

‘ವಿದ್ಯಾವಿನಯಗಳಿಂದ ಕೂಡಿದ ಬ್ರಾಹ್ಮಣ, ಗೋವು, ಆನೆ, ನಾಯಿ ಮತ್ತು ನಾಯಿಯ ಮಾಂಸವನ್ನು ತಿನ್ನುವವನು - ಇವೆೆಲ್ಲರಲ್ಲಿಯೂ ಜ್ಞಾನಿಗಳು ಸಮದರ್ಶಿಗಳಾಗಿರುವರು, ಎಲ್ಲರಲ್ಲಿಯೂ ಏಕವನ್ನೇ ಕಾಣುವರು.
(ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ | ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ || 5.18 )’. ವ್ಯಾವಹಾರಿಕ - ಪಾರಮಾರ್ಥಿಕ ಎರಡೂ ದೃಷ್ಟಿಯಿಂದ ಈ ಶೊ್ಲೕಕವನ್ನು ಅರ್ಥಮಾಡಿಕೊಳ್ಳಬೇಕು. ಆತ್ಮಜ್ಞಾನಿಗಳು ಹೊರಗಿನ ಎಲ್ಲ ಜೀವಿಗಳಲ್ಲಿ ಆತ್ಮವನ್ನೇ ಕಾಣುವರು. ಮೇಜು, ಕುರ್ಚಿ, ಮಂಚ, ಮಣೆ ಬೇರೆಬೇರೆಯಾದರೂ ಮರವೆಂಬ ದೃಷ್ಟಿಯಿಂದ ನೋಡಿದಾಗ ಎಲ್ಲವೂ ಒಂದೇ. ಹಾಗೆಯೇ ಪಂಡಿತರಿಗೆ ಎಲ್ಲ ಜೀವಿಗಳಲ್ಲೂ ಆತ್ಮವಸ್ತುವಿನ ಅನುಭವವಾಗುವುದು. ಅವರಿಗೆ ಎಲ್ಲ ಭೇದವಸ್ತುಗಳ ಮೂಲವಾದ ಆತ್ಮವಸ್ತು ಮಾತ್ರ ಗೋಚರಿಸುವುದು. ವಿವಿಧ ರೂಪದ ಸಕ್ಕರೆಗೊಂಬೆಗಳೆಲ್ಲಕ್ಕೂ ನಾಮ-ರೂಪ ಬೇರೆಯಾದರೂ ಮೂಲವಸ್ತುವಾದ ಸಕ್ಕರೆ, ಸಿಹಿಯ ಅನುಭವ ಒಂದೇ. ಹಾಗೆಯೇ ಬೇರೆ ಬೇರೆ ದೇವತೆಗಳ ಧ್ಯಾನ ಉಪಾಸನೆ ಮಾಡಿದರೂ ಅಂತಿಮವಾಗಿ ದೊರೆಯುವ ಬ್ರಹ್ಮಾನುಭವ ಒಂದೇ. ಆದರೆ ವ್ಯಾವಹಾರಿಕ ದೃಷ್ಟಿಯನ್ನು ಮರೆಯಬಾರದು.
