

| ಪಿ.ಯು. ಮೋನಪ್ಪ, ಸಂಸ್ಥಾಪಕ, ವಿತ್ತ ಕ್ಯಾಪಿಟಲ್ ಸರ್ವಿಸಸ್
Thematic mutual funds : ಇತ್ತೀಚೆಗಷ್ಟೇ ಯುಎಸ್ ಓಪನ್-2025 ಆವೃತ್ತಿ ಮುಕ್ತಾಯವಾಗಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಈ ವರ್ಷವು ಕೂಡ ಹಿಂದಿನಂತೆಯೇ ಅದೇ ಉತ್ಸಾಹದಿಂದ ಜಾಗತಿಕವಾಗಿ ಟೆನಿಸ್ ಅಭಿಮಾನಿಗಳು ಮೆಗಾ ಟೂರ್ನಮೆಂಟ್ಗೆ ಸಾಕ್ಷಿಯಾದರು. ಆದರೆ, ಈ ಬಾರಿ ಕಂಡಿದ್ದು ಮಾತ್ರ ಭಾರಿ ಬದಲಾವಣೆ. ಅದೇನೆಂದರೆ, ಟೆನಿಸ್ ದಂತಕತೆಗಳಾದ ಫೆಡರರ್, ನಡಾಲ್ ಹಾಗೂ ಜೊಕೋವಿಕ್ ಯುಗಾಂತ್ಯವಾಗಿದ್ದು, ಅಲ್ಕರಾಜ್ ಮತ್ತು ಸಿನ್ನರ್ರವರಂತಹ ಹೊಸ ಪೀಳಿಗೆ ಇದೀಗ ಬೆಳಕಿಗೆ ಬಂದಿದೆ.
ಜೀವನದಲ್ಲೂ ಅದೇ ರೀತಿ. ಇಲ್ಲಿ ಜಯಶಾಲಿಗಳು ಬದಲಾಗುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ಇದೇ ಸತ್ಯ ಷೇರು ಮಾರುಕಟ್ಟೆಗೂ ಅನ್ವಯಿಸುತ್ತದೆ. ಏಕೆಂದರೆ, ನಾಯಕತ್ವ ಅನ್ನೋದು ಎಂದಿಗೂ ಶಾಶ್ವತವಲ್ಲ, ಅದು ಬದಲಾಗುತ್ತಲೇ ಇರುತ್ತದೆ. ಷೇರು ಮಾರುಕಟ್ಟೆಯಲ್ಲೂ ಭಾರಿ ಬದಲಾವಣೆಗಳು ಆಗುತ್ತಿರುತ್ತವೆ. ಉದಾಹರಣೆಗೆ ಕಳೆದ ಐದು ವರ್ಷಗಳಲ್ಲಿನ ಭಾರತೀಯ ಮಾರುಕಟ್ಟೆಗಳನ್ನೇ ತೆಗೆದುಕೊಳ್ಳಿ. ಇಲ್ಲಿ ಸಾಕಷ್ಟು ಬದಲಾಗಿದೆ.
