ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಾಯಿಗಳ ಹೆಸರು! ವರನ ಶ್ವಾನ ಪ್ರೇಮಕ್ಕೆ ಫಿದಾ ಆದ ವಧು

Dog Lover
Published on

ಭೋಪಾಲ್​: ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಸುಂದರ ಮತ್ತು ಅಪರೂಪದ ಕ್ಷಣವಾಗಿದೆ. ಆದುದರಿಂದಲೇ ಈ ಒಂದು ಕ್ಷಣವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬುದು ಎಲ್ಲರ ಭಾವನೆ. ಆಮಂತ್ರಣ ಪತ್ರಿಕೆಯಿಂದ ಹಿಡಿದು ಮದುವೆ ಮಂಟಪದವರೆಗೆ ಇಂದಿನ ಪೀಳಿಗೆಯ ಯುವಕರು ಎಲ್ಲದರಲ್ಲೂ ವಿಶಿಷ್ಟವಾಗಿ ಮತ್ತು ವಿನೂತವಾಗಿರಲು ಬಯಸುತ್ತಾರೆ.

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಹೆಸರನ್ನು ಮುಖ್ಯವಾಗಿ ಬರೆಯುತ್ತಾರೆ. ಇದಲ್ಲದೆ, ಸಂಬಂಧಿಕರ ಹೆಸರನ್ನೂ ಮುದ್ರಿಸಲಾಗುತ್ತದೆ. ಆದರೆ ಮದುವೆ ಕಾರ್ಡಿನಲ್ಲಿ ಯಾರಾದರೂ ತಮ್ಮ ಸಾಕುಪ್ರಾಣಿಗಳ ಹೆಸರನ್ನು ಅಚ್ಚು ಮಾಡುತ್ತಾರೆಯೇ? ಈ ಪ್ರಶ್ನೆಗೆ ಯುವಕನೊಬ್ಬ ಹೌದು ಎಂದು ಉತ್ತರಿಸಿದ್ದಾನೆ. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸಾಕಿದ ನಾಯಿಗಳ ಹೆಸರನ್ನೂ ಬರೆಸಿದ್ದಾರೆ.

ನಾಯಿಗಳು ನಂಬಿಕೆಯ ಸಂಕೇತವೆಂದು ನಮಗೆ ತಿಳಿದಿದೆ. ತುತ್ತು ಕೊಟ್ಟು ಹಸಿವು ನೀಗಿಸುವ ಒಡೆಯನಿಗಾಗಿ ತಮ್ಮ ಪ್ರಾಣವನ್ನೂ ತ್ಯಾಗ ಮಾಡುತ್ತವೆ. ಅದಕ್ಕಾಗಿಯೇ ಅನೇಕ ಜನರು ನಾಯಿಗಳನ್ನು ತಮ್ಮ ಕುಟುಂಬ ಸದಸ್ಯರಂತೆ ಪರಿಗಣಿಸುತ್ತಾರೆ ಮತ್ತು ಪ್ರೀತಿಯನ್ನು ತೋರಿಸುತ್ತಾರೆ. ಅದೇ ರೀತಿ ಯುವಕನೊಬ್ಬ ತನ್ನ ಮುದ್ದಿನ ನಾಯಿಗಳ ಹೆಸರನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಆ ಮೂಕ ಜೀವಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರಾಣಿಪುರದ ಯಶವಂತ್ ರೈಕ್ವಾರ್ ಎಂಬಾತ ತನ್ನ ಮದುವೆ ಕಾರ್ಡಿನಲ್ಲಿ ತನ್ನ ಸಾಕು ನಾಯಿಗಳ ಹೆಸರನ್ನು ಮುದ್ರಿಸಿದ್ದಾನೆ. ಐದು ವರ್ಷಗಳ ಹಿಂದೆ ಆತ ತನ್ನ ಸ್ನೇಹಿತನ ಮನೆಗೆ ಹೋಗಿದ್ದ. ಅಲ್ಲಿಂದ ವಾಪಸ್ ಬರುವಾಗ ಯಶವಂತ್ ಅವರ ಬೈಕ್ ಕೆಳಗೆ ನಾಯಿ ಮರಿಯೊಂದು ಸಿಲುಕ್ಕಿತ್ತು. ಆದರೆ, ಅದೃಷ್ಟವಶಾತ್ ನಾಯಿಗೆ ಏನು ಆಗಲಿಲ್ಲ. ಆ ನಾಯಿಮರಿಯನ್ನು ತನ್ನ ಮನೆಗೆ ತೆಗೆದುಕೊಂಡು ಬಂದಿದ್ದ ಯಶವಂತ್ ಪ್ರೀತಿಯಿಂದ ಸಾಕಿ ಸಲುಹಿದ್ದಾರೆ. ಇದರೊಂದಿಗೆ ಮತ್ತೆ ಮೂರು ನಾಯಿಗಳನ್ನು ಮನೆಗೆ ತಂದು ಸಾಕಿದ್ದಾರೆ.

ಯಶವಂತ್ ಇತ್ತೀಚೆಗೆ ಮದುವೆಯಾದರು. ಈ ವೇಳೆ ನಾಯಿಗಳ ಮೇಲಿನ ಪ್ರೀತಿಯನ್ನು ವಿನೂತನ ರೀತಿಯಲ್ಲಿ ವ್ಯಕ್ತಪಡಿಸಿದರು. ಮದುವೆ ಕಾರ್ಡಿನಲ್ಲಿ ರಾಕಿ, ಜೋಜೊ, ಕಲು ಮತ್ತು ಲಾಲು ಎಂಬ ನಾಲ್ಕು ನಾಯಿಗಳ ಮುದ್ರಿಸಿದ್ದರು. ತಮ್ಮ ಮದುವೆ ಸಮಾರಂಭದಲ್ಲಿ ಈ ನಾಯಿಗಳನ್ನು ಪ್ರತಿ ಕಾರ್ಯಕ್ರಮದ ಭಾಗವಾಗಿಸಿದರು. ಅಲ್ಲದೆ, ತನ್ನ ಮದುವೆಯ ಮೆರವಣಿಗೆಗೆ ಹೊರಡುವಾಗ, ಅವರು ಆ ನಾಲ್ಕು ನಾಯಿಗಳಿಗೆ ಅರಿಶಿನ ಮತ್ತು ಕುಂಕುಮವನ್ನು ಸಹ ಹಾಕಿದ್ದರು. ವಧುವಿನ ಕುಟುಂಬಸ್ಥರು ಹಾಗೂ ಸಂಬಂಧಿಕರು ಯಶವಂತನ ಮೂಕಪ್ರೇಮಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಶವಂತ್ ಮದುವೆ ಕಾರ್ಡ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net