

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 182 ರಾಷ್ಟ್ರಗಳ ಮೇಲೆ ಪಾರಸ್ಪರಿಕ ತೆರಿಗೆ ಹೇರಿರುವ ಕ್ರಮದಿಂದ ಜಗತ್ತಿನಾದ್ಯಂತ ಷೇರುಪೇಟೆಗಳು ಕಂಪಿಸಿವೆ. ಸೋಮವಾರ ಭಾರತದ ಷೇರುಪೇಟೆ ಕೂಡ ಮಹಾಪತನ ಕಂಡಿದ್ದರಿಂದ ಹೂಡಿಕೆದಾರರ 20 ಲಕ್ಷ ಕೋಟಿ ರೂ. ಸಂಪತ್ತು ಕೆಲವೇ ಕ್ಷಣಗಳಲ್ಲಿ ಕರಗಿಹೋಯಿತು. ಆದರೆ, ಭಾರತೀಯ ಷೇರುಪೇಟೆ ಮುಗ್ಗರಿಸಿದ ಬಳಿಕ ಅಷ್ಟೇ ವೇಗವಾಗಿ ಚೇತರಿಸಿಕೊಳ್ಳುತ್ತದೆ ಎಂಬುದಕ್ಕೆ ಕಳೆದ ಕೆಲ ವರ್ಷಗಳ ಮಾರುಕಟ್ಟೆ ಓಟ ಸಾಕ್ಷಿಯಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.
ಅದು 2004ರ ಮೇ ತಿಂಗಳು. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದೇ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು. ಬಹುತೇಕ ಜನರು ಕೂಡ ಹೀಗೇ ಊಹಿಸಿದ್ದರು. ಆದರೆ, ಲೋಕಸಭಾ ಚುನಾವಣೆಯ ಫಲಿತಾಂಶ ಇದಕ್ಕೆ ವ್ಯತಿರಿಕ್ತವಾಗಿತ್ತು. ವಾಜಪೇಯಿ ಅವರು ಅಧಿಕಾರ ಕಳೆದುಕೊಂಡು, ಜನಾದೇಶ ಯುಪಿಎ ಕಡೆ ವಾಲಿತ್ತು. ಆಗ ರಾಜಕೀಯ ಅನಿಶ್ಚಿತತೆಯ ಆತಂಕದಿಂದ ಷೇರುಪೇಟೆ ನಲುಗಿ, ಮೇ 17ರಂದು 16% ಕುಸಿಯಿತು. ಇದು ಷೇರುಪೇಟೆಯಲ್ಲಿ ಇದುವರೆಗೆ ಒಂದೇ ದಿನದಲ್ಲಿ ಸಂಭವಿಸಿದ ಅತಿ ಗರಿಷ್ಠ ಕುಸಿತ. ಆ ಬಳಿಕ 2020ರ ಮಾರ್ಚ್ನಲ್ಲಿ ಕರೊನಾ ಆತಂಕ ಎಲ್ಲ ಕಡೆ ವ್ಯಾಪಿಸಿಕೊಂಡಿತು. ಮಾರ್ಚ್ 23ರಂದು ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಷೇರುಪೇಟೆ 13.15%ರಷ್ಟು ಕುಸಿಯಿತು. ಇದು ಈವರೆಗಿನ ಎರಡನೇ ದೊಡ್ಡ ಕುಸಿತ.
