ರಾಜ್ಯದಲ್ಲಿನ್ನೂ ತೆರೆದೇ ಇವೆ 385 ಅನಧಿಕೃತ ವೈನ್​ಶಾಪ್

Bars
Published on

| ಬೇಲೂರು ಹರೀಶ ಬೆಂಗಳೂರು

ರಾಜ್ಯದಲ್ಲಿ ಸಿಎಲ್2 (ವೈನ್​ಶಾಪ್) ಕೋಟಾದಡಿ ನಿಗದಿಗಿಂತ ಹೆಚ್ಚುವರಿಯಾಗಿ ಮಂಜೂರಾಗಿದ್ದ 385 ವೈನ್​ಶಾಪ್​ಗಳನ್ನು ರದ್ದುಪಡಿಸುವಂತೆ ಸರ್ಕಾರ ಹಾಗೂ ಹೈಕೋರ್ಟ್ ಆದೇಶ ಹೊರಡಿಸಿದ್ದರೂ ಅಬಕಾರಿ ಇಲಾಖೆ ಪಾಲಿಸಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಲ್ಲಿ 289, ರಾಮನಗರ 10, ಕೊಡಗು 49, ಹಾಸನ 28, ಧಾರವಾಡ 7 ಹಾಗೂ ಚಿಕ್ಕಮಗಳೂರಲ್ಲಿ 2 ಸೇರಿ 385 ಸಿಎಲ್2 ಶಾಪ್​ಗಳನ್ನು 1987ರ ನಿಯಮ ನಿಗದಿಪಡಿಸಿ, 1994ರಲ್ಲಿ ಆಗಿನ ಸರ್ಕಾರ ರದ್ದುಪಡಿಸಿತ್ತು. ಅಲ್ಲದೆ, 1999ರಲ್ಲಿ ನಡೆದ ಪ್ರಕರಣದಲ್ಲಿ ಹೈಕೋರ್ಟ್ ಕೂಡ ಹೆಚ್ಚುವರಿಯಾಗಿ ಮಂಜೂರಾಗಿದ್ದ ಸಿಎಲ್2 ಅಂಗಡಿಗಳನ್ನು ರದ್ದುಪಡಿಸುವಂತೆ ಆದೇಶಿಸಿತ್ತು.

ಅಬಕಾರಿ ಇಲಾಖೆ ನಿಯಮ 12ರಂತೆ ರಾಜ್ಯದ ಪ್ರತಿ ತಾಲೂಕು ಹಾಗೂ ನಗರ ಪ್ರದೇಶಕ್ಕೆ 7,500 ಜನಕ್ಕೆ ಒಂದು ಸಿಎಲ್-2 ಹಾಗೂ 3,500 ಜನಕ್ಕೆ ಹೆಚ್ಚುವರಿ ಸನ್ನದು ನಿಗದಿಪಡಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಮಂದಿಗೆ ಒಂದು ಸಿಎಲ್2 ಹಾಗೂ 7500 ಜನಕ್ಕೆ ಹೆಚ್ಚುವರಿ ಒಂದು ಸನ್ನದು ನಿಗದಿಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ 1987ರಲ್ಲಿ ನಿಯಮ 12ರಂತೆ ಆಗಿನ ಸರ್ಕಾರವು ಎಲ್ಲ ತಾಲೂಕಿನಲ್ಲಿ ಕೋಟಾ ನಿಗದಿ ಪಡಿಸಿತ್ತು. ನಿಯಮ 12ರಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಿಎಲ್2 ಹೆಚ್ಚುವರಿ ಸನ್ನದು ನಿಗದಿಯಂತೆ ಒಟ್ಟು 385 ಸಿಎಲ್2 ಶಾಪ್ ಮಂಜೂರು ಮಾಡಲಾಗಿತ್ತು. ಆದರೆ, 1994ರಲ್ಲಿ ಹೆಚ್ಚುವರಿಯಾಗಿ ನೀಡಿರುವ ಶಾಪ್​ಗಳನ್ನು ರದ್ದುಪಡಿಸಲು ಆದೇಶಿಸಲಾಗಿತ್ತು.

ಬಾಕಿ ಉಳಿದ 258 ಸಿಎಲ್2: 1987ರಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬರುವ ತಾಲೂಕಿಗೆ ಅಬಕಾರಿ ನಿಯಮ 12ರಂತೆ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಿಎಲ್2 ಕೋಟಾ ನಿಗದಿಯಾಗಿತ್ತು. ಅದರಂತೆ, ನಿಗದಿಯಾದ ಸಿಎಲ್2 ಕೋಟಾದಂತೆ ನಗರ ಪ್ರದೇಶಕ್ಕೆ 2,158 ಹಾಗೂ ಗ್ರಾಮೀಣ ಪ್ರದೇಶಕ್ಕೆ 2,048 ಸೇರಿ 4,206 ಸಿಎಲ್2 ಅಂಗಡಿಗಳನ್ನು ನಿಗದಿಪಡಿಸಲಾಗಿದೆ. ಆದರೆ, ಇದೀಗ ನಗರದ ಪ್ರದೇಶದಲ್ಲಿ 2,510 ಹಾಗೂ ಗ್ರಾಮೀಣ ಪ್ರದೇಶಕ್ಕೆ 1,438 ಸೇರಿ 3,948 ಸಿಎಲ್2 ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಕೋಟಾದಂತೆ ಬಾಕಿ ಉಳಿದ 258 ಸಿಎಲ್2 ಶಾಪ್​ಗಳನ್ನು ಭರ್ತಿ ಮಾಡಿ ನಗರ ಪ್ರದೇಶದಲ್ಲಿ ಹೆಚ್ಚುವರಿಯಾಗಿರುವ ಸಿಎಲ್2 ಶಾಪ್​ಗಳನ್ನು ರದ್ದುಪಡಿಸಬೇಕಿದೆ.

