

ಇದರಿಂದಾಗಿ ಮೈಉರಿ, ದೇಹವು ಅತಿ ಬಿಸಿಯಾದಂತಹ ಅನುಭವ, ಬಾಯಾರಿಕೆ, ಚರ್ಮ ಹಾಗೂ ಕಣ್ಣುಗಳು ನಸು ತಾಮ್ರಬಣ್ಣ ಪಡೆಯುವುದು, ಬಾಯಿ ಹಾಗೂ ದೇಹದಲ್ಲಿ ಕಬ್ಬಿಣದ ವಾಸನೆ ಬರುವುದು ಮೊದಲಾದ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಪಿತ್ತಜದಾಹದಲ್ಲಿ ಚೆನ್ನಾಗಿ ಹಸಿವೆ ಉಂಟುಮಾಡುವಂತಹ, ಸುಲಭವಾಗಿ ಜೀರ್ಣವಾಗುವ ಆಹಾರದ ಸಂಯೋಜನೆ ಶ್ರೇಯಸ್ಕರ. ಬದುಕಿನಲ್ಲಿ ಬಾಯಾರಿಕೆಯನ್ನು ತಾತ್ಸಾರ ಮಾಡಿದರೆ ದೇಹದಲ್ಲಿ ಪಿತ್ತವು ಹೆಚ್ಚಿ ಅದರ ಉಷ್ಣ ಗುಣದಿಂದ ಧಾತು, ಉಪಧಾತುಗಳು ಒಣಗಿ ಕ್ಷೀಣಿಸುತ್ತವೆ.
ಇದರಿಂದ ದೇಹದ ಒಳಗೆ ಹಾಗೂ ಹೊರಗೆ ಉರಿ, ಕೆಲಸದಲ್ಲಿ ಉತ್ಸಾಹ ಇಲ್ಲದಿರುವುದು, ಬಾಯಿ, ಕಾಲು, ತುಟಿ, ನಾಲಿಗೆ ಒಣಗುತ್ತವೆ. ನಾಲಿಗೆಯನ್ನು ಹೊರಚಾಚಬೇಕೆನಿಸಿ ನಡುಕವುಂಟಾಗುತ್ತದೆ. ಇಲ್ಲಿ ಜಲಧಾತು ವರ್ಧಿಸುವ ಕಾರ್ಯವಾಗಬೇಕು. ಸಕ್ಕರೆ ನೀರು, ಸಕ್ಕರೆ ಬೆರೆಸಿದ ಹಾಲು, ಶೀತಲವಾದ ಕಬ್ಬಿನ ಹಾಲು, ‘ಖರ್ಜೂರಾದಿ ಮಂಥ’ವೆಂಬ ಖರ್ಜೂರ, ಒಣದ್ರಾಕ್ಷಿ, ದಾಳಿಂಬೆ, ನೆಲ್ಲಿಕಾಯಿ ಹಾಗೂ ಹುಣಸೆಹಣ್ಣು ಹಾಕಿ ತಯಾರಿಸುವ ಪಾನೀಯ, ಕೊತ್ತಂಬರಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನು ಸೋಸಿ ಕಲ್ಲುಸಕ್ಕರೆ ಬೆರೆಸಿ ಸೇವಿಸುವ ‘ಧಾನ್ಯಕಾದಿ ಹಿಮ’ವೆಂಬ ಪಾನೀಯ ಇವೆಲ್ಲ ಬಹಳ ಪ್ರಯೋಜನಕಾರಿ.
ಹಲವಾರು ವಿಧದ ಅವಘಡಗಳಿಂದಾಗಿ ದೇಹದ ಒಳಗಿನ ಅವಯವಗಳಿಗೆ, ಗಾಯವಾಗಿ ರಕ್ತಸ್ರಾವವಾದರೆ ದೇಹದಲ್ಲಿ ತೀವ್ರವಾದ ಉರಿ ಕಂಡುಬರುವುದಿದೆ. ಅಕಸ್ಮಾತ್ತಾಗಿ ಆಗುವುದರಿಂದ ಇದನ್ನು ತಡೆಯಲೂ ಕಷ್ಟ, ಚಿಕಿತ್ಸೆಗೂ ಕಷ್ಟ. ಸದ್ಯೋವ್ರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಶರೀರದಲ್ಲಿರುವ ರಸ, ರಕ್ತವೇ ಮೊದಲಾದ ಏಳುಧಾತುಗಳ ಕ್ಷಯದಿಂದಲೂ ಮೈಉರಿ, ಬಾಯಾರಿಕೆ, ಸ್ವರವು ಕ್ಷೀಣವಾಗಿ ಮೆಲುದನಿಯ ಮಾತು, ಮಾನಸಿಕ ಹಾಗೂ ದೈಹಿಕ ಕ್ರಿಯಾಹೀನತೆ, ತೀವ್ರಬಳಲಿಕೆ ಉಂಟಾಗುತ್ತದೆ. ರಕ್ತ, ಪಿತ್ತಗಳನ್ನು ಶಮನಗೊಳಿಸಿ ದೇಹದಲ್ಲಿ ಸ್ನಿಗ್ಧತೆಯನ್ನು ಉಂಟುಮಾಡುವ ಧಾತುಪೋಷಣೆಯ ಉಪಕ್ರಮಗಳು ಲಾಭದಾಯಕ.
