ಮಳೆ ಫಜೀತಿ ಕಾಡುತ್ತಿದೆ ರೋಗಗಳ ಭೀತಿ

Nayakanahatti
ನಾಯಕನಹಟ್ಟಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಗುರು ತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ಬಲಕೋಡಿಯಲ್ಲಿ ಅಪಾರ ಪ್ರಮಾಣದ ನೀರು ಹೊರಹೋಗುತ್ತಿರುವುದು. ರಾಜ್ಯ ಹೆದ್ದಾರಿ 45 ಸಂಪೂರ್ಣ ಸ್ಥಗಿತ ಗೊಂಡಿದೆ.
Published on

ಬೆಂಗಳೂರು: ರೈತಾಪಿ ಜನರು ಹೇಳುವಂತೆ ‘ಕುರುಡು ಚಿತ್ತೆ’ ಎಂಬ ಮಾತಿಗೆ ಅನ್ವರ್ಥವಾಗಿ ಸುರಿಯುತ್ತಿರುವ ಚಿತ್ತಾ ಮಳೆ ಅರ್ಧ ಬೆಂಗಳೂರನ್ನು ಮುಳುಗಿಸಿದ್ದು, ರಾಜ್ಯದ ವಿವಿಧೆಡೆ ಸಾವಿರಾರು ಹೆಕ್ಟೇರ್ ಬೆಳೆಯನ್ನು ಆಪೋಷನ ಪಡೆದಿದೆ. ಮಳೆ ಸಂಬಂಧಿತ ಅವಘಡಗಳಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಓರ್ವ ಕಾರ್ವಿುಕ ಬಲಿಯಾಗಿದ್ದಾನೆ. ಸುಮಾರು 10 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕೆಲ ಜಿಲ್ಲೆಗಳಲ್ಲಿ ಸೂರ್ಯನ ದರ್ಶನವೇ ಆಗಿಲ್ಲ. ಅದರಲ್ಲೂ ಬೆಂಗಳೂರಿನ ಅನೇಕ ಬಡಾವಣೆಗಳೂ ಜಲಾವೃತವಾಗಿದ್ದು, ಬೋಟ್​ಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

13 ಜಿಲ್ಲೆಗಳಿಗೆ ಅಲರ್ಟ್: ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಇನ್ನೂ 3 ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲ ಜಿಲ್ಲೆಗಳಲ್ಲಿ ಬುಧವಾರ (ಅ.23) ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅ.25ರ ವರೆಗೆ ಮಳೆ ನಿರೀಕ್ಷಿಸಲಾಗಿದೆ. ನಂತರದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದೆ.

ಹಳ್ಳಕೊಳ್ಳ ಭರ್ತಿ: ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದ ನಾಯಕನಹಟ್ಟಿ ಹೋಬಳಿಯಲ್ಲಿ ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ತುಂಬಿದ್ದು, ಕೆಲವೆಡೆ ರಸ್ತೆ ಸಂಪರ್ಕ ಕಡಿತವಾಗಿವೆ. ಮೊಳಕಾಲ್ಮೂರು ತಾಲೂಕಿನ ರಂಗಯ್ಯನದುರ್ಗ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಕ್ರಸ್ಟ್ ಗೇಟ್​ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದೆ.

ಇಡೀ ಗ್ರಾಮವೇ ಜಲಾವೃತ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಸಿಡಿಲು ಬಡಿದು 21 ಕುರಿಗಳು ಮತ್ತು ಎರಡು ಮೇಕೆಗಳು ಬಲಿಯಾಗಿವೆ. ಮಹಾದೇವಪುರದಲ್ಲಿ ಗೋಕಟ್ಟೆ ಕೊಚ್ಚಿ ಹೋಗಿ ಇಡೀ ಗ್ರಾಮ ಜಲಾವೃತವಾಗಿದೆ. ಅಲ್ಲದೆ, ಹುಲಿಕೆರೆ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು 15 ಮನೆಗಳಿಗೆ ನೀರು ನುಗ್ಗಿದೆ. ನೂರಾರು ಎಕರೆಯಲ್ಲಿ ಶೇಂಗಾ ಬೆಳೆ ಜಲಾವೃತವಾಗಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ 90 ಸಾವಿರ ಕ್ಯೂಸೆಕ್​ಗಿಂತ ಹೆಚ್ಚು ನೀರು ಬಿಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲಿನ ವಾಹನ ಸಂಚಾರ ಮಂಗಳವಾರ ಮಧ್ಯಾಹ್ನದಿಂದ ನಿಷೇಧಿಸಲಾಗಿದೆ.

