ಆಭರಣ ಕಳವಾಗಿವೆ ಎಂದು ದೂರು ನೀಡಿದ್ದ ಮಹಿಳೆಯೇ ಕಳ್ಳಿ!

Published on

ಬೇತಮಂಗಲ: ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಮನೆಯವರನ್ನು ಪ್ರಜ್ಞೆ ತಪ್ಪಿಸಿ 200 ಗ್ರಾಂ ಆಭರಣ ದೋಚಿದ್ದರು ಎಂದು ದೂರು ದಾಖಲಿಸಿದ್ದ ಮಹಿಳೆಯನ್ನು ಬೇತಮಂಗಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಪಟ್ಟಣದ 2ನೇ ಬ್ಲಾಕ್​ ನಿವಾಸಿ ನೂರ್​ ಅಮೀನ್​ ಬಂಧಿತೆ.

ವಾರದ ಹಿಂದೆ ಬೇತಮಂಗಲ ಠಾಣೆಯಲ್ಲಿ ಆಭರಣ ದೋಚಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದರು. ಠಾಣೆ ಸಮೀಪವೇ ಇಂತಹ ಕೃತ್ಯ ನಡೆದಿರುವುದಕ್ಕೆ ಆತಂಕಕ್ಕೊಳಗಾಗಿದ್ದ ಪೊಲೀಸರು ತಣ ಪ್ರಕರಣ ಭೇದಿಸಲು ಕಾರ್ಯಪ್ರವೃತ್ತರಾಗಿದ್ದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಧರಣಿದೇವಿ ಮಾಲಗತ್ತಿ ಸೇರಿದಂತೆ ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ಶ್ವಾನದಳ ಸೇರಿದಂತೆ ಇತರ ವಿಶೇಷ ಪೊಲೀಸ್​ ತಂಡಗಳು ಪರಿಶೀಲಿಸಿದ್ದವು. ತನಿಖೆ ಕೈಗೊಂಡಿದ್ದ ಬೇತಮಂಗಲ ಪಿಎಸ್​ಐ ಜಗದೀಶ್​ ರೆಡ್ಡಿ ಮತ್ತು ತಂಡವು ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ದೂರುದಾರರ ಮೇಲೆಯೇ ಅನುಮಾನ ಬಂದಿದೆ. ಆಗ ಮಹಿಳೆಯನ್ನು ವಿಚಾರಣೆ ನಡೆಸಿದಾಗ ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಏಕೆ ಮಾಡಿದ್ದು?: ಬಂಧಿತೆ ನೂರ್​ ಅಮೀನ್​ ಅಕ್ಕ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಈ ಗುಟ್ಟನ್ನು ರಟ್ಟಾಗದಂತೆ ನೋಡಿಕೊಳ್ಳಲು ಆಕೆಯಿಂದ ಆಭರಣ ಪಡೆದಿದ್ದಳು.

ಆಭರಣಗಳು ಕಳೆದುಹೋಗಿವೆ ಎಂದು ಮನೆಯವರನ್ನು ನಂಬಿಸಲು ಈ ರೀತಿಯ ಕಳವು ನಡೆಸಲಾಗಿದೆ ಎಂದು ಠಾಣೆಯಲ್ಲಿ ದೂರು ನೀಡಿದ್ದಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಇವರಿಬ್ಬರ ಕಿತ್ತಾಟಕ್ಕೆ ಕೆಜಿಎ್​ ಜಿಲ್ಲಾ ಪೊಲೀಸ್​ ಹಿರಿಯ ಅಧಿಕಾರಿಗಳೂ ಸೇರಿದಂತೆ ಪೊಲೀಸರನ್ನೇ ಆಟ ಆಡಿಸಿದ ಖತರ್ನಾಕ್​ ಮಹಿಳೆಯ ವಿರುದ್ಧ ದೂರು ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.

ಬೇತಮಂಗಲ ಪಿಎಸ್​ಐ ಜಗದೀಶರೆಡ್ಡಿ, ಶ್ರೀನಿವಾಸ್​, ಸಿಬ್ಬಂದಿ ಶಿವಪ್ರಸಾದ್​, ನಟರಾಜ್​, ಸಂಪಂಗಿ, ರಾಜ್​ಕುಮಾರ್​, ರೇಣುಕಾ ಕಿರಣ್ಣನವರ್​, ಮುರಳಿ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net