ಭಾರತೀಯ ಷೇರುಪೇಟೆ ಕಾಲಕಾಲಕ್ಕೆ ಕುಸಿತ ಕಂಡರೂ ಬೇಗನೆ ಸಾವರಿಸಿಕೊಂಡು ಚೇತರಿಕೆಯ ಹಾದಿಯಲ್ಲಿ ಸಾಗಿರುವುದು ವಿಶೇಷ. ಮೊದಲೆಲ್ಲ, ಚೇತರಿಕೆಗೆ ಕೆಲ ವರ್ಷ ತೆಗೆದುಕೊಳ್ಳುತ್ತಿದ್ದ ಷೇರುಪೇಟೆ ಈಗ ಕೆಲವೇ ತಿಂಗಳುಗಳಲ್ಲಿ ಮೊದಲಿನ ಸ್ಥಿತಿಗೆ ತಲುಪುತ್ತಿದೆ ಎಂಬುದು ಗಮನಾರ್ಹ. ವಾಸ್ತವದಲ್ಲಿ ಷೇರುಪೇಟೆ ಅಪ್ಪಟ ವಾಣಿಜ್ಯ ವಹಿವಾಟು ಆಗಿದ್ದರೂ, ಇದು ಭಾವನೆಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ, ಭಾರತದೊಳಗಿನ ಬೆಳವಣಿಗೆಗಳು ಮಾತ್ರವಲ್ಲದೆ, ಹೊರದೇಶಗಳಲ್ಲಿನ ಘಟನೆಗಳೂ ಪರಿಣಾಮ ಬೀರುತ್ತವೆ. ಯುದ್ಧಭೀತಿ, ಸಾಂಕ್ರಾಮಿಕ ಕಾಯಿಲೆ, ಹಣದುಬ್ಬರ ಹೆಚ್ಚಳ, ರಾಜಕೀಯ ನೇತೃತ್ವ ಬದಲಾವಣೆ, ಆರ್ಥಿಕ ಹಿಂಜರಿತ ಇಂಥ ಸಂದರ್ಭಗಳಲ್ಲೆಲ್ಲ ಷೇರುಪೇಟೆಯಲ್ಲಿ ‘ಕರಡಿ’ಯದ್ದೇ ಕಾರುಬಾರು. ಆದರೆ, ಕುಸಿತ ಕಂಡಾಗ ಹೂಡಿಕೆದಾರರು ಧೃತಿಗೆಡದೆ ತಾಳ್ಮೆ ವಹಿಸುವುದೇ ಜಾಣತನ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಮಾರುಕಟ್ಟೆ ಕುಸಿತ ದೀರ್ಘಾವಧಿಗೆ ಮುಂದುವರಿಯಲಾರದು, ಪಾರಸ್ಪರಿಕ ತೆರಿಗೆ ಪರಿಣಾಮದ ಚಿತ್ರಣ ಕೆಲ ದಿನಗಳಲ್ಲಿ ಸ್ಪಷ್ಟಗೊಂಡ ಬಳಿಕ ಷೇರುಪೇಟೆ ಹಳಿಗೆ ಮರಳಲಿದೆ ಎಂಬುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ.
ಎಸ್ ಆಂಡ್ ಪಿ 500 ಇಂಡೆಕ್ಸ್ನ ಮಾರುಕಟ್ಟೆ ಮೌಲ್ಯ ಸೋಮವಾರದಂದು ಶೇ.3.44ರಷ್ಟು ಕುಸಿಯಿತು. ಅಂದರೆ 1.47 ಟ್ರಿಲಿಯನ್ ಡಾಲರ್ ಕುಸಿದು 41.20 ಟ್ರಿಲಿಯನ್ ಡಾಲರ್ಗೆ ತಲುಪಿದೆ. ಏಪ್ರಿಲ್ 4ರಂದು 42.678 ಟ್ರಿಲಿಯನ್ ಡಾಲರ್ಗೆ ತಲುಪಿತ್ತು. ಇದಕ್ಕೂ ಮುನ್ನ ಏ.3ರಂದು ಮಾರುಕಟ್ಟೆ ಮೌಲ್ಯ, 45.3888ಟ್ರಿಲಿಯನ್ ಡಾಲರ್, ಏ.2ರಂದು 47.681 ಟ್ರಿಲಿಯನ್ ಡಾಲರ್ ಇತ್ತು. ವಹಿವಾಟಿನ ನಾಲ್ಕು ದಿನಗಳಲ್ಲೇ ಮಾರುಕಟ್ಟೆ ಮೌಲ್ಯ 6.5 ಟ್ರಿಲಿಯನ್ ಡಾಲರ್ನಷ್ಟು ಕರಗಿದೆ.
