ಪುಟ್ಟ ಪುಟ್ಟ ಬೀಜಗಳ ಒಳಗಿದೆ ಚಮತ್ಕಾರೀ ಶಕ್ತಿ

Untitled design (2)
Published on
ಬೀಜಗಳು ಕಾಣಲು ಪುಟಾಣಿಗಳಾಗಿದ್ದರೂ ಮುಂದೆ ಪ್ರೌಢ ಮರವಾಗಿ ಬೆಳೆಯಬೇಕಾದವು. ಹಾಗಾಗಿ ಇವು ತಮ್ಮೊಳಗೆ ಅದ್ಭುತ ಶಕ್ತಿಯನ್ನು ತುಂಬಿಕೊಂಡಿರುತ್ತವೆ. ನಾವು ಇವುಗಳನ್ನು ಸೇವಿಸಿದಾಗ ವಿಶೇಷವಾದ ಶಕ್ತಿಯನ್ನು ಕೂಡ ಕೊಡುತ್ತವೆ. ಅಂತಹ ನಾಲ್ಕು ರೀತಿಯ ಬೀಜಗಳ ಮಾಹಿತಿ ಇಲ್ಲಿದೆ.

ಎಳ್ಳು: ಇತ್ತೀಚೆಗೆ ಸಣ್ಣ ವಯಸ್ಸಿನಲ್ಲಿಯೇ ಮೂಳೆ ಸಾಂದ್ರತೆ ಕಡಿಮೆ ಯಾಗುತ್ತಿದೆ. ಕೂದಲು ಬೆಳ್ಳಗಾಗುವುದು, ತಲೆ ಬೋಳಾಗುವುದು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಎಲ್ಲ ಸಮಸ್ಯೆಗಳಲ್ಲಿ ಆಹಾರ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆಯುರ್ವೆದ ಗ್ರಂಥಗಳು ಎಳ್ಳನ್ನು ವಿವರಿಸುವಾಗ ತ್ವಚ್ಯ, ಬಲ್ಯ, ಕೇಶ್ಯ ಎಂದು ಕರೆದಿದ್ದಾರೆ. ಅಂದರೆ ಎಳ್ಳು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ; ದೇಹಕ್ಕೆ ಬಲವನ್ನು ನೀಡುತ್ತದೆ ಮತ್ತು ಕೂದಲು ಚೆನ್ನಾಗಿ ಬೆಳೆಯಲು ಸಹಕರಿಸುತ್ತದೆ ಎಂದರ್ಥ. 100 ಗ್ರಾಂ ಎಳ್ಳಿನಲ್ಲಿ 975 ಮಿಲಿಗ್ರಾಂ ಕ್ಯಾಲ್ಸಿಯಂ ನಮಗೆ ಸಿಗುತ್ತದೆ ಅಂದರೆ 100 ಗ್ರಾಂ ಎಳ್ಳು ಒಬ್ಬ ಮನುಷ್ಯನಿಗೆ ಇಡೀ ದಿನಕ್ಕೆ ಬೇಕಾದ ಕ್ಯಾಲ್ಸಿಯಂ ನ 97% ಅನ್ನು ನೀಡುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ವಿಟಮಿನ್ ಬಿ6, ಮೆಗ್ನೀಷಿಯಂ, ನಾರಿನಂಶ, ಪೋ›ಟೀನ್, ಕಬ್ಬಿಣ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಹೀಗಾಗಿ ಎಳ್ಳನ್ನು ನಿತ್ಯವೂ ನಾವು ಸೇವಿಸಬೇಕು. ಇದಕ್ಕೆ ಬೇರೆ ಬೇರೆ ರೀತಿಯ ನಟ್​ಗಳು ಮತ್ತು ಬೀಜಗಳನ್ನು ಹಾಕಿ ಸಾವಯವ ಬೆಲ್ಲ ಬಳಸಿ ಎಳ್ಳುಂಡೆ ತಯಾರಿಸಿ ಸೇವಿಸಬಹುದು. ಅಡುಗೆಯಲ್ಲಿ, ಫ್ರುಟ್ ಸಲಾಡ್ ಜೊಜೊತೆ, ಜ್ಯೂಸ್​ಗಳ ಜೊತೆ ಸೇವಿಸಬಹುದು. ದಿನಕ್ಕೆ ಒಂದರಿಂದ ಎರಡು ಚಮಚದಷ್ಟು ಸೇವಿಸಿದರೆ ಉತ್ತಮ ಪ್ರಯೋಜನವಾಗುತ್ತದೆ.