ಹೌದು, 2020ರಲ್ಲಿ ಕರೊನಾ ಸಾಂಕ್ರಾಮಿಕ ರೋಗ ಅಪ್ಪಳಿಸಿದಾಗ, ಕೋವಿಡ್ ಬೇಡಿಕೆಗಳಿಂದಾಗಿ ಲಸಿಕೆ ಅಭಿವೃದ್ಧಿ ಮತ್ತು ಸಾಕಷ್ಟು ರಫ್ತುಗಳು ಆರೋಗ್ಯ ವಲಯವನ್ನೇ ಬೆಂಬಲಿಸಿದ್ದರಿಂದ ಫಾರ್ಮಾ ಅಥವಾ ಔಷಧಿ, ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಲಯವಾಗಿತ್ತು. ಕರೊನಾ ರೋಗ ಅಥವಾ ಅದರಿಂದಾಗ ಲಾಕ್ಡೌನ್ ವಿಶ್ವಾದ್ಯಂತ ಅನೇಕ ಕಂಪನಿಗಳನ್ನು ಡಿಜಿಟಲ್ ಅಳವಡಿಕೆಗೆ ದೂಡಿದಾಗ, 2021 ರಲ್ಲಿ ಐಟಿ ವಲಯವು ಹೆಚ್ಚಿನ ಗಮನ ಸೆಳೆಯಿತು. ನಿಧಾನವಾಗಿ ಕರೊನಾ ಕಡಿಮೆಯಾಗಿ ಆರ್ಥಿಕತೆಗಳು ತೆರೆದುಕೊಳ್ಳುತ್ತಿದ್ದಂತೆ ಮತ್ತು ಲಾಕ್ಡೌನ್ ತೆರವಿನಿಂದ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಂಡಂತೆ, 2022 ರಲ್ಲಿ ಬ್ಯಾಂಕುಗಳು ಮುನ್ನಡೆ ಸಾಧಿಸಿದವು. 2023 ರಲ್ಲಿ, ಮಿತಿಮೀರಿದ ಬೇಡಿಕೆ, ಚಿಪ್ ಕೊರತೆಯನ್ನು ಕಡಿಮೆ ಮಾಡುವುದು ಮತ್ತು SUV ಮತ್ತು EV ಮಾರಾಟಗಳ ಹೆಚ್ಚಳದಿಂದ ಆಟೋ ಮೊಬೈಲ್ ವಲಯ ಮುನ್ನಡೆ ಸಾಧಿಸಿತು. 2024 ರಲ್ಲಿ ಫಾರ್ಮಾ ವಲಯವು ಮತ್ತೆ ಬಲವಾದ ಪುನರಾಗಮನ ಮಾಡಿತು.
ಮಾರುಕಟ್ಟೆಯಲ್ಲಿ ಕಾಲಕ್ಕೆ ತಕ್ಕಂತೆ ಆಗುವ ಈ ಬದಲಾವಣೆಗಳನ್ನು ಗುರುತಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಹೂಡಿಕೆ ಪೋರ್ಟ್ಫೋಲಿಯೊಗಳನ್ನು ಅಳವಡಿಸಿಕೊಳ್ಳುವುದು ಹೂಡಿಕೆದಾರರಿಗೆ ಅಪಾರ ಪ್ರತಿಫಲದಾಯಕವಾಗಿರುತ್ತದೆ. ಅಂದರೆ, ಭಾರಿ ಲಾಭವನ್ನು ತಂದುಕೊಡುತ್ತದೆ. ಏಕೆಂದರೆ ಕ್ರೀಡೆಯಲ್ಲಾಗಲಿ ಅಥವಾ ಷೇರು ಮಾರುಕಟ್ಟೆಯಲ್ಲಾಗಲಿ, ನಿನ್ನೆಯ ಚಾಂಪಿಯನ್ ಯಾವಾಗಲೂ ನಾಳೆಯ ವಿಜೇತನಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ಈ ವಿಚಾರದಲ್ಲಿ ಹೂಡಿಕೆದಾರರಿಗೆ ಥಿಮ್ಯಾಟಿಕ್ ಮ್ಯೂಚುವಲ್ ಫಂಡ್ಗಳು