ದೇಹಕ್ಕಾಗುವ ಗಾಯಗಳಿಂದ ರಕ್ತಸ್ರಾವವಾದಾಗ, ದೇಹದೊಳಗೆ ರಕ್ತಸ್ರಾವವಾಗಿ ಆಹಾರ ಹಾಗೂ ರಕ್ತಮಿಶ್ರಿತವಾದರೆ, ಅನ್ಯ ಕಾಯಿಲೆಗಳು ಜತೆಗೂಡಿದರೆ ದೇಹ ದೊಳಗೆ ಉರಿ, ಅಸಂಬದ್ಧ ಮಾತು, ತೀವ್ರ ಬಾಯಾರಿಕೆ, ಎಚ್ಚರ ತಪ್ಪುವುದೂ ಸಂಭವಿಸುತ್ತದೆ. ಈ ಕ್ಷತಜ ದಾಹದಲ್ಲಿ ಮುಖ್ಯ ಚಿಕಿತ್ಸೆಯೊಂದಿಗೆ ಮನಸ್ಸಿಗೆ ಇಷ್ಟವಾಗುವ ವಿಷಯಗಳನ್ನು ಹೇಳಿ ಸಮಾಧಾನಗೊಳಿಸುವುದು, ಬಂಧು ಮಿತ್ರರನ್ನು ಒಳಗೊಂಡು ಹೃದಯಕ್ಕೆ ಹಿತವಾದ ವಾತಾವರಣ ಸೃಷ್ಟಿಸುವುದು ರೋಗಿಯ ಚೇತರಿಕೆಗೆ ಸಹಾಯವಾಗುತ್ತದೆ. ಸಸ್ಯಾಹಾರಿಗಳಿಗೆ ದೇಶೀ ಹಸುವಿನ ಹಾಲು, ಮಾಂಸಾಹಾರಿಗಳಿಗೆ ಮಾಂಸಾಹಾರ ಹಿತವಾಗಿರುತ್ತವೆ.
ಸದ್ಯ ಪ್ರಾಣಹರ ಅಥವಾ ಕಾಲಾಂತರದಲ್ಲಿ ಪ್ರಾಣಹರಣ ಮಾಡುವ ಮರ್ಮಸ್ಥಾನಗಳು ದೇಹದಲ್ಲಿವೆ. ಅವುಗಳಿಗೆ ಆಘಾತವಾದಾಗಲೂ ಶರೀರದಲ್ಲಿ ದಾಹವುಂಟಾಗುತ್ತದೆ. ಚಿಕಿತ್ಸೆಗಳನ್ನು ದೇಹಸ್ಥಿತಿ, ದೋಷಸ್ಥಿತಿ ನೋಡಿಕೊಂಡು ವೈದ್ಯರು ನಿರ್ಧರಿಸಬೇಕಾಗುತ್ತದೆ.
ದಾಹರೋಗದಲ್ಲಿ ಮೊತ್ತಮೊದಲು ಸಾಧ್ಯವಿರುವ ರೋಗ ಕಾರಣಗಳನ್ನು ತ್ಯಜಿಸಬೇಕು. ಪಿತ್ತದೋಷ ಶಮನಗೊಳಿಸುವ ಚಿಕಿತ್ಸೆಗೆ ಆದ್ಯತೆ. ಆಲ, ಅತ್ತಿ, ಅಶ್ವತ್ಥ, ಅಂಜೂರ ಹಾಗೂ ಬುಗರಿ ಮರಗಳ ಕಾಂಡದ ತೊಗಟೆ, ಶ್ರೀಗಂಧ, ತ್ರಿಫಲಾ, ಲಾವಂಚ, ಶತಾವರಿ, ಬೂದುಗುಂಬಳಕಾಯಿ, ಹವಳ, ಮುತ್ತು, ಪಚ್ಚೆಕರ್ಪರ, ಸೊಗದೆಬೇರು ಮೊದಲಾದ ಅನೇಕ ಔಷಧೀಯ ದ್ರವ್ಯಗಳು ಚಿಕಿತ್ಸೆಯಲ್ಲಿ ಬಳಸಲ್ಪಡುತ್ತದೆ.
