

ಕಿಕ್ಕೇರಿ: ಸರ್ವರ ಬದುಕು ಹಸನಾಗಿ, ಸಮಪಾಲು, ಸಮಬಾಳು ಸಿಗುವಂತಾಗಲು ಕಾನೂನಿನಡಿಯಲ್ಲಿ ಬದುಕಲು ಸಂವಿಧಾನವನ್ನು ಕೊಟ್ಟ ವಿಶ್ವಜ್ಞಾನಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಕಿಕ್ಕೇರಿ ಇನ್‌ಸ್ಪೆಕ್ಟರ್ ರೇವತಿ ಬಣ್ಣಿಸಿದರು.
ಇಲ್ಲಿನ ಆರಕ್ಷಕ ಠಾಣೆಯಲ್ಲಿ ಸೋಮವಾರ ಏರ್ಪಡಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಡತನ, ಅಸ್ಪಶ್ಯತೆ ಕಹಿ ಉಂಡು ಮುಂದಿನ ಪೀಳಿಗೆ ಇಂತಹ ಕೆಟ್ಟ ವ್ಯವಸ್ಥೆಯಿಂದ ದೂರವಾಗಲು ಶ್ರಮಿಸಿದರು. ಅರಿವು, ಹಕ್ಕನ್ನು ತಿಳಿದು ಎಲ್ಲರೂ ಬದುಕಲು ಶ್ರೇಷ್ಠ ಸಂವಿಧಾನವನ್ನು ನೀಡಿ ಇದರಡಿಯಲ್ಲಿ ಬದುಕಲು ದಾರಿದೀಪವಾದರು ಎಂದರು.
ಮಹಿಳೆಯರಿಗೆ ಮತದಾನದ ಹಕ್ಕನ್ನು ದೊರಕಿಸಿಕೊಟ್ಟರು. ಪ್ರಜೆಗಳಿಂದ ರಚನೆಯಾದ ಪ್ರಜಾಪ್ರಭುತ್ವದಿಂದ ಸಮಾನತೆ ಸಿಗಲಿ. ಅನಕ್ಷರತೆ ಪಿಡುಗು ದೂರವಾಗಿ ಕಡ್ಡಾಯ ಶಿಕ್ಷಣದಿಂದ ಸಾಕ್ಷರಸ್ಥರಾಗಬೇಕಿದೆ. ಸಾಕ್ಷರತೆಯಿಂದ ಸುಂದರ ಸಮಾಜ ಸೃಷ್ಟಿಯಾಗಲಿದೆ. ಸಂವಿಧಾನವನ್ನು ಗೌರವಿಸಿ ಕಾನೂನು ಪಾಲಿಸಿದರೆ ಎಲ್ಲರ ಬದುಕು ಸುಖವಾಗಲಿದೆ. ಜಾತಿ, ಮತ ಮರೆತು ವಿಶ್ವಮಾನವತೆ, ವಿಶ್ವಭ್ರಾತೃತ್ವ ಅಳವಡಿಸಿಕೊಳ್ಳಿ ಎಂಬ ತತ್ವ ಸಿದ್ಧಾಂತ ತಿಳಿಸಿದ ಫಲದಿಂದ ನೊಂದ, ದುರ್ಬಲ ಸಮುದಾಯಕ್ಕೆ ಬದುಕುವ ಹಕ್ಕು ಸಿಕ್ಕಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚಲಾಯಿತು. ಎಎಸ್‌ಐ ರಮೇಶ್, ಶಿವಲಿಂಗೇಗೌಡ, ಸಿಬ್ಬಂದಿ ಸುಪ್ರೀತ್, ಪ್ರಶಾಂತ್, ಸುನೀಲ್‌ಕುಮಾರ್, ಲೋಕೇಶ್, ಕೃಷ್ಣ, ಜಯರಾಮ, ಪ್ರಸನ್ನ, ಲಕ್ಷ್ಮೀಪುರ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ ಮತ್ತಿತರರು ಹಾಜರಿದ್ದರು.