ಕೈ ಕೊಟ್ಟ ಯುವತಿ: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ

Crime Logo
Published on

ಬೆಂಗಳೂರು: ಪ್ರೀತಿಗೆ ನಿರಾಕರಿಸಿದಕ್ಕೆ ಮನನೊಂದ ಯುವಕ ಪ್ರೇಯಸಿಯ ಮನೆ ಮುಂದೆ ಹೋಗಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿಯ ಕೋಡಿಪಾಳ್ಯದಲ್ಲಿ ನಡೆದಿದೆ.

ಅನೇಕಲ್ ಜಿಗಣಿಯ ಕಲ್ಲುಬಾಲು ಗ್ರಾಮದ ರಾಕೇಶ್(26) ಆತ್ಮಹತ್ಯೆಗೆ ಶರಣಾದ ಯುವಕ.
ಬುಧವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಗುರುವಾರ ಬೆಳಗ್ಗೆ ಯುವಕ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ ಕುಟುಂಬವು ಮೂಲತಃ ಹೆಮ್ಮಿಗೆಪುರವಾಗಿದ್ದು ಕೆಲ ವರ್ಷಗಳಿಂದ ಕೋಡಿಪಾಳ್ಯದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿತ್ತು. ಯುವಕ ಹೆಮ್ಮಿಗೆಪುರದಲ್ಲಿದ್ದ ಸಂಬಂಧಿಕರ ಮನೆಗೆ ಬಂದಾಗ ಯುವತಿಯ ಪರಿಚಯವಾಗಿ, ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿತ್ತು.
ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ರಾಕೇಶ್, ಕಳೆದ ಐದಾರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಆ ಯುವತಿಗೆ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥವಾಗಿದ್ದು, ಹೀಗಾಗಿ ಯುವತಿ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ತಾನು ಪ್ರೀತಿಸಿದ ಯುವತಿಯು ಬೇರೆ ಹುಡುಗ ಜತೆ ಓಡಾಡುತ್ತಿರುವುದು ಕಂಡು ಆಕ್ರೋಶಗೊಂಡಿದ್ದ ಆತ ಯುವತಿಗೆ ಪೋನ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದ. ಈ ಬಗ್ಗೆ ಯುವತಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಬುಧವಾರ ಮಧ್ಯಾಹ್ನ ೨ ಗಂಟೆಯ ಸಮಯದಲ್ಲಿ ನೇರವಾಗಿ ಯುವತಿ ಮನೆಗೆ ಹೋಗಿದ್ದ ಯುವಕ ತನ್ನನ್ನು ಪ್ರೀತಿಸುವಂತೆ ಪರಿ ಪರಿಯಾಗಿ ಕೇಳಿದ್ದಾನೆ. ಇದಕ್ಕೆ ಯುವತಿ ಒಲ್ಲೆ ಎಂದು ಹೇಳಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಇದರಿಂದ ಮನನೊಂದ ಯುವಕ ಪ್ರೀತಿಸದಿದ್ದರೆ ಸಾಯುವುದಾಗಿ ಬೆದರಿಸಿ ಬಾಟಲ್ನಿಂದ ತಂದಿದ್ದ ಪೆಟ್ರೋಲ್ ಮೈ ಮೇಲೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ನೋಡು ನೋಡುತ್ತಿದ್ದಂತೆ ಬೆಂಕಿ ಇಡೀ ದೇಹಕ್ಕೆ ಬೆಂಕಿ ವ್ಯಾಪಿಸಿಕೊಂಡಿದೆ. ಇದನ್ನು ಕಂಡ ಸ್ಥಳೀಯರು ಬೆಂಕಿ ನಂದಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದರು. ದೇಹದ ಬಹುತೇಕ ಭಾಗಗಳು ಸುಟ್ಟು ಹೋಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳ್ಳಗೆ ಸಾವನ್ನಪ್ಪಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net