ನಿರ್ವಿಕಲ್ಪ ಸಮಾಧಿಯಲ್ಲಿರುವವನು ಪರಬ್ರಹ್ಮವಸ್ತುವನ್ನು ಮಾತ್ರ ಕಾಣುತ್ತಿರುವವನು. ಸಮಾಧಿಯಿಂದ ಹೊರಬಂದಾಗ ಸಾಮಾನ್ಯರಂತೆಯೇ ನಡೆಯುವನು. ಶ್ರೀಶಂಕರರು, ಶ್ರೀರಾಮಕೃಷ್ಣ ಪರಮಹಂಸರು, ಶ್ರೀರಮಣಮಹರ್ಷಿಗಳು ನಿರ್ವಿಕಲ್ಪಸಮಾಧಿಯ ಹಂತ ತಲುಪಿದ್ದರೂ ವ್ಯಾವಹಾರಿಕ ಜಗತ್ತನ್ನು ತೊರೆಯಲಿಲ್ಲ. ಒಮ್ಮೆ ಶ್ರೀರಾಮಕೃಷ್ಣರು ತಮಗೆ ಬರುತ್ತಿದ್ದ ಏಳು ರೂಪಾಯಿ ಪಿಂಚಣಿ ಹಣ ಎಷ್ಟಿದೆಯೆಂದು ಸೋದರಳಿಯ ಹೃದಯರಾಮನಿಗೆ ಕೇಳಿದರು. ಕಾರಣವೇನೆಂದರೆ (ವ್ಯಾವಹಾರಿಕ ದೃಷ್ಟಿ) ಅವರ ತಾಯಿ ಚಂದ್ರಮಣಿದೇವಿ, ಮುಂದೆ ತಮ್ಮ ಮಗ ಚಿನ್ನದ ಬಳೆ ಮಾಡಿಸಿ ಕೊಡುತ್ತಾನೆಂದು ಶಾರದಾಮಾತೆಯವರಿಗೆ ಮಾತು ಕೊಟ್ಟಿದ್ದರು. ಅದನ್ನು ನೆರವೇರಿಸಲು ಪರಮಹಂಸರು ಕೇಳಿದರು.
ವ್ಯಾವಹಾರಿಕ ಭಾವವಿದ್ದಾಗ ಮಾತ್ರ ಶರೀರಧಾರಣೆ ಸಾಧ್ಯ. ಮೂರನೆಯದಾದ ಭಾವಮುಖ ದೃಷ್ಟಿಯನ್ನೂ ಇಲ್ಲಿ ಸೇರಿಸಿಕೊಳ್ಳಬಹುದು. ಕಾಳಿಮಾತೆ ಶ್ರೀರಾಮಕೃಷ್ಣರಿಗೆ ಭಾವಮುಖದಲ್ಲಿರಲು ಆಜ್ಞೆ ನೀಡಿದ್ದಳು. ಭಾವಮುಖವೆಂದರೆ ಮನೆಯ ಹೊಸ್ತಿಲಿನಲ್ಲಿ ನಿಂತಂತೆ. ಒಂದುಕಡೆ ಮನೆಯೊಳಗೆ, ಮತ್ತೊಂದೆಡೆ ತಿರುಗಿದರೆ ಮನೆಯ ಹೊರಗೆ ಕಾಣಿಸುವುದು. ಈ ಭಾವಮುಖದಲ್ಲಿರುವವರು ಯಾವುದೇ ಕ್ಷಣದಲ್ಲಿ ತಮಗೆ ಬೇಕಾದ ನಿರ್ವಿಕಲ್ಪ ಸಮಾಧಿಯಲ್ಲಿರಬಹುದು ಅಥವಾ ಬೇಕೆನಿಸಿದರೆ ವ್ಯಾವಹಾರಿಕ ಜಗತ್ತಿನಲ್ಲೂ ಇರಬಹುದು. ಒಟ್ಟಿನಲ್ಲಿ ವ್ಯಾವಹಾರಿಕ ದೃಷ್ಟಿಯನ್ನು ಮರೆಯುವಂತಿಲ್ಲ. ಪರಮಹಂಸರು ಇದನ್ನು ಸುಂದರ ದೃಷ್ಟಾಂತದ ಮೂಲಕ ವಿವರಿಸುವರು.
ಪರಮಹಂಸರು ಮತ್ತೊಂದು ದೃಷ್ಟಾಂತ ಕೊಡುವರು. ಜಗತ್ತಿನಲ್ಲಿ ಅನೇಕ ರೀತಿಯ ನೀರುಗಳಿವೆ. ಅತ್ಯಂತ ಪವಿತ್ರ ಹಾಗೂ ಶುದ್ಧ ಗಂಗಾಜಲ ಎಲ್ಲ ರೀತಿಯ ಉಪಯೋಗಕ್ಕೂ ಪ್ರಶಸ್ತವಾಗಿದೆ. ಕುಂಟೆಯ ನೀರು ಕುಡಿಯಲು ಬರದು. ಆದರೆ ಪಾತ್ರೆ-ಬಟ್ಟೆ-ದನ ತೊಳೆಯಲು ಬಳಸಬಹುದು. ಚರಂಡಿಯ ನೀರು ಗಲೀಜು. ನೀರೊಂದೇ ಆದರೂ ಅವುಗಳ ಭಿನ್ನತೆಗಳನ್ನು ಅಲ್ಲಗಳೆಯಲಾಗದು. ಪರಮಹಂಸರು ಆನೆ-ಮಾವುತನ ಕಥೆ ಹೇಳುವರು.
