

ಬೆಂಗಳೂರು: ಮುಡಾ ಪ್ರಕರಣದಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ ತೀರ್ಪನ್ನು ದೆಹಲಿಯಲ್ಲಿ ಹಿರಿಯ ವಕೀಲರದಿಂದ ವಿಶ್ಲೇಷಣೆಗೊಳಪಡಿಸಿರುವ ಮುಖ್ಯಮಂತ್ರಿಯವರ ಕಾನೂನು ತಂಡ, ಮುಂದಿನ ಹೋರಾಟಕ್ಕೆ ತಯಾರಿ ನಡೆಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ, ಯಾವಾಗ ಮೇಲ್ಮನವಿ ಸಲ್ಲಿಸಬೇಕು ಎಂದು ಇನ್ನೂ ತೀರ್ಮಾನ ಮಾಡಿಲ್ಲ. ಅಭಿಷೇಕ್ ಸಿಂಘ್ವಿಯವರ ಅಭಿಪ್ರಾಯ ಕೂಡ ಪಡೆದುಕೊಂಡಿದ್ದೇವೆ. ಏಕಸದಸ್ಯ ಪೀಠ ಹೇಳಿದ್ದೇ ಅಂತಿಮ ಅಲ್ಲ, ಕಲ್ಲಿನ ಮೇಲೆ ಕೆತ್ತಿದಂತೆ ಇದನ್ನು ಸ್ವೀಕಾರ ಮಾಡಲು ಸಾಧ್ಯವಿಲ್ಲ ಎಂದರು.
ಸುಪ್ರಿಂಕೋರ್ಟ್ ತೀರ್ಪು ನೀಡಿದರೆ ಮಾತ್ರ ಅದು ಕಾನೂನು ಆಗುತ್ತದೆ. ಇಲ್ಲದಿದ್ದರೆ ಅದನ್ನು ಅಂತಿಮ ಎಂದು ತೀರ್ಮಾನಿಸಲು ಆಗುವುದಿಲ್ಲ ಎಂದ ಅವರು ಈಗ ಕೋರ್ಟ್ ತೀಪರ್ು ಅಧ್ಯಯನ ಮಾಡಿದ್ದೇವೆ. ಕಾನೂನಾತ್ಮಕ ಲೋಪ ದೋಷಗಳಿವೆ ಎಂಬುದು ಗೊತ್ತಾಗಿದೆ. ನ್ಯಾಯಮೂರ್ತಿಗಳು ಸಿಎಂ ಪಾತ್ರ ಏನು ಎಂದು ಕೇಳಿದ್ದರು. ಅದಕ್ಕೆ ತೀರ್ಪಿನಲ್ಲೂ ಉತ್ತರವಿಲ್ಲ ಎಂದು ಹೇಳಿದರು.
ಯಾರೂ ಕೂಡ ಸಿಎಂ ಪಾತ್ರದ ಬಗ್ಗೆ ತೋರಿಸಲು ಆಗಿಲ್ಲ. ರಾಜಕೀಯ ಪ್ರೇರಿತ ಪ್ರಕರಣ ಇದು. ತನಿಖೆಯ ವಿಚಾರಣೆ ಏನು ಬೇಕಾದರೂ ಮಾಡಿಕೊಳ್ಳಲಿ, ವಿಚಾರಣೆ ಆಗಲಿ ತನಿಖೆ ಆಗಲಿ ನಮ್ಮದೇನೂ ಅಭ್ಯಂತರ ಇಲ್ಲ ಎಂದ ಅವರು ದೆಹಲಿಯ ವಕೀಲರ ಅಭಿಪ್ರಾಯ ಕೂಡ ಪಡೆದುಕೊಂಡಿದ್ದೇವೆ. ತೀರ್ಪಿನಲ್ಲಿಯೇ ಹಲವು ಲೋಪದೋಷಗಳಿವೆ. ನಾವು ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.