ನಾಟಕ ಕಲೆಗೆ ಮತ್ತಷ್ಟು ಪ್ರೋತ್ಸಾಹ ಅಗತ್ಯ: ರಂಗ ನಿರ್ದೇಶಕ ಬೀರಿಹುಂಡಿ ಗೋವಿಂದರಾಜು ಮನವಿ

47
Published on

ಮೈಸೂರು: ರಂಗ ಕಲೆಗೆ ರಾಜ್ಯ ಸರ್ಕಾರ ಮತ್ತಷ್ಟು ಆದ್ಯತೆ ನೀಡುವ ಅಗತ್ಯವಿದೆ ಎಂದು ರಂಗ ನಿರ್ದೇಶಕ ಬೀರಿಹುಂಡಿ ಗೋವಿಂದರಾಜು ಮನವಿ ಮಾಡಿದರು.
ಐಪಿಎಸ್ ನಗರದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ವೀರಶೈವ ಸಮಾನ ಮನಸ್ಕರ ಸ್ನೇಹ ಬಳಗ, ಕುದೇರು ಮಠದಿಂದ ಮಕ್ಕಳಿಗಾಗಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಮಂಗಳವಾರ ರಂಗಭೂಮಿ ಮಹತ್ವ, ಹಾಡುಗಾರಿಕೆ, ಅಭಿನಯ, ವಿಷಯ ಕುರಿತು ಮಾತನಾಡಿದರು.
ರಂಗಭೂಮಿ ನಿರ್ದೇಶಕರು, ಸ್ತ್ರೀ ಪಾತ್ರಧಾರಿಗಳು, ವಾದ್ಯಗೋಷ್ಠಿ ಕಲಾವಿದರು, ವಸ್ತ್ರಾಲಂಕಾರ ಕಲಾವಿದರು ಬದುಕುತ್ತಿರುವುದು ರಂಗಭೂಮಿ ಕಲಾವಿದರಿಂದ. ಆದರೆ ಆ ರಂಗಭೂಮಿ ಕಲಾವಿದ ಸ್ವಂತ ಹಣ ಖರ್ಚು ಮಾಡಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನೆ. ಒಂದು ನಾಟಕ ಮಾಡಲು ಲಕ್ಷಾಂತರ ರೂ. ಹಣ ಬೇಕಾಗುತ್ತದೆ ತನ್ನ ತಂಡದ ಸಹಕಾರದಿಂದ ಹಣವನ್ನು ಸಂಗ್ರಹಿಸಿ ಅನೇಕ ಕಲಾವಿದರಿಗೆ ಜೀವನಕ್ಕೆ ಬೆನ್ನೆಲುಬಾಗಿರುತ್ತಾರೆ ಎಂದರು.
ಆದ್ದರಿಂದ ನಾಟಕವನ್ನು ಅಭಿನಯಿಸುವ ಪ್ರತಿ ತಂಡಗಳಿಗೆ ಸರ್ಕಾರ ಸಹಕರಿಸಿದರೆ ಅನೇಕ ಕಲಾವಿದರ ಜೀವನಕ್ಕೆ ಅನುಕೂಲವಾಗುತ್ತದೆ. 60 ವರ್ಷದ ಮೇಲ್ಪಟ್ಟ ಹಿರಿಯ ಕಲಾವಿದರಿಗೆ ಗೌರವಧನ ಹೆಚ್ಚಿಸಿದರೆ ಬಹಳ ಸೂಕ್ತ. ಇದರಿಂದ ರಂಗಭೂಮಿ ಕಲೆ ಉಳಿಯುತ್ತದೆ ಬೆಳೆಯುತ್ತದೆ ಎಂದರು.
ಹಿರಿಯರ ರಂಗಭೂಮಿ ಕಲಾವಿದರಾದ ಚಿಕ್ಕಹಳ್ಳಿ ಪುಟ್ಟಣ್ಣ ಮಾತನಾಡಿ, ರಂಗಭೂಮಿಯಿಂದ ಅನೇಕ ದಿಗ್ಗಜ ಚಲನಚಿತ್ರ ನಟರು ಬೆಳೆದಿದ್ದಾರೆ. ಆದ್ದರಿಂದ ರಂಗಭೂಮಿಯಲ್ಲಿ ಪ್ರತಿಯೊಂದನ್ನು ತಿಳಿದು ಅರಿತು ಅಳವಡಿಸಿಕೊಂಡು ಮುನ್ನಡೆದರೆ ಯಶಸ್ಸು, ಕೀರ್ತಿ ನಮಗೂ ನಮ್ಮ ಭಾಷೆ ನಾಡಿಗೂ ಸಲ್ಲುತ್ತದೆ ಎಂದರು.
ಕಲಾವಿದರಾದ ಕೆರೆಹಳ್ಳಿ ದೊರೆಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ್ವರಪುರದ ಸೋಮಶೇಖರ್, ಹೊಸಕೋಟೆ ನಂದೀಶ್,ಮುಳ್ಳೂರು ಪರ್ವತಪ್ಪ, ಮೊಸಂಬಾಯನಹಳ್ಳಿ ದೊಡ್ಡಬುದ್ಧಿ, ಕೆರೆಹಳ್ಳಿ ಲೋಹಿತ್, ಹೊಸಕೋಟೆ ಪ್ರಭುಸ್ವಾಮಿ, ಶಿವಮಲ್ಲಪ್ಪ, ಸುಂದರಪ್ಪ, ಕೆಬ್ಬೆಹುಂಡಿ ಶಿವಕುಮಾರ್, ಸುತ್ತೂರು ನಾಗೇಶ್, ಬಾಗಳಿ ಮಹೇಶ್, ರಂಗಸ್ವಾಮಿ ಇತರರು ಪೌರಾಣಿಕ ನಾಟಕಗಳ ಮಹತ್ವವನ್ನು ತಿಳಿಸಿದರು. ದೇವಪ್ಪಾಜಿ, ಪುಟ್ನಂಜಪ್ಪ , ಧನಂಜಯ್, ಕೆರೆಹಳ್ಳಿ ಪರಶಿವಮೂರ್ತಿ, ಹೂಟಗಳ್ಳಿ ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net