ಒಮ್ಮೆ ಗುರುಗಳು ಪಾಠ ಮಾಡುವಾಗ ಶಿಷ್ಯರಿಗೆ ‘ಎಲ್ಲರಲ್ಲೂ ನಾರಾಯಣನಿದ್ದಾನೆ, ಮರೆಯದಿರಿ’ ಎಂದು ಹೇಳಿದರು. ಶಿಷ್ಯನೊಬ್ಬ ಇದನ್ನು ಗಂಭೀರವಾಗಿ ಸ್ವೀಕರಿಸಿದ. ಆನೆಯೊಂದಕ್ಕೆ ಮದವೇರಿ ಹಿಂಸಾಚಾರದಲ್ಲಿ ತೊಡಗಿತು. ಆಗ ಮಾವುತ ಗಟ್ಟಿಯಾಗಿ, ‘ದೂರ ಸರಿಯಿರಿ’ ಎಂದು ಎಚ್ಚರಿಕೆ ಕೊಡುತ್ತಿದ್ದ. ಈ ಶಿಷ್ಯ ‘ಆನೆ ಹಾಗೂ ನನ್ನಲ್ಲಿ ಒಂದೇ ನಾರಾಯಣನಿದ್ದಾನೆ’ ಎಂದು ಲೆಕ್ಕ ಹಾಕುವಾಗಲೇ ಆನೆ ಬಂದು ಅವನನ್ನು ಹಿಡಿದು ದೂರವೆಸೆಯಿತು. ಪೆಟ್ಟುಬಿದ್ದು, ಜ್ಞಾನತಪ್ಪಿದ ಅವನನ್ನು ಆಶ್ರಮಕ್ಕೆ ಕರೆತಂದು ಉಪಚರಿಸಿದರು. ಅವನಿಗೆ ಎಚ್ಚರವಾದಾಗ ಗುರುಗಳು, ‘ಹೀಗೇಕೆ ಮಾಡಿದೆ?’ ಎಂದರು. ಅದಕ್ಕೆ ಶಿಷ್ಯ, ‘ನೀವೇ ಎಲ್ಲದರಲ್ಲೂ ನಾರಾಯಣ ಇದ್ದಾನೆ ಎಂದಿದ್ದಿರಿ?’ ಎಂದ. ಅದಕ್ಕೆ ಗುರುಗಳು ಅವನಿಗೆ ಅರ್ಥವಾಗುವಂತೆ, ‘ಆನೆ, ನಿನ್ನಲ್ಲಿ ಮಾತ್ರವಲ್ಲ, ಆ ಮಾವುತನಲ್ಲೂ ನಾರಾಯಣನಿದ್ದ. ಆ ಮಾವುತ ನಾರಾಯಣ ಹೇಳಿದ್ದನ್ನು ನೀನೇಕೆ ಕೇಳಲಿಲ್ಲ?’ ಎಂದರು. ವ್ಯಾವಹಾರಿಕ ಜೀವನದಲ್ಲಿ ಬಹಳ ಎಚ್ಚರಿಕೆಯಿಂದಿರಬೇಕು. ನೇರ ಅನುಭವವಾದವರ ವಿಚಾರ ಬೇರೆ.