ಉತ್ತಮ ಆಯ್ಕೆಯಾಗಿವೆ. ಈ ಫಂಡ್ಗಳು ಪ್ರಸ್ತುತ ಮ್ಯಾಕ್ರೋ ಟ್ರೆಂಡ್ಗಳನ್ನು ಗುರುತಿಸುತ್ತವೆ ಮತ್ತು ಅವುಗಳ ನಿರೀಕ್ಷಿತ ಕಾರ್ಯಕ್ಷಮತೆಯಿಂದ ಲಾಭ ಪಡೆಯಲು ಪ್ರಮುಖ ಥೀಮ್ಗಳನ್ನು ಮೊದಲೇ ಗುರಿಯಾಗಿಸುತ್ತವೆ. ಥಿಮ್ಯಾಟಿಕ್ ಫಂಡ್ಗಳನ್ನು ವೈವಿಧ್ಯಮಯ ಇಕ್ವಿಟಿ ಫಂಡ್ಗಳ ಕೋರ್ ಪೋರ್ಟ್ಫೋಲಿಯೊ ಜೊತೆಗೆ ತಂತ್ರಾತ್ಮಕವಾಗಿ ಬಳಸಬಹುದು. ಕೋರ್ ಪೋರ್ಟ್ಫೋಲಿಯೊ ಸ್ಥಿರವಾದ ಆದಾಯವನ್ನು ನೀಡಿದರೆ, ಥಿಮ್ಯಾಟಿಕ್ ಹಂಚಿಕೆಯು ಆದಾಯವನ್ನು ಹೆಚ್ಚಿಸಲು ಉತ್ತಮ ಪ್ರದರ್ಶನ ನೀಡುವ ವಲಯಗಳು ಮತ್ತು ಥೀಮ್ಗಳ ಮೇಲೆ ಅವಕಾಶವಾದಿಯಾಗಿ ಬಂಡವಾಳ ಹೂಡಲು ಅವಕಾಶವ ನೀಡುತ್ತದೆ. ಉದಾಹರಣೆಗೆ, 2020ರ ಕ್ಯಾಲೆಂಡರ್ ವರ್ಷದಲ್ಲಿ ವಿಶಾಲವಾದ ನಿಫ್ಟಿ 50 ಸೂಚ್ಯಂಕದ 14.8% ಆದಾಯಕ್ಕೆ ಹೋಲಿಸಿದರೆ, ನಿಫ್ಟಿ ಫಾರ್ಮಾ ಸೂಚ್ಯಂಕವು ಪ್ರಭಾವಶಾಲಿ 60% ಅನ್ನು ನೀಡಿತು. ಅದೇ ರೀತಿ 2023 ರಲ್ಲಿ, ನಿಫ್ಟಿ ಆಟೋ ಇಂಡೆಕ್ಸ್ನ 48% ಆದಾಯವು ನಿಫ್ಟಿ 50 ರ 20% ಆದಾಯವನ್ನು ಮೀರಿಸಿದೆ.
ಈ ಹಿನ್ನೆಲೆಯಲ್ಲಿ, ವಿವಿಧ ವಲಯಗಳು ಮತ್ತು ಹೂಡಿಕೆ ವಿಷಯಗಳಲ್ಲಿ ಉತ್ತಮ ಅವಕಾಶಗಳಿಗೆ ಎದುರು ನೋಡುತ್ತಿರುವ ಹೂಡಿಕೆದಾರರು ICICIPrudential Thematic Advantage Fund (FOF) ಅನ್ನು ಪರಿಗಣಿಸಬಹುದು. ಇದು ವಲಯ-ನಿರ್ದಿಷ್ಟ ಮತ್ತು ವಿಷಯಾಧಾರಿತ ನಿಧಿಗಳ ವೈವಿಧ್ಯಮಯ ಪೋರ್ಟ್ಫೋಲಿಯೊಗೆ ಕಾರ್ಯತಂತ್ರದ ಬಂಡವಾಳವನ್ನು ಹಂಚಿಕೆ ಮಾಡುತ್ತದೆ. 2025, ಆಗಸ್ಟ್ 31ರ ಹೊತ್ತಿಗೆ ಈ ನಿಧಿಯು ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಅಂದರೆ, 19.14 ರಷ್ಟು 3-ವರ್ಷಗಳ CAGR, 24.34 ರಷ್ಟು 5-ವರ್ಷಗಳ CAGR ಮತ್ತು ಪ್ರಾರಂಭದಿಂದಲೂ 15.35 ರಷ್ಟು CAGR ಅನ್ನು ಈ ನಿಧಿ ದಾಖಲಿಸಿದೆ.