ಕುಂಬಳ ಬೀಜ: ಕುಂಬಳ ಬೀಜದಲ್ಲಿ ಆಂಟಿ ಆಕ್ಸಿಡೆಂಟ್​ಗಳು ಮತ್ತು ಆರೋಗ್ಯಕರ ಕೊಬ್ಬು ಇರುವ ಕಾರಣ ಇದು ರಕ್ತದೊತ್ತಡ, ಹೃದಯದ ಸಮಸ್ಯೆಗಳು ಮತ್ತು ಕೊಲೆಸ್ಟ್ರಾಲ್ ತೊಂದರೆಗಳಲ್ಲಿ ಅನುಕೂಲ ಮಾಡಿಕೊಡುತ್ತದೆ. ಮ್ಯಾಗ್ನಿಷಿಯಂ ದೊಡ್ಡ ಪ್ರಮಾಣ ದಲ್ಲಿ ಇರುವ ಕಾರಣದಿಂದ ಮೂಳೆಗಳು ಚೆನ್ನಾಗಿ ತಯಾರಾಗಲು ಮತ್ತು ಮೂಳೆಗಳ ಆರೋಗ್ಯ ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ. ಎಲ್ಲಾ ಬೀಜಗಳಲ್ಲಿಯೂ ಸಾಮಾನ್ಯವಾಗಿ ಇರುವಂತೆ ಕುಂಬಳ ಬೀಜದಲ್ಲಿ ಕೂಡಾ ಜಿಂಕ್ ಹೇರಳವಾಗಿದೆ. ಹೀಗಾಗಿ ಇದರ ಸೇವನೆಯಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸುಲಭವಾಗಿ ಸೋಂಕು ತಗಲಲು ಸಾಧ್ಯವಿಲ್ಲ. ಇದರಲ್ಲಿ ಟ್ರಿಪೋ›ಫ್ಯಾನ್ ಎಂಬ ಅಮೈನೋ ಆಸಿಡ್ ಚೆನ್ನಾಗಿ ಇರುವುದರಿಂದ ನಿದ್ರಾಹೀನತೆ ನಿವಾರಣೆಗೂ ಅನುಕೂಲಕರ. ವಿಟಮಿನ್ ಇ ಮತ್ತು ಜಿಂಕ್ ಸುಂದರವಾದ ಚರ್ಮ ಮತ್ತು ಕೂದಲಿಗೆ ಕಾರಣವಾಗುತ್ತವೆ. ನಾರಿನ ಅಂಶವೂ ಇರುವ ಕಾರಣದಿಂದ ಹೆಚ್ಚಾದ ತೂಕ ಇಳಿಸುವಲ್ಲಿ ಮತ್ತು ಮಲಬದ್ಧತೆಯಲ್ಲಿ ಸಹಾಯ ಮಾಡುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಹೃದಯದ ಆರೋಗ್ಯವನ್ನು ಕಾಪಾಡಲು ಪ್ರತಿನಿತ್ಯ ಕಾಲು ಕಪ್ ನಷ್ಟು ಕುಂಬಳ ಬೀಜಗಳನ್ನು ಸೇವಿಸಲು ಶಿಫಾರಸ್ಸು ಮಾಡುತ್ತದೆ. ಇದನ್ನು ಫೂ›ಟ್ ಸಲಾಡ್ ಜೊತೆಗೆ ಮೊಳಕೆ ಕಾಳುಗಳ ಜೊತೆಗೆ ಅಥವಾ ಹಾಗೇ ಕೂಡಾ ಸೇವಿಸಬಹುದು. ಹೊಟ್ಟೆ ಖಾಲಿ ಇರುವಾಗ ಅಥವಾ ಊಟದ ಪ್ರಾರಂಭದಲ್ಲಿ ಸೇವಿಸುವುದು ಹೆಚ್ಚು ಸೂಕ್ತ.