ಒಮ್ಮೆ ಸಂತ ಏಕನಾಥರು ಕಾಶಿಯಿಂದ ಗಂಗೆಯನ್ನು ತೆಗೆದುಕೊಂಡು ರಾಮೇಶ್ವರ ಲಿಂಗಕ್ಕೆ ಅಭಿಷೇಕ ಮಾಡಲು ಬರುತ್ತಿದ್ದರು. ಇದರಿಂದ ಬಹಳ ಪುಣ್ಯವೆಂದು ನಂಬಿಕೆ. ದಾರಿಯಲ್ಲಿ ಗೋದಾವರಿ ತೀರದಲ್ಲಿ ಬಹಳ ಬಿಸಿಲಿತ್ತು. ಎಲ್ಲರಿಗೂ ಬಾಯಾರಿಕೆ. ಆಗ ಕತ್ತೆಯೊಂದು ಬಾಯಾರಿಕೆಯಿಂದ ಬಿದ್ದು ಸಾಯುವ ಸ್ಥಿತಿಯಲ್ಲಿ ಒದ್ದಾಡುತ್ತಿದೆ. ಆಗ ಏಕನಾಥರು ಗಂಗಾಜಲವನ್ನು ಅದರ ಬಾಯಿಗೆ ಸುರಿದು ಜೀವವುಳಿಸಿದರು. ಅವರ ಶಿಷ್ಯರು ‘ಗಂಗೆಯನ್ನು ಶಿವನ ಅಭಿಷೇಕಕ್ಕೆ ಕೊಂಡೊಯ್ಯಬೇಕಿತ್ತು. ಅದನ್ನು ಈ ಕತ್ತೆಗೆ ಹಾಕಿ ಮುಗಿಸಿದಿರಿ?’ ಎಂದರು.
ಏಕನಾಥರು, ‘ನಾನು ನೀರನ್ನು ವ್ಯರ್ಥಗೊಳಿಸಿಲ್ಲ. ರಾಮೇಶ್ವರ ಭಗವಂತನಿಗೆ ಇಲ್ಲಿಯೇ ಅಭಿಷೇಕ ಮಾಡಿದೆ’ ಎಂದರು. ಅವರ ದೃಷ್ಟಿಯೇ ಬೇರೆ. ಅವರು ಕತ್ತೆಯಲ್ಲೇ ಶಿವನನ್ನು ಕಂಡು, ಅದಕ್ಕೆ ಕುಡಿಸಿದ ನೀರೇ ಶಿವನ ಅಭಿಷೇಕ ಎಂದು ಭಾವಿಸಿದರು. ಸಂತ ನಾಮದೇವ ಊಟಕ್ಕೆ ಕುಳಿತಾಗ ತಟ್ಟೆಯಲ್ಲಿ ಚಪಾತಿಯ ತುಂಡನ್ನು ನಾಯಿ ಬಂದು ಕಚ್ಚಿಕೊಂಡು ಹೋಗುವುದು. ಇವರು ಅದರ ಹಿಂದೆ ‘ಸ್ವಲ್ಪ ನಿಲ್ಲು, ಹಾಗೆ ತಿಂದರೆ ಗಂಟಲಿಗೆ ತೊಂದರೆಯಾಗುವುದು, ತುಪ್ಪ ಕೊಡುವೆ’ ಎಂದು ತುಪ್ಪದ ಗಿಂಡಿಯೊಂದಿಗೆ ಓಡುವರು. ಇಂಥವರ ಮಾನಸಿಕ ಅವಸ್ಥೆ ಬಹಳ ಬೇರೆ.