ಯಾವುದನ್ನು ದಶಕಗಳ ಮುಂಚೆಯೇ ಮಾಡಬೇಕಿತ್ತೋ ಆ ಕೆಲಸವನ್ನು ಮಾಡುವ ಅವಕಾಶ ಈಗ ಅಮೆರಿಕದ ಮುಂದೆ ಇದೆ. ಜನರು ದುರ್ಬಲ ಅಥವಾ ಭಯಭೀತರಾಗುವುದು ಬೇಡ. ಇತರರನ್ನೂ ಭಯಪಡಿಸದಿರಿ. ಈ ಸುಂಕ ನೀತಿ ಕಹಿಗುಳಿಗೆಯಂತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಅಮೆರಿಕದ ಆರ್ಥಿಕತೆಗೆ ಪ್ರಯೋಜನವಾಗಲಿದೆ. | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 182 ರಾಷ್ಟ್ರಗಳ ಮೇಲೆ ವಿಧಿಸಿರುವ ಪಾರಸ್ಪರಿಕ ತೆರಿಗೆಯಿಂದ ಈಗಾಗಲೇ ವ್ಯಾಪಾರ ಸಮರ ಆರಂಭವಾಗಿದೆ. ಆದರೆ, ಮುಂಬರುವ ದಿನಗಳಲ್ಲಿ ಅಮೆರಿಕದ ಷೇರುಪೇಟೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು, ಇದರ ಪರಿಣಾಮ ಏಷ್ಯಾ ಸೇರಿದಂತೆ ಇತರ ದೇಶಗಳ ಮಾರುಕಟ್ಟೆ ಮೇಲೂ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಅಲ್ಲದೆ, ಈ ಬಿಕ್ಕಟ್ಟು ಹೀಗೆ ಮುಂದುವರಿದದ್ದೇ ಆದಲ್ಲಿ ಅಮೆರಿಕ 2008ರ ಆರ್ಥಿಕ ಹಿನ್ನಡೆಯಂಥ ಅಥವಾ ಅದಕ್ಕಿಂತಲೂ ಗಂಭೀರ ಸಂಕಷ್ಟವನ್ನು ಅನುಭವಿಸಲಿದೆ.
ಆರ್ಥಿಕ ಹಿಂಜರಿತ ಎಲ್ಲ ವಲಯಗಳಿಗೆ ಹಾನಿ ಮಾಡಲಿದೆ. ಅಮೆರಿಕದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧದ ಪ್ರತಿಭಟನೆಯೂ ತೀವ್ರಗೊಂಡಿದೆ. ಅಮೆರಿಕದ ಹೆಚ್ಚುವರಿ ತೆರಿಗೆಗೆ ಚೀನಾ ತಿರುಗೇಟು ನೀಡಿದ್ದು, ಶೇ.34 ಸುಂಕ ವಿಧಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ವಿವರಿಸಿದ್ದಾರೆ. ಟ್ರಂಪ್ ಯೋಜನೆಗಳು ಅಮೆರಿಕದ ಉದ್ಯಮಗಳಿಗೆ ಪೂರಕವಾಗಬಹುದಾದರೂ, ಇತರ ದೇಶಗಳನ್ನು ನಲುಗಿಸಿವೆ.
1 1992ರ ಏಪ್ರಿಲ್ 28
ಮುಂಬೈ ಷೇರು ಸೂಚ್ಯಂಕ (ಬಿಎಸ್ಇ) 1992ರ ಏಪ್ರಿಲ್ 22ರಂದು 4400 ಅಂಶಗಳಿಗೆ ತಲುಪಿತ್ತು. ಏಪ್ರಿಲ್ 28ರಂದು 12.77%ರಷ್ಟು ಇಳಿಕೆ ಕಂಡು 3,900 ಅಂಶಗಳಿಗೆ ಕುಸಿಯಿತು. ಹರ್ಷದ್ ಮೆಹ್ತಾ ಸಂಬಂಧಿತ ಹಗರಣದಿಂದಾಗಿ ಹೂಡಿಕೆದಾರರು ವಿಶ್ವಾಸ ಕಳೆದುಕೊಂಡಿದ್ದರಿಂದ ಷೇರುಪೇಟೆಯಲ್ಲಿ ‘ಕರಡಿ’ ಅಬ್ಬರ ಕಂಡುಬಂತು. 1993ರ ನವೆಂಬರ್ವರೆಗೂ ಕುಸಿತ ಮುಂದುವರಿಯಿತು. 1994ರ ಆಗಸ್ಟ್ 16ರಂದು ಮೊದಲಿನ ಸ್ಥಿತಿಗೆ ಅಂದರೆ 4,400 ಅಂಶಗಳಿಗೆ ತಲುಪಿತು.