ಸೆ.1ರಿಂದ ಬಾರ್ ಕ್ಲಬ್​ನಲ್ಲೂ ಮದ್ಯ?

ಸೆ.1ರಿಂದ ಬಾರ್ ಆಂಡ್ ರೆಸ್ಟೋರೆಂಟ್ ( ಸಿಎಲ್9) ಹಾಗೂ ಕ್ಲಬ್(ಸಿಎಲ್4) ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ. ಕರೊನಾ ನಿಯಂತ್ರಿಸಲು ಸಲುವಾಗಿ 5 ತಿಂಗಳಿಂದ ಬಾರ್ ಮತ್ತು ಕ್ಲಬ್​ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನಿರಾಕರಿಸಲಾಗಿತ್ತು.

ಮಂಜೂರು ಮಾಡಲಾಗಿದ್ದ ಹೆಚ್ಚುವರಿ ಸಿಎಲ್2 ವೈನ್​ಶಾಪ್​ಗಳನ್ನು ರದ್ದುಪಡಿಸಬೇಕೆಂದು ಹಿಂದಿನ ಸರ್ಕಾರ ಹಾಗೂ ಹೈಕೋರ್ಟ್ ಹೊರಡಿಸಿದ್ದ ಆದೇಶಗಳ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳುತ್ತೇನೆ. | ಎಚ್.ನಾಗೇಶ್ ಅಬಕಾರಿ ಸಚಿವ

1.5 ಕೋಟಿ ರೂ. ಬೇಕು

ರಾಜ್ಯದಲ್ಲಿ ಕ್ಲಬ್(ಸಿಎಲ್4), ಸಿಎಲ್-7 (ಹೋಟೆಲ್ ಮತ್ತು ಗೃಹ), ವೈನ್ ಟ್ಯಾವರಿನ್, ವೈನ್ ಬೋಟಿಕ್ ಹಾಗೂ ಮೈಕ್ರೋಬ್ರಿವರಿ ಹೊರತುಪಡಿಸಿ ಉಳಿದ ಮಾದರಿಯ ಮದ್ಯದಂಗಡಿಗಳ ಪರವಾನಗಿ ನೀಡಿಕೆ

ಈಗಾಗಲೆ ನಿಲ್ಲಿಸಲಾಗಿದೆ. ನಿಯಮದ ಪ್ರಕಾರ ಒಂದು ಮದ್ಯದಂಗಡಿ ತೆರೆಯಲು ಗ್ರಾಮೀಣ ಪ್ರದೇಶದಲ್ಲಿ -ಠಿ;4.5 ಲಕ್ಷ ಹಾಗೂ ನಗರ ಪ್ರದೇಶದಲ್ಲಿ -ಠಿ;8.5 ಲಕ್ಷ ಬಂಡವಾಳ ಬೇಕು. ಆದರೆ, ಮದ್ಯದಂಗಡಿ ತೆರೆಯಲು ಅರ್ಜಿ ಹಾಕುವುದರಿಂದ ಹಿಡಿದು ಅನುಮತಿ ಪಡೆಯುವವರೆಗೆ ನಡೆಯುವ ಪ್ರಕ್ರಿಯೆಗೆ ಅಂದಾಜು -ಠಿ;80 ಲಕ್ಷ ಲಂಚ ಬೇಕಿದೆ. ಒಂದು ವೇಳೆ ಅರ್ಜಿಯಲ್ಲಿ ಲೋಪ ಅಥವಾ ಬೇರೆ ಏನಾದರೂ ಸಮಸ್ಯೆ ಇದ್ದರೆ ಮತ್ತಷ್ಟು ಲಂಚ ನೀಡಬೇಕಾಗುತ್ತದೆ. ಮದ್ಯ ಖರೀದಿಸಲು -ಠಿ;25 ಲಕ್ಷ ಬೇಕಾಗುತ್ತದೆ. ಒಟ್ಟಾರೆ ಮದ್ಯದಂಗಡಿ ತೆರೆಯಲು ಏನಿಲ್ಲವಾದರೂ -ಠಿ;1.5 ಕೋಟಿ ಬೇಕಿದೆ.

ನಾನು ಇಲಾಖೆಗೆ ಬಂದು ಮೂರ್ನಾಲ್ಕು ತಿಂಗಳಾಗಿದೆ. ನಿಗದಿತ ಕೋಟಾಗಿಂತ ಹೆಚ್ಚುವರಿ ಸನ್ನದು ಮಂಜೂರು ಆಗಿರುವುದು, ಬಳಿಕ ರದ್ದು ಮಾಡಿರುವ ಕುರಿತು ನನಗೆ ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳಿಂದ ತಕ್ಷಣ ಮಾಹಿತಿ ಪಡೆದು ಪರಿಶೀಲಿಸುತ್ತೇನೆ. | ಡಾ. ಲೋಕೇಶ್ ಅಬಕಾರಿ ಇಲಾಖೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net