಓದಿದೆ. ರಾಜಕೀಯಕ್ಕೆಆಕಸ್ಮಿಕವಾಗಿ ಬಂದೆ. ನಮ್ಮ ತಂದೆಯವರಾದ ಬಿ. ರಾಚಯ್ಯ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸೂಚನೆ ಮೇರೆಗೆ 1989 ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಸೋತೆ. ನಂತರ ಸತತ ಎರಡು ಬಾರಿ ಆಯ್ಕೆಯಾದೆ. ಮೂರನೇ ಬಾರಿ ವ್ಯವಸ್ಥೆಯ ಲೋಪದಿಂದ ಕೇವಲ ಒಂದೇ ಒಂದು ವೋಟಿನಿಂದ ಸೋತು 19 ವರ್ಷ ರಾಜಕೀಯವಾಗಿ ವನವಾಸ ಅನುಭವಿಸಿದೆ. ನಾನು ಹಾಗೂ ನನ್ನ ತಂದೆಯವರು ಹಣದ ಮೇಲೆ ರಾಜಕಾರಣ ಮಾಡಲಿಲ್ಲ. ಜನರ ವಿಶ್ವಾಸದ ರಾಜಕಾರಣ ಮಾಡಿದೆವು. ಈಗ ವಿಧಾನಸಭೆ, ಲೋಕಭೆ ಚುನಾವಣೆಯಲ್ಲಿ ಸೋತರೂ ರಾಜಕಾರಣದಲ್ಲಿ ಮುಂದುವರಿದೆ. ಅಂತಿಮವಾಗಿ ಈಗ ಮೂರನೇ ಬಾರಿ ಶಾಸಕನಾಗಿರುವೆ ಎಂದರು.