ಒಮ್ಮೆ ಶ್ರೀರಾಮಕೃಷ್ಣರು ಗಂಗೆಯ ದಂಡೆಯಲ್ಲಿ ಕುಳಿತಿದ್ದರು. ಅಲ್ಲಿ ದೋಣಿಯಲ್ಲಿದ್ದ ಬೆಸ್ತರಿಬ್ಬರು ಜಗಳವಾಡುತ್ತ ಕೈ ಕೈ ಮಿಲಾಯಿಸಿದರು. ಒಬ್ಬ ಮತ್ತೊಬ್ಬನ ಬೆನ್ನಿನ ಮೇಲೆ ಜೋರಾಗಿ ಬಾರಿಸಿದ. ಪರಮಹಂಸರು ‘ಹಾ!’ ಎಂದು ನೋವಿನಿಂದ ಚೀರಿ ಸಂಕಟಪಟ್ಟರು. ಕಾರಣವೆಂದರೆ ಆ ಹೊಡೆತದ ಪರಿಣಾಮ ಇವರ ಬೆನ್ನಿನ ಮೇಲಾಗಿ, ಅಲ್ಲಿ ಬೆಸ್ತನ ಕೈಬೆರಳುಗಳ ಗುರುತು ಮೂಡಿತ್ತು. ಸಂಬಂಧವಿಲ್ಲದ ಬೆಸ್ತರು ಹೊಡೆದಾಡಿದರೂ, ಇವರಿಗೆ ಅದ್ವೈತಜ್ಞಾನ ಸಾಕ್ಷಾತ್ಕಾರವಾಗಿದ್ದರಿಂದ, ಆ ಸಮಯದಲ್ಲಿ ಇವರ ಮನಸ್ಸಿನಲ್ಲೂ ಆ ಜ್ಞಾನಾನುಭವವಿದ್ದುದರಿಂದ ಈ ಅನುಭವ ಆಯಿತು. ನಿರ್ವಿಕಲ್ಪ ಸಮಾಧಿಸ್ಥಿತಿ ಬಂದಾಗ ಈ ಪಾರಮಾರ್ಥಿಕ ಅವಸ್ಥೆ ಬರುವುದು. ಇದಕ್ಕಾಗಿ ಸಾಧನೆ ಮಾಡಬೇಕಾದ ಕ್ರಮದಲ್ಲಿ ಮುಂದುವರಿದರಷ್ಟೇ ಈ ಅನುಭವ ಬರುವುದು.
‘ಯಾರ ಮನಸ್ಸು ಸಾಮ್ಯದಲ್ಲಿ (ಬ್ರಹ್ಮದಲ್ಲಿ) ನೆಲೆಸಿರುವುದೋ ಅವರು ಇಲ್ಲೇ (ಬದುಕಿರುವಾಗಲೇ) ಸಂಸಾರವನ್ನು ಜಯಿಸುತ್ತಾರೆ; ಏಕೆಂದರೆ ಬ್ರಹ್ಮವು ದೋಷರಹಿತವಾಗಿಯೂ (ಶ್ವಪಾಕಾದಿಗಳಲ್ಲಿರುವ ಬ್ರಹ್ಮ ಅದರ ದೋಷಗಳಿಂದ ದೂಷಿತವಾಗಿಲ್ಲ) ಸಮವಾಗಿಯೂ (ಭೇದೋತ್ಪನ್ನ ಮಾಡುವ ಯಾವ ಅಂತ್ಯವಿಶೇಷಗಳೂ ಇಲ್ಲ) ಇರುತ್ತದೆ; ಆದುದರಿಂದ ಅವರು ಬ್ರಹ್ಮದಲ್ಲಿಯೇ ಸ್ಥಿತರಾಗಿದ್ದಾರೆ’ (ಇಹೈವ ತೈರ್ಜಿತಃ ಸಗೋ ಯೇಷಾಂ ಸಾಮ್ಯೇ ಸ್ಥಿತಂ ಮನಃ | ನಿದೋಷಂ ಹಿ ಸಮಂ ಬ್ರಹ್ಮ ತಸ್ಮಾದಹ್ಮಣಿ ತೇ ಸ್ಥಿತಾಃ || 5.19). ಇಂಥವರಿಗೆ ಪುನರ್ಜನ್ಮವಿಲ್ಲ. ಇದಕ್ಕೆ ಕಾರಣವಾದ ಬ್ರಹ್ಮ ನಿದೋಷವಾದುದು. ಶ್ರೀಶಂಕರಾದಿ ವ್ಯಾಖ್ಯಾನಕಾರರು