2 2004ರ ಮೇ 17
ಸೆನ್ಸೆಕ್ಸ್ 2004ರ ಮೇನಲ್ಲಿ 5 ಸಾವಿರ ಅಂಶಗಳ ಆಸುಪಾಸಿನಲ್ಲಿತ್ತು. ಮೇ 17ರಂದು 500 ಅಂಶಗಳ ಇಳಿಕೆ ಕಂಡು (ಶೇ.16) 4500ಕ್ಕೆ ಕುಸಿಯಿತು. ಲೋಕಸಭೆ ಚುನಾವಣೆಯಲ್ಲಿ ಎನ್ಡಿಎಗೆ ಅನಿರೀಕ್ಷಿತ ಸೋಲಾಗಿದ್ದರಿಂದ, ಷೇರುಪೇಟೆಯಲ್ಲಿ ಆತಂಕ ಕಾಣಿಸಿಕೊಂಡಿತು. ಚುನಾವಣೋತ್ತರ ಸಮೀಕ್ಷೆಗಳು ಕೂಡ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದವು. ಆದರೆ, ರಾಜಕೀಯ ಅನಿಶ್ಚಿತತೆಯಿಂದ ಹೂಡಿಕೆದಾರರು ವಿಶ್ವಾಸ ಕಳೆದುಕೊಂಡಿದ್ದರಿಂದ ಷೇರುಪೇಟೆ ಮುಗ್ಗರಿಸಿತು.
ಸೆನ್ಸೆಕ್ಸ್ 2007ರ ಡಿಸೆಂಬರ್ನಲ್ಲಿ 20 ಸಾವಿರ ಅಂಶಗಳ ಗಡಿಯನ್ನು ದಾಟಿತ್ತು. 2008ರ ಜನವರಿ 21ರಂದು 7% ಹಾಗೂ ಜನವರಿ 22ರಂದು 5% ಕುಸಿದು, 15,300ಕ್ಕೆ ಇಳಿಯಿತು. 2008ರ ಜಾಗತಿಕ ಆರ್ಥಿಕ ಸಂಕಷ್ಟದ ಕರಿನೆರಳು ಭಾರತೀಯ ಷೇರುಪೇಟೆ ಮೇಲೂ ಬಿದ್ದಿತ್ತು. ಜಾಗತಿಕ ಆರ್ಥಿಕ ಹಿನ್ನಡೆಯಿಂದ ಹೂಡಿಕೆದಾರರು ವಿಶ್ವಾಸ ಕಳೆದುಕೊಂಡರು. 22 ತಿಂಗಳ ಬಳಿಕ ಮೊದಲಿನ ಹಂತಕ್ಕೆ (20 ಸಾವಿರ ಅಂಶಗಳು) ಮರಳಿತು.
ಸೆನ್ಸೆಕ್ಸ್ 2008ರ ಮೇ ತಿಂಗಳಲ್ಲಿ 15 ಸಾವಿರ ಅಂಶಗಳಿಗೆ ತಲುಪುವುದಿತ್ತು. ಜೂನ್ನಿಂದ ಮತ್ತೆ ಕುಸಿತ ಆರಂಭವಾಗಿ ಅಕ್ಟೋಬರ್ ಹೊತ್ತಿಗೆ 10 ಸಾವಿರ ಅಂಶಗಳಿಗೆ ಇಳಿಕೆಯಾಯಿತು. ಅಕ್ಟೋಬರ್ 24ರಂದು 11% ಇಳಿಕೆಯಾಗಿ, 8,566ಕ್ಕೆ ತಲುಪಿತು. ಜಾಗತಿಕ ಆರ್ಥಿಕ ಹಿಂಜರಿತ ಮುಂದುವರಿದಿದ್ದರಿಂದ ಈ ಕುಸಿತ ಉಂಟಾಯಿತು. ಒಂದು ವಾರದಲ್ಲೇ ಚೇತರಿಕೆ ಪ್ರಕ್ರಿಯೆ ಆರಂಭಗೊಂಡು 2010ರ ಜುಲೈನಲ್ಲಿ ಮೊದಲಿದ್ದ ಸ್ಥಿತಿಗೆ ತಲುಪುವಲ್ಲಿ ಯಶಸ್ವಿಯಾಯಿತು.
ಸೆನ್ಸೆಕ್ಸ್ 2019ರ ನವೆಂಬರ್ನಲ್ಲಿ 41 ಸಾವಿರ ಅಂಶಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿತ್ತು. 2020ರ ಮಾರ್ಚ್ 23ರಂದು 13.15% ಕುಸಿಯಿತು. ಕೋವಿಡ್ ಕಾರಣದಿಂದಾಗಿ ಭಾರತದಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಈ ಕುಸಿತ ಉಂಟಾಯಿತು. ಆದರೆ, 2020ರ ನವೆಂಬರ್ನಲ್ಲೇ ಮಾರುಕಟ್ಟೆ ಹಳಿಗೆ ಮರಳಿ 40 ಸಾವಿರ ಅಂಕಗಳ ಗಡಿ ದಾಟಿತು.