

ತಿ.ನರಸೀಪುರ: ದಾಸೋಹ ಕಾಯಕ ಮನುಷ್ಯನನ್ನು ಮೋಕ್ಷದ ಹಾದಿಗೆ ಕೊಂಡೊಯ್ಯಲಿದೆ. ಜಗತ್ತನ್ನು ಸೃಷ್ಟಿಸಿ, ನಿಯಂತ್ರಿಸುತ್ತಿರುವ ಅಗೋಚರ ಶಕ್ತಿಯಂತೆ ದಾಸೋಹದಿಂದಲೂ ಅಲ್ಪ ಶಕ್ತಿಯನ್ನು ಪಡೆಯಲು ಸಾಧ್ಯವಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಬಿಲಿಗೆರೆಹುಂಡಿ ಗ್ರಾಮದಲ್ಲಿ ಗುರುವಾರ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಕಟ್ಟಡ ಜೀರ್ಣೋದ್ಧಾರ ಹಾಗೂ ಶ್ರೀ ಗುರುಮಲ್ಲೇಶ್ವರ ಭವನ ಉದ್ಘಾಟನೆ ನೆರವೇರಿಸಿ, ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮಠಗಳಿಗೆ ದಾಸೋಹ ಸೇವೆಯಿಂದ ಭಗವಂತನ ಕೃಪೆಗೆ ಸನಿಹವಾಗಬಹುದು ಎಂದರು.
ಸೃಷ್ಟಿಯಲ್ಲಿ ಹೊಸತನ್ನ ಸೃಷ್ಟಿಸುವ ಶಕ್ತಿ ಯಾರಿಗೂ ಇಲ್ಲ. ಪ್ರಕೃತಿದತ್ತವಾಗಿರುವುದನ್ನು ಮರು ಸ್ಥಾಪಿಸುವುದು ಸಾಧ್ಯವಿದೆ. ಸಾಂಪ್ರದಾಯಿಕವಾಗಿ ಸರಳತೆಯಿಂದ ಧರ್ಮವನ್ನು ಆಚರಣೆ ಮಾಡಬೇಕೆಂದು ಪವಾಡ ಸಿದ್ಧಿಪುರುಷ ಶ್ರೀ ಗುರುಮಲ್ಲೇಶ್ವರರು ಅಂದಿನ ಕಾಲದಲ್ಲಿಯೇ ತಿಳಿಸಿಕೊಟ್ಟಿರುವುದು ಜನಜನಿತವಾಗಿದೆ. ಅವರ ಹೆಸರಿನಲ್ಲಿ ದಾಸೋಹ ಕಾಯಕವನ್ನ ಮಠಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ದೇವನೂರು ದಾಸೋಹ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಮಠವನ್ನು ಕಟ್ಟಿ, ದಾಸೋಹ ಕಾರ್ಯವನ್ನು ನಿತ್ಯವೂ ನಿರ್ವಹಿಸುವುದು ನಿಜಕ್ಕೂ ಸವಾಲಿನ ಕಾರ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶ್ರೀ ಗುರುಮಲ್ಲೇಶ್ವರರ ಹೆಸರಿನಲ್ಲಿ ಮಠವನ್ನು ಕಟ್ಟಿ, ಜೀರ್ಣೋದ್ಧಾರಗೊಳಿಸಿರುವ ಗುರುಸ್ವಾಮಿ ಸ್ವಾಮೀಜಿ ಅವರ ಶ್ರಮ ನಿಜಕ್ಕೂ ಮೆಚ್ಚುವಂತಹದ್ದು. ಭಕ್ತರನ್ನು ಒಗ್ಗೂಡಿಸಿ ದಾಸೋಹ ಕಾರ್ಯವನ್ನು ಆಯೋಜಿಸುತ್ತಿರುವುದು ಮಠ ಮಾನ್ಯಗಳ ಹಿರಿಮೆಯನ್ನ ಹೆಚ್ಚಿಸಿದೆ ಎಂದು ಕೊಂಡಾಡಿದರು.
ದಾಸೋಹದ ರೂವಾರಿ, ಪವಾಡ ಪುರುಷ ಶ್ರೀ ಗುರುಮಲ್ಲೇಶ್ವರರ ಕುರಿತು ಹಲವಾರ ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಉಪನ್ಯಾಸ ನೀಡಿದರು. ಮಾಡ್ರಳ್ಳಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿದರು.
ವಾಟಾಳು ಮಠದ ಶ್ರೀ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ವಿ.ಬಸವರಾಜು, ತಾಲೂಕು ಅಧ್ಯಕ್ಷ ಸಿ.ಎಂ.ಪ್ರಕಾಶ್ ಹಾಗೂ ಯುವ ಘಟಕದ ಅಧ್ಯಕ್ಷ ಕೆ.ಎನ್.ಅಶೋಕ್ ಮಾತನಾಡಿದರು.