ಇಂದಿನಿಂದ ದುಬಾರಿ ದುನಿಯಾ; ಯಾವುದೆಲ್ಲ ದುಬಾರಿ? ಇಲ್ಲಿದೆ ಸಂಪೂರ್ಣ ವಿವರ

ವಿಜಯವಾಣಿ (6)
Published on
  • ಟೋಲ್, ಔಷಧ, ಕಾರು, ವಿದೇಶಿ ಶಿಕ್ಷಣ, ವೀಸಾ ಶುಲ್ಕ ತುಟ್ಟಿ
  • ಸುಡಲಿದೆ ಹಾಲು, ವಿದ್ಯುತ್, ಸಿಎನ್​ಜಿ ದರ | ಜೇಬಿಗೂ ಭಾರ

ನವದೆಹಲಿ: ನೂತನ ಆರ್ಥಿಕ ವರ್ಷದ ಮೊದಲ ದಿನದಿಂದಲೇ ಬದುಕು ದುಬಾರಿ ಆಗುತ್ತಿದೆ. ಜನರ ಬದುಕಿನ ಮೇಲೆ ಪರಿಣಾಮ ಬೀರುವಂತಹ ಹಲವಾರು ಬದಲಾವಣೆಗಳು ಏ.1ರಿಂದಲೇ ಜಾರಿಯಾಗುತ್ತಿದೆ. ಹೆದ್ದಾರಿ ಟೋಲ್, ಔಷಧ, ಕಾರು, ವಿದೇಶಿ ಶಿಕ್ಷಣ, ವೀಸಾ ಶುಲ್ಕ ಹೆಚ್ಚಳದ ಜತೆಗೆ ಹಾಲು, ವಿದ್ಯುತ್, ಸಿಎನ್​ಜಿ ದರ ಕೂಡ ಏರಿಕೆ ಆಗುತ್ತಿದೆ. ಇದರ ಜತೆಗೆ ಜನರ ಖರ್ಚುವೆಚ್ಚಕ್ಕೆ ಸಂಬಂಧಿಸಿದ ಹಲವು ರಿಯಾಯಿತಿ, ವಿನಾಯಿತಿ, ನಿಯಮ- ನಿಬಂಧನೆಗಳು, ಹೊಸ ಪದ್ಧತಿ ಜಾರಿ ಆಗುತ್ತಿದೆ. ಹೆದ್ದಾರಿ ಟೋಲ್ ಶುಲ್ಕ ಒಂದೇ ವರ್ಷದಲ್ಲಿ 2ನೇ ಬಾರಿ ಹೆಚ್ಚಳವಾಗುತ್ತಿದೆ. 2024ರ ಜೂನ್​ನಲ್ಲೂ ಏರಿಕೆಯಾಗಿತ್ತು. ಮಾ. 31ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಆದೇಶ ಹೊರಡಿಸಿದೆ. ವಿವಿಧ ಟೋಲ್ ಪ್ಲಾಜಾಗಳಿಗೆ ಎಷ್ಟು ದರ ಏರಿಕೆ ಆಗುತ್ತದೆ ಎಂಬುದರ ವಿಸ್ತೃತ ಮಾಹಿತಿಯನ್ನು ಸಂಬಂಧಿಸಿದ ಅಧಿಸೂಚನೆಯಲ್ಲಿ ನಮೂದಿಸಿದೆ. ಇದರಿಂದ ಈ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರು ಮತ್ತು ವಾಣಿಜ್ಯ ವಾಹನಗಳ ಮಾಲೀಕರಿಗೆ ಹೊರೆಯಾಗಲಿದೆ.

