

ಹೊಳೆನರಸೀಪುರ: 12ನೇ ಶತಮಾನದ ಬಸವಾದಿ ಶರಣರ ವಚನಗಳು ವಿಶ್ವಮಾನ್ಯ ಸಾರ್ವಕಾಲಿಕ ಮತ್ತು ಮಾನವ ಕಲ್ಯಾಣ ಕೇಂದ್ರೀಕೃತ. ಬಸವತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ತಿಳಿಸಿದರು. ತಾಲೂಕಿನ ಹಳ್ಳಿ ಮೈಸೂರು ಹೋಬಳಿ ದೊಡ್ಡಕಾಡನೂರು ಗ್ರಾಮದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ವಚನ ಗಾಯನ ಕಂಠಪಾಠಕ್ಕೆ ವಚನ ಪುಸ್ತಕಗಳನ್ನು ವಿತರಣೆ ಮಾಡಿ ಮಾತನಾಡಿದರು. ಈ ಉದಾತ್ತ ತತ್ವಗಳ ಅರಿವು ಮತ್ತು ಅನುಷ್ಠಾನಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಉಂಟು ಮಾಡಲು ಲಿಂಗೈಕ್ಯ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 1986 ರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿದ್ದಾರೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯ ಕಟ್ನವಾಡಿ, ಮುಖ್ಯಶಿಕ್ಷಕ ಪಿ.ಸುರೇಶ್, ವಿಶೇಷ ಉಪನ್ಯಾಸ ನೀಡಿದ ಹುಬ್ಬಳ್ಳಿಯ ಜೀನಿಯಸ್ ಅಕಾಡೆಮಿಯ ಐ.ಜಿ.ಮಂಜುನಾಥ, ಜೆಎಸ್‌ಎಸ್ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.