Rain

ಜೀವ ಉಳಿಸಿತು ಮರದ ಬೇರು!: ಕಲಘಟಗಿ ತಾಲೂಕಿನ ಬೇಗೂರು ಬಿಸರಳ್ಳಿ, ಹಿರೇಹೊನ್ನಿಹಳ್ಳಿ ಗ್ರಾಮ ಸಂರ್ಪಸುವ ಮಧ್ಯಭಾಗದಲ್ಲಿ ರುವ ಹಳ್ಳ ತುಂಬಿ ಹರಿಯುತ್ತಿದ್ದು, ನೀರನ್ನು ಲೆಕ್ಕಿಸದೆ ಕಾರು ಚಲಾಯಿಸಿದ ವ್ಯಕ್ತಿಯೊಬ್ಬ ವಾಹನ ಸಮೇತ ಕೊಚ್ಚಿಕೊಂಡು ಹೋಗಿ, ಮರದ ಬೇರು ಹಿಡಿದು ಬದುಕುಳಿದಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ. ಪುಡಕಲಕಟ್ಟಿ ಗ್ರಾಮದ ನಾಗರಾಜ ದೇವಣ್ಣವರ ಬಚಾವಾದವರು.

ಆರೋಗ್ಯದ ಕಾಳಜಿವಹಿಸಿ: ಹಿಂಗಾರು ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿಗಳು ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ತಗ್ಗುಪ್ರದೇಶ, ಕೊಳೆಗೇರಿ ಸೇರಿ ಹಲವು ಪ್ರದೇಶಗಳಲ್ಲಿ ಮನೆಯೊಳಗೆ ಹಾಗೂ ಸಂಪುಗಳಿಗೆ ನೀರು ನುಗ್ಗಿದೆ. ಇದರಿಂದ ಡೆಂಘ, ಕಾಲರ ಹಾಗೂ ವೈರಾಣು ಜ್ವರ ಹರಡುವ ಆತಂಕ ಮೂಡಿಸಿದೆ. ಸದ್ಯ ತಣ್ಣನೆಯ ವಾತಾವರಣ ಇರುವುದರಿಂದ ಜನರು ಆರೋಗ್ಯದ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಗದ್ದೆ, ತೋಟ ಜಲಾವೃತ: ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹಾಗೂ ಬಾಳೆಹೊನ್ನೂರು ಭಾಗದಲ್ಲಿ ಭಾರಿ ಮಳೆಯಾಗಿದೆ. ಬಾಳೆಹೊನ್ನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭತ್ತದ ಗದ್ದೆ ಹಾಗೂ ಕಾಫಿ ತೋಟ ಜಲಾವೃತವಾಗಿವೆ. ಹಾಸನ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನನ್ನು ರಕ್ಷಿಸಲಾಗಿದೆ.

ಕೆರೆಗಳಿಗೆ ಜೀವಕಳೆ: 3673 ಸಣ್ಣ ನೀರಾವರಿ ಕೆರೆಗಳಲ್ಲಿ ಶೇ.30 ಕೆರೆಗಳು ಶೇ.50 ಭರ್ತಿಯಾಗಿವೆ. ಶೇ.53 ಕೆರೆಗಳಲ್ಲಿ ಶೇ.39ರಿಂದ 50 ಮತ್ತು ಇನ್ನು ಳಿದ ಕೆರೆಗಳಲ್ಲಿ ನೀರು ಸಂಗ್ರಹಣೆ ಪ್ರಮಾಣ ಕ್ಷೀಣ/ಇಲ್ಲವೇ ಒಣಗಿದ ಸ್ಥಿತಿಯಲ್ಲಿವೆ.

ಬೆಂಗ್ಳೂರಲ್ಲಿ 1000 ಮನೆಗಳು ಜಲಾವೃತ: ರಾಜಧಾನಿಯ 1000 ಮನೆಗಳಿಗೆ ಮಳೆನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಯಲಹಂಕ, ಜಕ್ಕೂರು, ಕೋಗಿಲು, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಕೊಡಿಗೇಹಳ್ಳಿ, ಟಾಟಾನಗರ ಸೇರಿ 25ಕ್ಕೂ ಹೆಚ್ಚು ಬಡಾವಣೆಗಳಲ್ಲಿನ ಕುಟುಂಬಗಳಿಗೆ ಆಹಾರ ವಿತರಿಸಲಾಗಿದೆ. ಕೇಂದ್ರೀಯ ವಿಹಾರ್ ಅಪಾರ್ಟ್​ವೆುಂಟ್​ನಲ್ಲಿ 2 ಸಾವಿರ ಜನರಿದ್ದು, ಅಷ್ಟೂ ಜನರನ್ನು ಸ್ಥಳಾಂತರಿಸಲಾಗಿದೆ.

