ಜೀವನ ಕಟ್ಟಿಕೊಳ್ಳಲು ಅಕ್ಕನ ಜೊತೆಗೆ ಬಂದ ತಂಗಿ, ಮನೆಯಿಂದ ಹೊರಗೆ ಹೋದ ಕೆಲವೇ ತಾಸಿಗೆ ಶವವಾದಳು

Murder Crime
Published on

ಬೆಂಗಳೂರು : ರಾತ್ರಿ ಮನೆಯಿಂದ ಹೊರಗೆ ಹೋಗಿದ್ದ ಯುವತಿ, ಬೆಳಗಿನ ಜಾವ ಶವವಾಗಿ ಪತ್ತೆಯಾಗಿದ್ದಾಳೆ.

ಮಹೇಶ್ವರಿನಗರ ನಿವಾಸಿ ಮಹಾನಂದಿ (21) ಕೊಲೆಯಾದ ಯುವತಿ. ದುಷ್ಕರ್ಮಿಗಳು ಕತ್ತು ಹಿಸುಕಿ ಉಸಿರುಗಟ್ಟಿಸಿ ಯುವತಿಯನ್ನು ಹತ್ಯೆ ಮಾಡಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ ಮೂಲದ ಸರೋಜಾ ಮತ್ತು ಮಹಾನಂದಿ ಅಕ್ಕ-ತಂಗಿ ಮಹೇಶ್ವರಿನಗರದಲ್ಲಿ ನೆಲೆಸಿದ್ದರು. 5 ವರ್ಷಗಳ ಹಿಂದೆ ನಗರಕ್ಕೆ ಬಂದಿರುವ ಸರೋಜಾ, ಸೆಲ್ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಐದು ತಿಂಗಳ ಹಿಂದೆ ತನ್ನ ತಂಗಿ ಮಹಾನಂದಿಯನ್ನು ನಗರಕ್ಕೆ ಕರೆತಂದು ತನ್ನೊಂದಿಗೆ ಇಟ್ಟುಕೊಂಡು ಸೆಲ್ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಕೊಡಿಸಿದ್ದಳು.

ಗುರುವಾರ ರಾತ್ರಿ 8 ಗಂಟೆಗೆ ಮಹಾನಂದಿ, ಅಡುಗೆ ಮಾಡುತ್ತಿದ್ದಾಗ ಹೊರಗೆ ಹೋಗಿದ್ದಳು. ಅರ್ಧ ತಾಸು ಆದರೂ ವಾಪಸ್ ಬಂದಿರಲಿಲ್ಲ. ಆತಂಕಗೊಂಡು ಎಲ್ಲೆಡೆ ಹುಡುಕಾಟ ನಡೆಸಿ ಕೊನೆಗೆ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಬೆಳಗ್ಗೆ ಬರಬಹುದು ಎಂದು ಸುಮ್ಮನಾಗಿದ್ದರು. ಶುಕ್ರವಾರ ಬೆಳಗಿನ ಜಾವ 5.30ರಲ್ಲಿ ಮನೆಯ ಹೊರ ಆವರಣದಲ್ಲೇ ಮಹಾನಂದಿ ಮೃತದೇಹ ಪತ್ತೆಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕೊಲೆ ಆರೋಪಿಗಳ ಸುಳಿವು ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹದೇವಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net