ಕಳ್ಳತನ ಸಿಕ್ಕಿಬಿದ್ದಿದೆ, ಈಗ ಕಳ್ಳರನ್ನೂ ಹಿಡಿಯುತ್ತೇವೆ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ| Rahul Gandhi

RAHUL GANDHI
Published on

Rahul Gandhi: ಭಾರತೀಯ ಚುನಾವಣಾ ಆಯೋಗವು (ECI) ಮತ ಕಳ್ಳತನ ಅಕ್ರಮದ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದ ನಂತರ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ (ಸೆಪ್ಟೆಂಬರ್​,24) ಆರೋಪಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಾಹುಲ್​​, ಜ್ಞಾನೇಶ್ ಜೀ, ನಾವು ಕಳ್ಳತನವನ್ನು ಹಿಡಿದೆವು ಮತ್ತು ನಂತರವೇ ನೀವು ಬೀಗ ಹಾಕಲು ನೆನಪಿಸಿಕೊಂಡಿದ್ದೀರಾ. ಈಗ ನಾವು ಕಳ್ಳರನ್ನು ಸಹ ಹಿಡಿಯುತ್ತೇವೆ. ಹಾಗಾದರೆ ನೀವು ಹೇಳಿ, ನೀವು ಯಾವಾಗ ಸಿಐಡಿಗೆ ಪುರಾವೆಗಳನ್ನು ನೀಡುತ್ತೀರಿ? ಎಂದು ಗಾಂಧಿ ಪ್ರಶ್ನಿಸಿದ್ದಾರೆ.

ಆಯೋಗವು ಈಗ ಕಳ್ಳತನವನ್ನು ಲಾಕ್ ಮಾಡಿದೆ. ಆದರೆ, ಈ ಮತ ಕಳ್ಳತನದ ಹಿಂದಿನವರನ್ನು ಇನ್ನೂ ಗುರುತಿಸಬೇಕು ಎಂದು ರಾಹುಲ್​ ಪ್ರತಿಪಾದಿಸಿದ್ದಾರೆ. ಅಲ್ಲದೆ, ಆಳಂದ್‌ನಲ್ಲಿ ಮತಗಳನ್ನು ಅಳಿಸಲಾಗಿದೆ ಎಂಬ ಆರೋಪದ ಬಗ್ಗೆ ಕರ್ನಾಟಕ ಸಿಐಡಿಗೆ ಪುರಾವೆಗಳನ್ನು ಒದಗಿಸಿದ್ದಕ್ಕಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್,​ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಆರೋಪವೇನು..?

2023 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಆಳಂದ್ ಕ್ಷೇತ್ರದಲ್ಲಿ ಸಾವಿರಾರು ಮತಗಳನ್ನು ರದ್ದುಪಡಿಸುವ ಗುರಿಯನ್ನು ಹೊಂದಲಾಗಿತ್ತು. ರಾಹುಲ್ ಪ್ರಕಾರ, ಸಾಫ್ಟ್‌ವೇರ್ ವ್ಯವಸ್ಥೆಯ ಮೂಲಕ ಅಳಿಸುವಿಕೆಗಳನ್ನು ಮಾಡಲಾಗಿದೆ. ಆದರೆ, ಸಿಐಡಿ ಇದನ್ನು ಪತ್ತೆಹಚ್ಚಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ, ಯಾರೋ ದುರುಪಯೋಗಪಡಿಸಿಕೊಂಡ ಗುರುತಿನ ಚೀಟಿಗಳನ್ನು ಬಳಸಿಕೊಂಡು ಆನ್‌ಲೈನ್ ಅರ್ಜಿಗಳ ಮೂಲಕ ಸುಮಾರು 6,000 ಹೆಸರುಗಳನ್ನು ಅಳಿಸಲು ಪ್ರಯತ್ನಿಸಿದ್ದಾರೆ, ಅಲ್ಲದೆ, ಒಟಿಪಿ ಪರಿಶೀಲನೆಗಾಗಿ ಬಳಸಲಾದ ಮೊಬೈಲ್ ಸಂಖ್ಯೆಗಳು ಪ್ರಶ್ನಾರ್ಹ ಮತದಾರರಿಗೆ ಸೇರಿಲ್ಲ ಎಂದು ರಾಹುಲ್​ ತಿಳಿಸಿದ್ದಾರೆ.

ಅಲಂದ್ ಆರೋಪದ ಕುರಿತು ಆಯೋಗದ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯೋಗವು ರಾಹುಲ್ ಗಾಂಧಿ ತಪ್ಪಾಗಿ ಭಾವಿಸಿದಂತೆ ಯಾವುದೇ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ. ಬಾಧಿತ ವ್ಯಕ್ತಿಗೆ ಕೇಳಲು ಅವಕಾಶ ನೀಡದೆ ಯಾವುದೇ ಅಳಿಸುವಿಕೆ ನಡೆಯುವುದಿಲ್ಲ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

2023 ರಲ್ಲಿ ಪರಿಶೀಲಿಸಲಾದ 6,018 ಅಳಿಸುವಿಕೆ ವಿನಂತಿಗಳಲ್ಲಿ ಕೇವಲ 24 ಮಾತ್ರ ಮಾನ್ಯವಾಗಿವೆ ಎಂದು ಆಯೋಗ ಬಹಿರಂಗಪಡಿಸಿದೆ. ಅಲ್ಲದೆ, ಉಳಿದ 5,994 ಪರಿಶೀಲನೆಯ ನಂತರ ಅನರ್ಹವೆಂದು ಕಂಡುಬಂದವು ಮತ್ತು ದುರುಪಯೋಗದ ಪ್ರಯತ್ನದ ತನಿಖೆಗಾಗಿ ECI ಸ್ವತಃ FIR ದಾಖಲಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net