

I LOVE YOU ಎನ್ನುವುದು ಅಭಿವ್ಯಕ್ತಿ ಮಾತ್ರ ಮತ್ತು ಅದು ಸ್ವತ ಲೈಂಗಿಕ ಉದ್ದೇಶಕ್ಕೆ ಸಮನಾಗುವುದಿಲ್ಲ ಎಂದು ಪೋಕ್ಸೋ ಪ್ರಕರಣದಡಿಯಲ್ಲಿನ ವ್ಯಕ್ತಿಯೊಬ್ಬನ ಶಿಕ್ಷೆಯನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ, ಮಂಗಳವಾರ ಅರ್ಜಿ ವಜಾಗೊಳಿಸಿದೆ.
2015 ರಲ್ಲಿ ಹದಿಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ 35 ವರ್ಷದ ವ್ಯಕ್ತಿಯನ್ನು ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಅವರಿದ್ದ ಪೀಠವು ಖುಲಾಸೆಗೊಳಿಸಿದೆ.
ಯಾರಾದರೂ ತಾನು ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದರೆ ಅಥವಾ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದರೆ, ಅದು ಯಾವುದೇ ರೀತಿಯ ಲೈಂಗಿಕ ಉದ್ದೇಶವನ್ನು ತೋರಿಸುವ ಉದ್ದೇಶಕ್ಕೆ ಸಮನಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
2017 ರಲ್ಲಿ ನಾಗ್ಪುರದ ಸೆಷನ್ಸ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಆ ವ್ಯಕ್ತಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ನ್ಯಾಯಪೀಠವು ಆತನಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಸಹ ವಿಧಿಸಿತ್ತು.
17 ವರ್ಷದ ಬಾಲಕಿ ಶಾಲೆಯಿಂದ ತನ್ನ ಮನೆಗೆ ಹೋಗುತ್ತಿರುವಾಗ ಆ ವ್ಯಕ್ತಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪ ಹೊರಿಸಲಾಗಿದೆ. ಆ ವ್ಯಕ್ತಿ ಬಾಲಕಿಯ ಕೈ ಹಿಡಿದು '' ನಾನು ನಿನ್ನ ಪ್ರೀತಿಸುವೆ '' ಎಂದು ಹೇಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯ ಬಾಲಕಿ ತನ್ನ ತಂದೆ ಬಳಿ ಹೇಳಿದಾಗ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದೀಗ ಆ ವ್ಯಕ್ತಿಯ ಶಿಕ್ಷೆಯನ್ನು ರದ್ದುಗೊಳಿಸಿದ ಹೈಕೋರ್ಟ್, ಆ ಹುಡುಗಿಯೊಂದಿಗೆ ಲೈಂಗಿಕ ಸಂಪರ್ಕ ಸಾಧಿಸುವುದು ಅವನ ಉದ್ದೇಶವಾಗಿತ್ತು ಎಂದು ಯಾವುದೇ ಸಂದರ್ಭ ಸೂಚಿಸಿಲ್ಲ ಎಂದು ಹೇಳಿದೆ.(ಏಜೆನ್ಸೀಸ್)