Rain
ಬೆಳೆ ಹಾನಿ ಜಂಟಿ ಸಮೀಕ್ಷೆಗೆ ಸೂಚನೆ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಕೈಗೆ ಬಂದ ಫಸಲು ನೀರಿನಲ್ಲಿ ಮುಳುಗಿ ಹಾಳಾಗಿರುವುದಕ್ಕೆ ಅನ್ನದಾತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಟೀಕೆ-ಟಿಪ್ಪಣಿಗಳ ನಡುವೆ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಬೆಳೆ ಹಾಗೂ ಸಂಭವನೀಯ ಬೆಳೆ ನಷ್ಟದ ಜಂಟಿ ಸಮೀಕ್ಷೆಗೆ ಸೂಚಿಸಿದ್ದಾರೆ. ಆಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನೈಸರ್ಗಿಕ ವಿಪತ್ತು ಉಸ್ತುವಾರಿ ಸಮಿತಿಗಳಿಗೆ ಜವಾಬ್ದಾರಿ ಒಪ್ಪಿಸಿದ್ದು, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮಿತಿಯಲ್ಲಿರುತ್ತಾರೆ. ಕೃಷಿ ಸಚಿವರ ಕೈಸೇರಿದ ತಾತ್ಕಾಲಿಕ ವರದಿಯಂತೆ 30 ಸಾವಿರ ಎಕರೆ ಪ್ರದೇಶದಲ್ಲಿದ್ದ ಬೆಳೆ ಹಾನಿಗೀಡಾಗಿದೆ. ನೀರಿನಲ್ಲಿ ನಿಂತ ಪ್ರಮಾಣವೂ ಹೆಚ್ಚಿದ್ದು, ಜಂಟಿ ಪರಿಶೀಲನೆ ನಂತರ ವಾಸ್ತವಿಕ ಹಾನಿ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ. ಹತ್ತಿ, ಭತ್ತ, ಮೆಕ್ಕಜೋಳ, ಶೇಂಗಾ, ತೊಗರಿ, ಕಬ್ಬು, ಮೆಣಸಿನ ಕಾಯಿ, ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೊ ಹಾನಿಗೀಡಾಗಿದ್ದರೆ, ಬಿತ್ತನೆ ಮಾಡಿರುವುದು ಕೊಳೆತುಹೋಗಿದೆ. ಹಿಂಗಾರು ಹಂಗಾಮಿ ನಲ್ಲಿ ಬಿತ್ತಿದ ಕಡಲೆ ಮೊಳಕೆಯೊಡೆದಿಲ್ಲ, ಬಹುತೇಕ ಕಡೆ ಬಿತ್ತನೆ ಸಾಧ್ಯವಾಗದೆ ರೈತರು ಕೈಕಟ್ಟಿ ಕುಳಿತುಕೊಳ್ಳು ವಂತಾಗಿದೆ. ಬಹಳಷ್ಟು ಹೊಲ, ಗದ್ದೆ, ತೋಟಗಳಲ್ಲಿ ನೀರು ನಿಂತಿವೆ. ಮಳೆ ನಿಂತು, ನೀರು ಇಳಿದು ಹೋದ ಬಳಿಕ ಇನ್ನೂ ಕೆಲವು ಬೆಳೆಗಳ ನೈಜ ಸ್ಥಿತಿಗತಿ ಗೊತ್ತಾಗಲಿದೆ ಎಂಬ ಮಾಹಿತಿಯು ಕೃಷಿ ಸಚಿವರಿಗೆ ತಲುಪಿದೆ. ಕೆಲವು ಜಿಲ್ಲೆಗಳಲ್ಲಿ ಹೊಲ, ಗದ್ದೆ, ತೋಟಗಳು ಜಲಾವೃತವಾಗಿ ಬೆಳೆಗಳು ನಷ್ಟವಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ತಹಸೀಲ್ದಾರ್, ಸಹಾಯಕ ಆಯುಕ್ತರು ವರದಿ ತರಿಸಿಕೊಂಡು ಪರಿಹಾರ ನೀಡಲು ಕ್ರಮಕೈಗೊಳ್ಳ ಬೇಕು ಎಂದು ಚಲುವರಾಯಸ್ವಾಮಿ ಸೂಚಿಸಿದ್ದಾರೆ.

ಮಳೆ ಕಾರಣದಿಂದ ಆಗಿರá-ವ ಪ್ರಕೃತಿ ವಿಕೋಪಕ್ಕೆ ಪರಿಹಾರ ನೀಡಲಾಗá-ವುದು. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಅನಾಹುತಗಳ ಕುರಿತು ನಿಗಾ ವಹಿಸಿದ್ದೇವೆ. ಅನಾಹá-ತ ತಡೆಗಟ್ಟುವ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸ್ಥಳ ಸಮೀಕ್ಷೆ ಕೂಡ ನಡೆಯುತ್ತಿದೆ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net