ಇದನ್ನು ಚೆನ್ನಾಗಿ ತಿಳಿಸಿದ್ದಾರೆ. ಗೌತಮ ಧರ್ಮಸೂತ್ರದಲ್ಲಿ ಈ ವಿಚಾರ ಬರುವುದು. ಗೃಹಸ್ಥ ಬ್ರಾಹ್ಮಣನೊಬ್ಬ ವಿಶೇಷ ಸಂದರ್ಭದಲ್ಲಿ ಗೌರವ ಸೂಚಿಸಲು ಅನೇಕ ಬ್ರಾಹ್ಮಣರನ್ನು ಕರೆದಿದ್ದಾನೆ. ಅವರಲ್ಲಿ ಕೆಲವರು ಚತುರ್ವೆದ ಕಲಿತು ಉತ್ತಮ ಜೀವನ ನಡೆಸುವವರು, ಕೆಲವರು ಒಂದೆರಡು ಓದಿದ್ದಾರೆ, ಹಲವರು ಯಾವುದೇ ಅಧ್ಯಯನ ಮಾಡದ ಜಾತಿಯಿಂದಷ್ಟೇ ಬ್ರಾಹ್ಮಣರು. ಅವರನ್ನು ಗೌರವ ಸೂಚಿಸುವ ಕ್ರಮದಂತೆ ಅತ್ಯುತ್ತಮರಿಗೆ ಮೊದಲು, ನಂತರ ಕೆಳಗಿನ ದರ್ಜೆಯವರಿಗೆ, ಕೊನೆಯಲ್ಲಿ ಕೇವಲ ಜಾತಿಯಿಂದ ಬ್ರಾಹ್ಮಣರಾದವರಿಗೆ ಗೌರವ ಸಮರ್ಪಿಸಬೇಕು. ಇದು ಶಾಸ್ತ್ರಸಮ್ಮತ ಕ್ರಮ. ಆದರೆ ಇದಕ್ಕೆ ವಿರುದ್ಧವಾಗಿ ಮಾಡಿದರೆ ಅದು ತಪ್ಪಾಗಿ, ಪಾಪ ಮಾಡಿದಂತಾಗುವುದು. ಭೇದಗಳಿರುವಾಗ ಭೇದಕ್ಕೆ ತಕ್ಕಂತೆ ಆಚರಣೆಯಿರಬೇಕು. ಆದರೆ ಇದನ್ನು ಆಧರಿಸಿ ದೋಷ ಹೇಳಬಹುದು. ಸಮದರ್ಶಿಗಳಾದ ಪಂಡಿತರು ಬ್ರಾಹ್ಮಣ, ಹಸು, ಆನೆ, ನಾಯಿ, ನಾಯಿಯ ಮಾಂಸ ತಿನ್ನುವವನು ಇವರೆಲ್ಲರನ್ನೂ ಸಮಾನವಾಗಿ ನೋಡುವುದು ಗೌತಮಧರ್ಮಸೂತ್ರದ ಪ್ರಕಾರ ತಪ್ಪಲ್ಲವೇ ಎಂಬುದು ಪ್ರಶ್ನೆ. ಇದಕ್ಕೆ ಉತ್ತರವಾಗಿ ಶ್ರೀಶಂಕರರು, ‘ಗೌತಮ ಧರ್ಮಸೂತ್ರದಲ್ಲಿ ಇದನ್ನು ದೇಹಾತ್ಮಭಾವದಿಂದ ಹೇಳಿದ್ದಾರೆ. ಇಲ್ಲಿಯ ತಾರತಮ್ಯಕ್ಕೆ ದೇಹಾತ್ಮಭಾವವೇ ಕಾರಣ. ಇದು ನಾನು ಆತ್ಮವೆಂದು (ದೇಹ) ತಿಳಿದಿರುವ ಅತ್ಯಂತ ಸಾಮಾನ್ಯ ಅಜ್ಞಾನಿಗಳಿಗೆ ಅನ್ವಯಿಸುವುದು. ಎರಡನೆಯದಾಗಿ ಪೂಜೆಯೆಂಬ ವಿಶೇಷ ಸಂದರ್ಭದಲ್ಲಿ ಈ ಮಾತನ್ನು ಹೇಳಿದೆ. ಆದ್ದರಿಂದ ವೇದಾಂತ ಇಲ್ಲಿ ಅನ್ವಯಿಸದು’ ಎನ್ನುವರು.