ಖರ್ಬೂಜದ ಬೀಜ: ಸುಮಾರು 8 ರಿಂದ 10 ಖರ್ಬೂಜದ ಬೀಜಗಳನ್ನು ನಿತ್ಯ ಸೇವಿಸುವುದರಿಂದ ಮೂತ್ರದ ಸಮಸ್ಯೆಗಳು, ಕಫಕ್ಕೆ ಸಂಬಂಧಪಟ್ಟ ತೊಂದರೆಗಳು, ಹೊಟ್ಟೆಯಲ್ಲಿನ ಕ್ರಿಮಿಗೆ ಸಂಬಂಧಪಟ್ಟ ಸಮಸ್ಯೆಗಳಲ್ಲಿ ಸಹಾಯವಾಗುತ್ತದೆ. ಇದರಲ್ಲಿ ತಾಮ್ರ, ಫಾಸ್ಪರಸ್ , ಕಬ್ಬಿಣ, ವಿಟಮಿನ್ ಎ, ಬಿ1, ಬಿ2 ಮತ್ತು ವಿಟಮಿನ್ ಸಿಗಳು ಹೇರಳವಾಗಿವೆ. ಇದರಿಂದಾಗಿ ಬೇಸಿಗೆಯಲ್ಲಿ ದೌರ್ಬಲ್ಯದ ಸಮಸ್ಯೆಯನ್ನು ಅನುಭವಿಸುವವರು ಇದನ್ನು ಹೆಚ್ಚಾಗಿ ಉಪಯೋಗಿಸಬಹುದು. ಕರಬೂಜದ ಬೀಜಗಳು ಕಣ್ಣಿನ ಆರೋಗ್ಯಕ್ಕೆ ವರದಾನದಂತೆ ಕೆಲಸ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಹೇರಳವಾಗಿ ವಿಟಮಿನ್ ಎ ಸಿಗುತ್ತದೆ. ಜೊತೆಗೆ ಬೀಟಾ ಕೆರೆಟಿನ್, ಜಿಯಾಕ್ಸಾಂಥಿನ್ ನಂತಹ ಆಂಟಿ ಆಕ್ಸಿಡೆಂಟ್​ಗಳು ಹೇರಳವಾಗಿರುವ ಕಾರಣ ದೃಷ್ಟಿ ಚುರುಕಾಗುವಂತೆ ಮಾಡುತ್ತವೆ.

ಅಗಸೆ ಬೀಜ: ಅಗಸೆ ಬೀಜದ ಲಾಭಗಳ ಬಗ್ಗೆ ಹೇಳಿ ಮುಗಿಸಲು ಸಾಧ್ಯವಿಲ್ಲ. ಥಿಯಾಮೀನ್, ಒಮೆಗಾ 3, ತಾಮ್ರ, ಮ್ಯಾಂಗನೀಸ್, ಮೆಗ್ನೀಶಿಯಂ, ಫಾಸ್ಪರಸ್, ಸೆಲಿನಿಯಂ, ಜಿಂಕ್, ವಿಟಮಿನ್ ಬಿ6 ಮುಂತಾದ ಎಷ್ಟೋ ರೀತಿಯ ಪೋಷಕಾಂಶಗಳು ಇದರಲ್ಲಿವೆ. ಒಮೆಗಾ ತ್ರೀ ಹೇರಳವಾಗಿರುವುದರಿಂದ ಉರಿಯೂತವನ್ನು ತಡೆಯುತ್ತದೆ. ಕ್ಯಾನ್ಸರ್ ವಿರುದ್ಧ ಕೂಡಾ ಪರಿಣಾಮಕಾರಿ ಎಂದು ಸಂಶೋಧನೆಗಳು ಹೇಳುತ್ತವೆ. ಪ್ರತಿದಿನ ಒಂದು ಅಥವಾ ಎರಡು ಚಮಚದಷ್ಟು ಬೀಜಗಳನ್ನು ಮಜ್ಜಿಗೆಯ ಜೊತೆ ಅಥವಾ ಫ್ರೂಟ್ ಸಲಾಡ್ ಜೊತೆ ಸೇವಿಸಬಹುದು.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net