

ಬೆಂಗಳೂರು: ಡೆಲಿವರಿ ಮಾಡಲು ಹೋದಾಗ ಮನೆಯವರು ಕೀ ಇಡುವ ಜಾಗ ನೋಡಿಕೊಂಡು, ಮನೆಯಲ್ಲಿ ಯಾರು ಇಲ್ಲದಾಗ ಮನೆ ಕೀಗಳನ್ನು ತೆಗೆದು ಕಳ್ಳತನ ಮಾಡುತ್ತಿದ್ದ ಡೆಲಿವರಿ ಬಾಯ್‌ನನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ವೈಟ್‌ಫೀಲ್ಡ್ ನಿವಾಸಿ ಪ್ರದೀಪ್ (೩೦) ಬಂಧಿತ. ಆರೋಪಿಯಿಂದ ೧೦ ಲಕ್ಷ ರೂ. ಮೌಲ್ಯದ ೧೫೨ ಗ್ರಾಂ ಚಿನ್ನ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿ ಬಿಗ್ ಬಾಸ್ಕೆಟ್‌ನಲ್ಲಿ ಡೆಲಿವರಿ ಬಾಯ್ ಆಗಿ ಹಲವು ತಿಂಗಳಿಂದ ಕೆಲಸ ಮಾಡುತ್ತಿದ್ದ. ಡೆಲಿವರಿ ಮಾಡಲು ಹೋದಾಗ ಅಕ್ಕ-ಪಕ್ಕದ ಮನೆಗಳ ಮಾಲೀಕರು ಕೀಯನ್ನು ಯಾವ ಜಾಗದಲ್ಲಿ ಇಡುತ್ತಾರೆ ಎಂಬುದು ತಿಳಿದುಕೊಂಡಿದ್ದ. ಬಳಿಕ ಯಾರು ಇಲ್ಲದ ವೇಳೆ ಆ ಮನೆಗೆ ಬಂದು ಚಿನ್ನಾಭರಣ ಅಥವಾ ನಗದು ದೋಚಿ ಪರಾರಿಯಾಗುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜ್ಯೂಸ್ ಅಂಗಡಿ ಮಾಲೀಕರ ಮನೆಗೆ ಕನ್ನ:
ಜ್ಯೂಸ್ ಅಂಗಡಿಗೆ ಮಾಲೀಕರೊಬ್ಬರು ಸೆ.೨೭ರಂದು ಬೀಗ ಹಾಕಿ ಮನೆ ಹೊರಗಡೆಯ ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಇಟ್ಟು ಅಂಗಡಿ ತೆರೆಯಲು ಹೋಗಿದ್ದರು. ಅದನ್ನು ಗಮನಿಸಿದ್ದ ಪ್ರದೀಪ್, ಬೀಗ ತೆಗೆದು ಮನೆಗೆ ನುಗ್ಗಿ ಬಿರುವಿನಲ್ಲಿದ್ದ ೮ ಗ್ರಾಂ ಚಿನ್ನ ಹಾಗೂ ೧೦ ಸಾವಿರ ನಗದು ದೋಚಿ ಪರಾರಿಯಾಗಿದ್ದ. ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಬಂಧನದಿಂದ ವೈಟ್‌ಫೀಲ್ಡ್ ಠಾಣೆಯ ೬ ಕನ್ನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕಳವು ವಿಚಾರ ಮಾಲೀಕರಿಗೆ ಗೊತ್ತಿಲ್ಲ:
ತನಿಖೆ ವೇಳೆ ಪತ್ತೆಯಾದ ಮತ್ತೊಂದು ಅಚ್ಚರಿಯ ವಿಚಾರವೆಂದರೆ, ಆರೋಪಿಯ ವಿಚಾರಣೆಯಲ್ಲಿ ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲೇ ಐದು ಮನೆಗಳ ಕಳ್ಳತನ ಮಾಡಿರುವ ವಿಚಾರ ಬಾಯ್ಬಿಟ್ಟಿದ್ದಾನೆ. ಆದರೆ, ಈ ವಿಚಾರ ಮನೆ ಮಾಲೀಕರಿಗೆ ಗೊತ್ತಿಲ್ಲ. ಆರೋಪಿ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ಮನೆ ಮಾಲೀಕರಿಗೆ ಈ ವಿಷಯ ತಿಳಿಸಿದ್ದಾರೆ. ಬಳಿಕ ಮನೆಯ ಬೀರು, ಕಬೋರ್ಡ್ ಪರಿಶೀಲಿಸಿದಾಗ ಕಳವು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.