ಸಿಸಿಬಿ ಎಚ್ಚರಿಕೆ ಕೊಟ್ಟು ಕಳುಹಿಸಿದ ಮರು ದಿನವೇ ಉದ್ಯಮಿ ಕೊಲೆಗೆ ಯತ್ನಿಸಿದ ಬೇಕರಿ ರಘು ಗ್ಯಾಂಗ್?

Crime Logo
Published on

ಬೆಂಗಳೂರು: ರೌಡಿಗಳ ಪಾಲಿಗೆ ಸಿಸಿಬಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬತಾಗಿದೆ. ಏಕೆಂದರೆ ಸಿಸಿಬಿ ವಿಚಾರಣೆ ನಡೆಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ ಮರುದಿನವೇ ರೌಡಿಶೀಟರ್‌ಗಳು ಉದ್ಯಮಿಯೊಬ್ಬರ ಕೊಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ಆ.೧೯ರಂದು ರೌಡಿಶೀಟರ್ ಬೇಕರಿ ರಘುನನ್ನು ಪೊಲೀಸರು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಆದರೆ ಮರು ದಿನವೇ ಬೇಕರಿ ರಘು ಆ್ಯಂಡ್ ಗ್ಯಾಂಗ್ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕೊಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಆ.೨೦ ರಂದು ಉದ್ಯಮಿ ಗಜೇಂದ್ರ ಅವರು, ಸ್ನೇಹಿತರೊಬ್ಬರ ಗೃಹ ಪ್ರವೇಶಕ್ಕೆ ಹೋಗಿ ರಾತ್ರಿ ೧೧ ಗಂಟೆಯ ಸಮಯದಲ್ಲಿ ರಾಮಚಂದ್ರಪುರ ಪಾರ್ಕ್ ಬಳಿ ಬರುತ್ತಿದ್ದಾಗ ಮಾರಾಕಸ್ತ್ರದೊಂದಿಗೆ ಆಗಮಿಸಿದ್ದ ೧೦ ದುಷ್ಕರ್ಮಿಗಳ ಗ್ಯಾಂಗ್ ಗಜೇಂದ್ರ ಅವರ ಕಾರಿನ ಗ್ಲಾಸ್ ಅನ್ನು ಜಖಂಗೊಳಿಸಿದ್ದಾರೆ. ಕಾರಿನಿಂದ ಇಳಿದು ಹೊರಗೆ ಬಾರೋ ನಿನ್ನನ್ನು ಸಾಯಿಸಲು ಅಣ್ಣ (ಸೈಕಲ್ ರವಿ, ಬೇಕರಿ ರಘು) ಹೇಳಿದ್ದಾರೆ. ಮುಂದೆ ಕಾರಿನಲ್ಲಿ ಅಣ್ಣ ಕುಳಿತ್ತಿದ್ದಾರೆ ಎಂದು ಹೇಳಿ ಹಲ್ಲೆಗೆ ಯತ್ನಿಸಿದ್ದಾರೆ. ಇದರಿಂದ ಆತಂಕಗೊಂಡ ಗಜೇಂದ್ರ ಅವರು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ತಪ್ಪಿಸಿಕೊಂಡು ಹೋಗಿದ್ದಾರೆ. ಆದರೂ ಸಹ ಅವರನ್ನು ಬಿಡದೆ ಬೆನ್ನಟ್ಟಿಕೊಂಡು ಬಂದ ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸ್ ಸಹಾಯವಾಣಿಯಾದ ೧೧೨ ಗೆ ಕರೆ ಮಾಡಿದ್ದಾರೆ. ಕೂಡಲೇ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ಗಜೇಂದ್ರ ಅವರನ್ನು ರಕ್ಷಣೆ ಮಾಡಿ ಠಾಣೆ ಕರೆದೊಯ್ದಿದ್ದಾರೆ. ಈ ಸಂಬಂಧ ಗಜೇಂದ್ರ ಅವರು ಸೈಕಲ್ ರವಿ ಮತ್ತು ಬೇಕರಿ ರವಿ ಸೇರಿ ಇತರರ ವಿರುದ್ಧ ಸುಬ್ರಮಣ್ಯಪುರದಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅವರೇ ಕೊಲೆ ಮಾಡಲು ಹೇಳಿದ್ದಾರೆ:
ಘಟನೆಯ ವೇಳೆ ಸೈಕಲ್ ರವಿ, ಬೇಕರಿ ರಘು ಕಾರಿನಲ್ಲಿದ್ದರು. ಅವರೇ ಕೊಲೆ ಮಾಡಲು ಹೇಳಿದ್ದಾರೆಂದು ಉದ್ಯಮಿ ಗಜೇಂದ್ರ ಆರೋಪಿಸಿ ದೂರು ನೀಡಿದ್ದಾರೆ. ರೌಡಿಶೀಟರ್‌ಗಳಾದ ಸೈಕಲ್ ರವಿ, ಬೇಕರಿ ರಘು ವಿರುದ್ಧ ಎ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net