ಹಿಮಸಾಗರ ತೈಲ, ಶತಧೌತ ಘೃತ, ಮಂಜಿಷ್ಠಾದಿ ತೈಲ, ಚಂದನಾದಿ ತೈಲಗಳಿಂದ ಶರೀರ ಅಭ್ಯಂಗ ಮಾಡುವುದು ತುಂಬಾ ಉಪಯುಕ್ತ. ಭದ್ರಮುಷ್ಟಿ, ಪರ್ಪಟಕ, ಶ್ರೀಗಂಧ, ಶುಂಠಿ, ಸುಗಂಧಬಾಲಾ ಹಾಗೂ ಲಾವಂಚ ಈ ಆರು ದ್ರವ್ಯಗಳಿಂದ ಕೂಡಿದ ‘ಷಡಂಗ ಪಾನೀಯ’ವೆಂಬ ಬಿಸಿನೀರು ಮಾಡಿ ಈ ಮೌಲ್ಯವರ್ಧಿತ ನೀರನ್ನು ಕುಡಿಯಲು ಬಳಸುವುದು ಹಿತಕರವಾಗಿರುತ್ತದೆ. ಲಾವಂಚ, ಶ್ರೀಗಂಧ ಅಥವಾ ಕಮಲದ ಹೂವು ಹಾಕಿದ ನೀರು, ಸೊಗದೆಬೇರಿನ ಶರಬತ್ತು, ಎಳೆನೀರು ಕುಡಿಯುವುದೂ ಸಹಕಾರಿ. ಗುಲಾಬಿ ಹೂವಿನ ಅರ್ಕ, ಶ್ರೀಗಂಧದ ಅರ್ಕ ದ್ರವಗಳನ್ನು ದೇಹಕ್ಕೆ ಚಿಮುಕಿಸಿದರೂ ಮೈಉರಿ ಶಮನಕ್ಕೆ ಅನುಕೂಲವಾಗುತ್ತದೆ.
ಹಳೆಯ ಅಕ್ಕಿ, ಕೆಂಪಕ್ಕಿ, ಹೆಸರುಬೇಳೆ, ಬಾಳೆಹಣ್ಣು, ದಾಳಿಂಬೆ, ಖರ್ಜೂರ, ದ್ರಾಕ್ಷಿಹಣ್ಣು, ನೆಲ್ಲಿಕಾಯಿ, ಬೂದುಗುಂಬಳಕಾಯಿ, ಶ್ರೀಗಂಧ, ಕೊತ್ತಂಬರಿ, ಪಡುವಲಕಾಯಿ, ದೇಶೀಗೋವಿನ ಹಾಲು, ತುಪ್ಪ, ಶೀತಲಗಾಳಿಗೆ ಮೈಯೊಡ್ಡುವುದು, ತಣ್ಣೀರಿನ ಸ್ನಾನ, ರುಚಿಕರ ಪಾಯಸಗಳು, ಸಿಹಿ, ಕಹಿ ರುಚಿಯ, ಶೀತಗುಣದ ದ್ರವ್ಯಗಳು ಸಹಾಯಕ. ಮದ್ಯಪಾನ, ಧೂಮಪಾನ, ತೀಕ್ಷ್ಣ, ಉಷ್ಣ ಗುಣದ ಆಹಾರ ವಸ್ತುಗಳು, ಕ್ಷಾರ ಪದಾರ್ಥ, ಜೇನುತುಪ್ಪ, ಖಾರ, ಹುಳಿ, ಉಪ್ಪು, ರುಚಿಯ ಆಹಾರ, ಬಿಸಿಲು, ಬೆಂಕಿಗೆ ಮೈ ಒಡ್ಡುವುದು, ವ್ಯಾಯಾಮ, ಹಸಿಮೆಣಸು, ಹಿಪ್ಪಲಿ, ಹಿಂಗು, ಬೆಳ್ಳುಳ್ಳಿ,
ನೀರುಳ್ಳಿ, ದಾಲ್ಚಿನ್ನಿ, ಲವಂಗ ಮೊದಲಾದ ಸಾಂಬಾರ ಪದಾರ್ಥಗಳು, ವಿರುದ್ಧಾಹಾರ ಸೇವನೆ, ಬಾಯಾರಿಕೆ ತಡೆಯುವುದು ಇವೆಲ್ಲಾ ಅಪಥ್ಯಗಳಾಗಿದ್ದು ಬಿಡುವುದರಿಂದ ಉರಿಯನ್ನು ಸರಿ ದಾರಿಗೆ ಬರಿಸಬಹುದು. (ಪ್ರತಿಕ್ರಿಯಿಸಿ: vvsudina@gmail.com)