ಪ್ರಮುಖ ಬದಲಾವಣೆ

  • ನಂದಿನಿ ಹಾಲು, ಮೊಸರು 4 ರೂ. ಏರಿಕೆ
  • ವಿದ್ಯುತ್ ಯೂನಿಟ್ ದರ 36 ಪೈಸೆ ಹೆಚ್ಚಳ
  • ಜಿಐಎಸ್ ಆಧಾರಿತ ಆಸ್ತಿ ಮಾರ್ಗಸೂಚಿ ದರ
  • ಪರಿಷ್ಕೃತ ತೆರಿಗೆ ಸ್ಲ್ಯಾಬ್ ಇಂದಿನಿಂದಲೇ ಜಾರಿ
  • ಬ್ಯಾಂಕ್, ಯುಪಿಐ ಮೊಬೈಲ್ ವೆರಿಫಿಕೇಶನ್
  • ಪ್ರತಿ ವಾರ ಮೊಬೈಲ್ ವೆರಿಫಿಕೇಷನ್ ಕಡ್ಡಾಯ
  • ಎಟಿಎಂ ವಿತ್​ಡ್ರಾವಲ್ ಶುಲ್ಕ 20-25 ರೂ.
  • 3 ಫ್ರೀ ಅವಕಾಶದ ಬಳಿಕ ಶುಲ್ಕ ಹೆಚ್ಚಳ ಜಾರಿ
  • ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್ ನೀತಿ ಅನುಷ್ಠಾನ
  • ಬ್ಯಾಂಕ್​ಗಳಲ್ಲಿ ಪಾಸಿಟಿವ್ ಪೇ ಸಿಸ್ಟೆಮ್ ಜಾರಿ
  • ಬ್ಯಾಂಕ್ ಸೇವೆಗಳಲ್ಲಿ ಎಐ ಮಾದರಿ ಅನುಷ್ಠಾನ
  • ಯುಪಿಐ ಲಿಂಕ್ ಆಗಿ ಬಳಸದ ನಂಬರ್ ಡಿಲೀಟ್
  • ಕೆಲವು ಕಡೆ ಎಸ್​ಬಿ, ಫಿಕ್ಸೆಡ್ ಠೇವಣಿ ಬಡ್ಡಿ ಏರಿಕೆ
  • ಹಲವು ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮ ಬದಲು
  • ಚೀನಾ ಸರಕುಗಳ ಮೇಲೆ ಶೇ. 10 ಆಮದು ಸುಂಕ

900 ಔಷಧ ದುಬಾರಿ

ಡಯಾಬಿಟೀಸ್, ಹೃದ್ರೋಗ, ಸೋಂಕು ಮುಂತಾದ ಕಾಯಿಲೆಗೆ ಬಳಸುವ 900ಕ್ಕೂ ಹೆಚ್ಚು ಔಷಧಗಳ ಬೆಲೆ ಶೇ. 1.74ರಷ್ಟು ಹೆಚ್ಚಾಗಲಿದೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (ಎನ್​ಪಿಪಿಎ) ಇವುಗಳ ದರ ನಿರ್ಧರಿಸುತ್ತದೆ. ‘ಆದರೆ, ಹಿಂದಿನ ವರ್ಷದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧರಿಸಿ ಪ್ರತಿ ವರ್ಷ ಬೆಲೆ ಪರಿಷ್ಕರಿಸಲಾಗುತ್ತಿದ್ದು, ಇದಕ್ಕೆ ಔಷಧ ಉತ್ಪಾದಕ ಕಂಪನಿಗಳು ಸರ್ಕಾರದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ’ ಎಂದು ಎನ್​ಪಿಪಿಎ ಪ್ರಕಟಣೆಯಲ್ಲಿ ತಿಳಿಸಿದೆ. ಅಜಿತ್ರೋಮೈಸಿನ್ ಆಂಟಿಬಯಾಟಿಕ್ ಇನ್ನು ಮುಂದೆ 250 ಮಿಲಿ ಗ್ರಾಂಗೆ 11.87 ರೂ. ಮತ್ತು 500 ಮಿಲಿಗ್ರಾಂಗೆ 23.98 ರೂ. ಮಿತಿಯೊಳಗೆ ಮಾರಬಹುದಾಗಿದೆ.

ಅಮಾಕ್ಸಿಸಿಲಿನ್ ಮತ್ತು ಕ್ಲಾವುಲಾನಿಕ್ ಆಸಿಡ್ ಫಾಮುಲೇಷನ್ ಒಳಗೊಂಡ ಆಂಟಿಬ್ಯಾಕ್ಟೀರಿಯಲ್ ಡ್ರೖೆ ಸಿರಪ್ ಪ್ರತಿ ಮಿಲಿ ಲೀ.ಗೆ 2.09 ರೂ. ದರ ಇರಲಿದೆ. ಅಸಿಕ್ಲೋವಿರ್​ನಂತಹ ಆಂಟಿವೈರಲ್​ಗಳಿಗೆ 200 ಮತ್ತು 400 ಮಿಲಿ ಗ್ರಾಂಗೆ ಕ್ರಮವಾಗಿ 7.74 ರೂ. ಮತ್ತು 13.90 ರೂ. ಆಗಲಿದೆ. ಇದೇ ರೀತಿ ಆಂಟಿ ಮಲೇರಿಯಲ್ ಡ್ರಗ್, ಡೈಕ್ಲೊಫೆನಾಕ್​ನಂತಹ ಪೇನ್ ಕಿಲ್ಲರ್, ಟೈಪ್ 2 ಡಯಾಬಿಟೀಸ್​ಗೆ ಬಳಸುವ ಮೆಟ್​ಫಾರ್ವಿುನ್, ಗ್ಲಿಮೆಪಿರೈಡ್ ಮುಂತಾದವು ಸೇರಿದಂತೆ ಸುಮಾರು ಒಂದು ಸಾವಿರ ಔಷಧಗಳ ಬೆಲೆಗಳ ಮಿತಿಯನ್ನೂ ಎನ್​ಪಿಪಿಎ ವಿವರವಾಗಿ ಪ್ರಕಟಿಸಿದೆ.

