ವಿದ್ಯಾರ್ಥಿಗಳು ಉದ್ವೇಗಕ್ಕೆ ಒಳಗಾಗುವ ಪ್ರಕರಣ ಹೆಚ್ಚು

HUN-OCT-15-3(GTTC PROGRAMME)
ಹುಣಸೂರು ನಗರದ ಜಿಟಿಟಿಸಿ ಕೇಂದ್ರದಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಮ್ರತಾ ಎಸ್.ಹೊಸಮಠ ಉದ್ಘಾಟಿಸಿದರು. ಡಾ.ದರ್ಶನ್, ಎಸ್.ಶಿವಣ್ಣೇಗೌಡ, ರಾಜೇಶ್ವರಿ, ಡಾ.ಬಿ.ಬಿಂದುಶ್ರೀ, ಡಾ.ಎಂ.ಎಸ್.ಮಂಜುಶ್ರೀ, ಡಾ..ಬಿ.ಎಂ.ಭಾನು ಇತರರಿದ್ದರು.
Published on

ಹುಣಸೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಸಮುದಾಯದಲ್ಲಿ ಮಾನಸಿಕ ಒತ್ತಡ, ಉದ್ವೇಗಗಳಿಗೆ ಒಳಗಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಮ್ರತಾ ಎಸ್.ಹೊಸಮಠ ಕಳವಳ ವ್ಯಕ್ತಪಡಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಕೈಗಾರಿಕಾ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಮತ್ತು ಸರ್ಕಾರಿ ತರಬೇತಿ ಸಂಸ್ಥೆ(ಐಟಿಐ) ಸಹಯೋಗದಲ್ಲಿ ಬುಧವಾರ ನಗರದ ಜಿಟಿಟಿಸಿ ಕೇಂದ್ರದಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ದಿನಾಚರಣೆಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜೀವನಶೈಲಿ, ನೂತನ ತಂತ್ರಜ್ಞಾನಗಳ ಅತಿಯಾದ ಬಳಕೆ ಮುಂತಾದ ಕಾರಣಗಳಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುವ, ಖಿನ್ನತೆಗೊಳಗಾಗುವ, ಉದ್ವೇಗ ಅಥವಾ ಒತ್ತಡಕ್ಕೆ ಸಿಲುಕಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಳೆದುಕೊಳ್ಳುತ್ತಿರುವ ಪ್ರಕರಣಗಳನ್ನು ಕಾಣುತ್ತಿದ್ದೇವೆ. ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳ ಈ ಸಮಸ್ಯೆ ಪರಿಹಾರವಾಗಲು ಸಮುದಾಯ ಜವಾಬ್ದಾರಿ ಹೊರಬೇಕಿದೆ. ವಿದ್ಯಾರ್ಥಿಗಳು ತಮ್ಮ ಗೆಳೆಯರು ಇಂತಹ ಸಮಸ್ಯೆಗೆ ಸಿಲುಕಿದ್ದಲ್ಲಿ ಅಂತಹವರಿಗೆ ಧೈರ್ಯ, ಜೀವನದಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಬಿ.ಬೃಂದಾ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ 1994ರಿಂದ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಘೋಷಿಸಿತು. 2024-25ನೇ ಸಾಲಿನ ಏಪ್ರಿಲ್ ಅಂತ್ಯದವರೆಗೆ ಜಿಲ್ಲೆಯಲ್ಲಿ 30,157 ಮಂದಿಗೆ ಉಚಿತ ಚಿಕಿತ್ಸೆ ಮತ್ತು 1031 ಮಂದಿಗೆ ಆಪ್ರ ಸಮಾಲೋಚನೆ ನಡೆಸಲಾಗಿದೆ. 2025-26ನೇ ಸಾಲಿನ ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯಕ್ಕೆ 11,566 ಮಂದಿಗೆ ಚಿಕಿತ್ಸೆ ಮತ್ತು 700 ಜನರಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ. ಜಿಲ್ಲಾದ್ಯಂತ ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಾಲೂಕು ಆಸ್ಪತ್ರೆಗಳಲ್ಲಿ ಮನೋಚೈತನ್ಯ ಕ್ಲಿನಿಕ್ ಕಾರ್ಯಕ್ರಮದಡಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಪ್ರತಿ ತಿಂಗಳ ಮೂರನೇ ಮಂಗಳವಾರ ಮನೋಚೈತನ್ಯ ಕ್ಲಿನಿಕ್ ಆಯೋಜಿಸಲಾಗಿದೆ. ಚಿಕಿತ್ಸೆ ಅವಶ್ಯಕತೆಯಿರುವವರು ಟೋಲ್ ಫ್ರೀ ನಂಬರ್ 14416 ಗೆ ಕರೆ ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ಎಂ.ವಿ.ದರ್ಶನ್, ಸೈಕಿಯಾಟ್ರಿಸ್ಟ್ ಡಾ.ಎಂ.ಎಸ್.ಮಂಜುಶ್ರೀ, ಕ್ಲೀನಿಕಲ್ ಸೈಕಾಲಜಿಸ್ಟ್ ಡಾ.ಬಿ.ಎಂ.ಭಾನು, ಸಾಮಾಜಿಕ ಕಾರ್ಯಕರ್ತ ಆರ್.ಮಂಜುನಾಥ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಸೈಕಿಯಾಟ್ರಿಕ್ ನಸ್ ಎಚ್.ಎನ್.ರಶ್ಮಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ, ವಕೀಲೆ ಆರ್.ಎಸ್.ಪವಿತ್ರಾ, ಕಿರಿಯ ತರಬೇತು ಅಧಿಕಾರಿ ಮುಷಾಹಿದ್, ಜಿಟಿಟಿಸಿ ಮುಖ್ಯಸ್ಥ ಕೆ.ಎ.ವಿಶ್ವಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net