ನೌಕರಿ ಕೊಡಿಸುವುದಾಗಿ ವಂಚಿಸಿದ ಮಹಿಳೆ ಹಿಂದಿದೆ ದೊಡ್ಡ ಜಾಲ

Social worker
ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಹೀಂ
Published on

ಶಿವಮೊಗ್ಗ: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ರಿಪ್ಪನ್‌ಪೇಟೆಯ ಮಹಿಳೆ ಮತ್ತು ಆಕೆಯ ಪತಿ ನಂಬಿಸಿ ಹಲವರಿಗೆ ಲಕ್ಷಾಂತರ ರೂ. ವಂಚನೆ ಜಾಲ ರಾಜ್ಯಾದ್ಯಂತ ವಿಸ್ತಾರವಾಗಿದ್ದು ಈ ಬಗ್ಗೆ ದೊಡ್ಡಮಟ್ಟದ ತನಿಖೆ ಆಗಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಹೀಂ ಒತ್ತಾಯಿಸಿದರು.

ವಂಚಕಿ 37 ವರ್ಷದ ರಾಜಕೀಯ ಪಕ್ಷವೊಂದರ ಕಾರ್ಯಕರ್ತೆ ಆಗಿದ್ದು ಅಮಾಯಕ ಯುವಕರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮತ್ತು ರೈಲ್ವೆ ಇಲಾಖೆ ಟೆಂಡರ್ ಕೊಡಿಸುವುದಾಗಿ ಹೇಳಿ ಅವರಿಗೆ ಲಕ್ಷಾಂತರ ರೂ. ವಂಚಿಸಿದ್ದಾಳೆ. ಈ ಬಗ್ಗೆ ರಿಪ್ಪನ್‌ಪೇಟೆ, ಹುಬ್ಬಳ್ಳಿ ಮತ್ತು ಬಾಗಲಕೋಟೆಯಲ್ಲೂ ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹಿಳೆಯ ಗಂಡ ರೈಲ್ವೆ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆಂದು ಸುಳ್ಳು ಹೇಳಿ ಅವರ ನಕಲಿ ಗುರುತಿನ ಕಾರ್ಡ್ ತೋರಿಸಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶಿವಮೊಗ್ಗದ ಮಲವಗೊಪ್ಪ ಮತ್ತು ತೀರ್ಥಹಳ್ಳಿಯ ಯುವಕನಿಗೆ 14 ಲಕ್ಷ ರೂ. ವಂಚಿಸಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಗಾರ್ಮೆಂಟ್ಸ್ ಮತ್ತು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದು ಬಿಬಿಎಂಪಿ ಅಧಿಕಾರಿ ಕೂಡ ತನ್ನ ಪತಿಯೆಂದು ಕೆಲವರಿಗೆ ನಂಬಿಸಿ ಅವರಿಂದಲೂ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು.
ಎಫ್‌ಐಆರ್ ದಾಖಲಾಗುತ್ತಿದ್ದಂತೆ ಆರೋಪಿಗಳಿಬ್ಬರು ನಾಪತ್ತೆಯಾಗಿದ್ದಾರೆ. ಇದರ ಹಿಂದೆ ದೊಡ್ಡ ಜಾಲವಿದ್ದು ಹಲವೆಡೆ ಜನರಿಗೆ ಮೋಸ ಮಾಡಿದ್ದು ಬೆಳಕಿಗೆ ಬರುತ್ತಿದೆ. ನಕಲಿ ಐಡಿ ತೋರಿಸಿ ವಿವಿಧ ರೀತಿಯಲ್ಲಿ ಅಮಾಯಕರನ್ನು ವಂಚಿಸುತ್ತಿದ್ದಾರೆ. ಕೆಲವರಿಗೆ ಉದ್ಯೋಗದ ನಕಲಿ ಆದೇಶ ಪತ್ರವನ್ನೂ ನೀಡಿ ಹಣ ಪಡೆದಿದ್ದಾರೆ. ಆದ್ದರಿಂದ ಈ ವಂಚಕರ ಇಡೀ ತಂಡವನ್ನು ಬೇಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಹಾಗೂ ಹಣ ಕಳೆದುಕೊಂಡವರಿಗೆ ನ್ಯಾಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಪ್ರಮುಖರಾದ ಸೀಮಾ ಸೆರಾವೋ, ರಾಘವೇಂದ್ರ, ಸತೀಶ್, ಶ್ರೀಕಾಂತ್, ನವೀನ್, ಆದರ್ಶ್, ಅರ್ಜುನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net