ಪಿಎಫ್ ಆಟೊ ಸೆಟ್ಲ್​ಮೆಂಟ್ ಮಿತಿ 5 ಲಕ್ಷ ರೂ.ಗೆ ಏರಿಕೆ

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಪಿಎಫ್ ಹಿಂಪಡೆಯುವಿಕೆಯ ಆಟೊ ಸೆಟ್ಲ್​ಮೆಂಟ್​ ವಿುತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಮಹತ್ವದ ನಿರ್ಧಾರ ಕೈಗೊಂಡಿದ್ದು, ಪಿಎಫ್ ಹಿಂಪಡೆಯುವಿಕೆಯ ಆಟೊ ಸೆಟ್ಲ್​ಮೆಂಟ್ ಮಿತಿಯನ್ನು 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಿದೆ. ಈ ಕ್ರಮದಿಂದ ದೇಶದ 7.5 ಕೋಟಿ ನೌಕರರಿಗೆ ಅನುಕೂಲವಾಗಲಿದೆ.

ಈ ನಿರ್ಧಾರವನ್ನು ಇಪಿಎಫ್​ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಕಾರ್ಯಕಾರಿ ಸಮಿತಿಯ 113ನೇ ಸಭೆಯಲ್ಲಿ ಅನುಮೋದಿಸಲಾಗಿದೆ. ಇದರಿಂದಾಗಿ ಪಿಎಫ್ ಹಿಂಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳವಾಗಲಿದೆ. ಇದರ ಜೊತೆಗೆ, ಪಿಎಫ್ ಹಣವನ್ನು ಹಿಂಪಡೆಯಲು ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೆಸ್) ಸೌಲಭ್ಯವನ್ನು ಸಹ ಪರಿಚಯಿಸಲು ಉದ್ದೇಶಿಸಲಾಗಿದೆ. ಇದು ಸೆಟ್ಲ್​ಮೆಂಟ್​ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇನ್ನು ಮುಂದೆ ಕ್ಲೈಮ್ ಸೆಟ್ಲ್ ಮೆಂಟ್ ಸಮಯವು 10 ದಿನಗಳಿಂದ 3 ದಿನಗಳಿಗೆ ಇಳಿಕೆಯಾಗಲಿದೆ. ಇದು ನೌಕರರಿಗೆ ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣವನ್ನು ತ್ವರಿತವಾಗಿ ಪಡೆಯಲು ಸಹಾಯ ಮಾಡುತ್ತದೆ.

2020 ಏಪ್ರಿಲ್​ನಲ್ಲಿ ವೈದ್ಯಕೀಯ ಉದ್ದೇಶಕ್ಕಾಗಿ ಸ್ವಯಂ ಕ್ಲೈಮ್ ಸೆಟ್ಲ್ ಮೆಂಟ್ ಪ್ರಾರಂಭಿಸಲಾಗಿತ್ತು. ನಂತರ ಇದನ್ನು ಶಿಕ್ಷಣ, ಮದುವೆ ಮತ್ತು ವಸತಿಗೂ ವಿಸ್ತರಿಸಲಾಯಿತು. ಇಪಿಎಫ್​ಒ ಆಟೊ ಸೆಟ್ಲ್​ಮೆಂಟ್ ವ್ಯವಸ್ಥೆಯಲ್ಲಿ ಮಾನವನ ಸಹಾಯವಿಲ್ಲದೆ ಸ್ವಯಂಚಾಲಿತವಾಗಿ ಕ್ಲೈಮ್ಳನ್ನು ವಿಲೇವಾರಿ ಮಾಡಲಾಗುತ್ತದೆ.

  • ಗರಿಷ್ಠ 5 ಲಕ್ಷ ರೂ. ಮೊತ್ತವನ್ನು ವಿತ್​ಡ್ರಾ ಮಾಡಬಹುದು
  • 7.5 ಕೋಟಿ ನೌಕರರಿಗೆ ಅನುಕೂಲ
  • ಸೆಟ್ಲ್​ಮೆಂಟ್ ಸಮಯ
  • 10ರಿಂದ 3 ದಿನಕ್ಕೆ ಇಳಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net