ಬ್ಯಾಂಕ್ ನೌಕರನ ಸೋಗಲ್ಲಿ ಹಣ ದೋಚಿದ ಖದೀಮ

Crime
Published on

ಕಾಸರಗೋಡು: ಜನತೆಗೆ ಆಮಿಷಗಳನ್ನೊಡ್ಡಿ ಹಣ ಎಗರಿಸುವ ತಂಡವೊಂದು ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು,ಮುಂಡಿತ್ತಡ್ಕ ನಿವಾಸಿಯೊಬ್ಬರಿಂದ ಆರು ಸಾವಿರ ರೂ.ಪಡೆದ ಆರೋಪಿ ಬಳಿಕ ತಲೆಮರೆಸಿಕೊಂಡಿದ್ದಾನೆ. ಇನ್ನೊಂದೆಡೆ ಕುಂಬ್ಡಾಜೆ ಪಾಲಕ್ಕಾರ್ ಎಂಬಲ್ಲಿಂದ 5ಸಾವಿರ ರೂ. ದೋಚಲು ಯತ್ನಿಸಿದ್ದಾನೆ.

ಮುಂಡಿತ್ತಡ್ಕನೂಜಿಲ ನಿವಾಸಿ ರಾಮಣ್ಣ ಎಂಬುವರಲ್ಲಿಗೆ ತೆರಳಿದ ಈ ವಂಚಕ, ತಾನು ಬ್ಯಾಂಕ್‌ನೌಕರನೆಂದು ಪರಿಚಯಿಸಿಕೊಂಡು,ನಿಮಗೆ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಮಂಜೂರಾಗಿದ್ದು, ಆರು ಸಾವಿರ ರೂ. ಬ್ಯಾಂಕಿಗೆ ತುಂಬಿದಲ್ಲಿ ಚೆಕ್ ತಂದುಕೊಡುವುದಾಗಿ ತಿಳಿಸಿದ್ದಾನೆ. ವಂಚನೆ ಅರಿಯದೆ ರಾಮಣ್ಣ ಅವರು ಮನೆಗೆ ತೆರಳಿ ಆರು ಸಾವಿರ ರೂ. ನಗದು ಈತನ ಕೈಗಿತ್ತಿದ್ದಾರೆ. ಸಂಜೆಯಾದರೂ ಚೆಕ್ ತಂದುಕೊಡದ ಹಿನ್ನೆಲೆಯಲ್ಲಿ ಆತ ತಿಳಿಸಿದ ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ತಾನು ಮೋಸಹೋಗಿರುವುದು ಅರಿವಿಗೆ ಬಂದಿದೆ.

ತಕ್ಷಣ ಅವರು ಬದಿಯಡ್ಕ ಠಾಣೆಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಇದೇ ಆರೋಪಿ ಕುಂಬ್ಡಾಜೆ ಪಾಲಕ್ಕಾರ್ ನಿವಾಸಿಯೊಬ್ಬರ ಮನೆಗೆ ತೆರಳಿ, ಬ್ಯಾಂಕ್ ನೌಕರನೆಂದು ಪರಿಚಯಿಸಿಕೊಂಡು ನಿಮಗೆ ಬ್ಯಾಂಕ್ ಸಾಲ ಮಂಜೂರುಗೊಂಡಿದ್ದು, ಈ ಹಣ ಕೈಸೇರಲು ತುರ್ತಾಗಿ ಐದು ಸಾವಿರ ರೂ. ಬ್ಯಾಂಕಿಗೆ ಪಾವತಿಸುವಂತೆ ತಿಳಿಸಿದ್ದಾನೆ. ಯಜಮಾನ ಮನೆಯಲ್ಲಿಲ್ಲದ ಕಾರಣ ಸಂಜೆ ವಿಷಯ ತಿಳಿಸಿ, ಹಣ ತೆಗೆದಿರಿಸುವುದಾಗಿ ಮಹಿಳೆ ತಿಳಿಸುತ್ತಿದ್ದಂತೆ ಆತ ಬೈಕ್ ಏರಿ ಪರಾರಿಯಾಗಿದ್ದಾನೆ. ಈ ಮಧ್ಯೆ ಮನೆಯಲ್ಲಿದ್ದ ಮಕ್ಕಳು ಈತನ ಫೋಟೋ ಮೊಬೈಲಲ್ಲಿ ಕ್ಲಿಕ್ಕಿಸಿದ್ದಾರೆ. ಮುಂಡಿತ್ತಡ್ಕ ನಿವಾಸಿಯನ್ನು ವಂಚಿಸಿದ ಖದೀಮನೂ ಈತನೇ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net