ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತಿಗಾಗಿ ದೇವಸ್ಥಾನವನ್ನೇ ನಿರ್ಮಿಸಿದ ಪತ್ನಿ! ನಿತ್ಯವೂ ನಡೆಯುತ್ತಿದೆ ಪೂಜೆ

Temple for Husband
Published on

ಭಾರತದ ಹಿಂದು ಸಂಪ್ರದಾಯದ ಮದುವೆಗೆ ಹೆಚ್ಚಿನ ಮಹತ್ವವಿದೆ. ವೇದ ಮಂತ್ರಗಳ ಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಒಂದಾಗುವ ದಂಪತಿ, ನೂರು ವರ್ಷಗಳ ಕಾಲ ಸುಖವಾಗಿ ಬಾಳಲಿ ಅಂತ ಹಿರಿಯರು ಆಶೀರ್ವದಿಸುತ್ತಾರೆ. ಪತಿ-ಪತ್ನಿಯರ ಬಾಂಧವ್ಯ ಚೆನ್ನಾಗಿರಲಿ ಎಂದು ಪ್ರತಿ ಕುಟುಂಬವೂ ಬಯಸುತ್ತದೆ. ಆದರೆ, ಭಿನ್ನಾಭಿಪ್ರಾಯಗಳಿಂದ ಕೆಲವೊಂದು ಮುರಿದು ಹೋದರೆ, ಇನ್ನು ಕೆಲವು ಸಂಬಂಧಗಳು ಇತರರಿಗೆ ಮಾದರಿಯಾಗುತ್ತದೆ. ಎಷ್ಟೇ ಕಷ್ಟ ಬಂದರೂ ಪತಿ-ಪತ್ನಿ ನಡುವಿನ ಹೊಂದಾಣಿಕೆ ಇತರರಿಗೆ ಸ್ಫೂರ್ತಿಯಾಗುತ್ತದೆ. ಒಬ್ಬರೊನ್ನೊಬ್ಬರು ಬಿಟ್ಟು ಇರಲಾರದಷ್ಟು ಪ್ರೀತಿ ಕೆಲವೊಮ್ಮೆ ಅಚ್ಚರಿಯನ್ನು ಉಂಟು ಮಾಡುತ್ತದೆ. ಸಾವಿನ ನಂತರವೂ ಪ್ರೀತಿ ಪಾತ್ರರಿಗಾಗಿ ಪರಿತಪಿಸಿ ಅವರ ನೆನಪಲ್ಲೇ ಜೀವನ ಕಳೆಯುತ್ತಾರೆ.

ಇನ್ನೂ ನಮ್ಮ ದೇಶದಲ್ಲಿ ಮಹಾಮಾರಿ ಕರೊನಾ ಸೃಷ್ಟಿಸಿದ ಅವಾಂತರಗಳ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಕರೊನಾ ಕಾರಣದಿಂದಾಗಿ ಅನೇಕ ಜನರ ಜೀವನವು ಇಂದಿಗೂ ದುಃಖದಿಂದ ತುಂಬಿದೆ. ಎಷ್ಟೋ ಕುಟುಂಬಗಳು ಅನಾಥವಾಗಿವೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದು, ಅವರ ನೆನಪುಗಳೊಂದಿಗೆ ಬದುಕುತ್ತಿದ್ದಾರೆ.

ತೆಲಂಗಾಣದ ಮಹಿಳೆಯೊಬ್ಬಳು ಕೂಡ ಕರೊನಾ ಮಹಾಮಾರಿಯಿಂದಾಗಿ ಜೀವನದಲ್ಲಿ ತುಂಬಾ ದುಃಖವನ್ನು ಅನುಭವಿಸುತ್ತಿದ್ದಾರೆ. ಏಕೆಂದರೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಗಂಡನನ್ನು ಕರೊನಾ ಕಸಿದುಕೊಂಡಿತು. ಮೂರು ವರ್ಷಗಳ ಹಿಂದೆ ಈ ದುರ್ಘಟನೆ ನಡೆಯಿತು. ಗಂಡನ ನೆನಪುಗಳಿಂದ ಹೊರಬರಲಾಗದೆ ಮಾನಸಿಕ ಯಾತನೆ ಅನುಭವಿಸಿ, ಇದೀಗ ಮಹತ್ತರವಾದ ನಿರ್ಧಾರವನ್ನು ಮಹಿಳೆ ತೆಗೆದುಕೊಂಡಿದ್ದಾಳೆ. ತನ್ನ ಗಂಡನ ನೆನಪಿಗಾಗಿ ದೇವಾಲಯವನ್ನು ನಿರ್ಮಿಸಿ, ಗಂಡನ ವಿಗ್ರಹವನ್ನು ಸ್ಥಾಪಿಸಿ, ನಿತ್ಯವೂ ತನ್ನ ಗಂಡನನ್ನು ಕಣ್ತುಂಬಿಕೊಳ್ಳುತ್ತಿದ್ದಾಳೆ.

ತೆಲಂಗಾಣದ ಮೆಹಬೂಬಾಬಾದ್ ಮಂಡಲದ ಪರ್ವತಗಿರಿಯ ಕಲ್ಯಾಣಿ ಅವರು ತಮ್ಮ ಸ್ವಂತ ಜಮೀನಿನಲ್ಲಿ ಪತಿಗಾಗಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಕಲ್ಯಾಣಿ ಅವರು 27 ವರ್ಷಗಳ ಹಿಂದೆ ಹರಿಬಾಬು ಎಂಬುವವರನ್ನು ಮದುವೆಯಾಗಿದ್ದರು. ಹರಿಬಾಬು ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಹೆಂಡತಿ ಎಷ್ಟೇ ಕಾಟ ಕೊಟ್ಟರೂ ಎಲ್ಲವನ್ನು ಸಹಿಸಿಕೊಂಡು ಆಕೆಯ ಖುಷಿಗಾಗಿ ಜೀವಿಸುತ್ತಿದ್ದ. ಕಲ್ಯಾಣಿಗೂ ತನ್ನ ಗಂಡ ಹರಿಬಾಬು ಎಂದರೆ ಪಂಚಪ್ರಾಣ. ಎಲ್ಲೇ ಹೋದರೂ ಇಬ್ಬರೂ ಜೋಡಿಯಾಗಿ ಹೋಗುತ್ತಿದ್ದರು. ಹೀಗಿರುವಾಗ ಮಹಾಮಾರಿ ಕರೊನಾ ಇಬ್ಬರನ್ನು ಬೇರೆ ಮಾಡಿತು. ಹರಿಬಾಬುನನ್ನು ಕರೊನಾ ಬಲಿ ಪಡೆಯಿತು.

ಗಂಡನ ಸಾವಿನ ಬಳಿಕ ಕಲ್ಯಾಣಿ ತುಂಬಾ ದುಃಖಿತಳಾದಳು. ಅವನ ನೆನಪಲ್ಲೇ ಬದುಕುತ್ತಿದ್ದಳು. ಗಂಡನ ಚಿತ್ರಣ ಮತ್ತು ಆತನ ಹೆಸರು ಶಾಶ್ವತವಾಗಿ ಉಳಿಯಬೇಕು ಎಂದು ಭಾವಿಸಿದಳು. ತಮ್ಮ ಸ್ವಂತ ಜಮೀನಿನಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ರಾಜಸ್ಥಾನದಿಂದ ಪತಿಯ ಪ್ರತಿಮೆಯನ್ನು ತಂದು ಬುಧವಾರ ಅನಾವರಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಹ ಸಲ್ಲಿಸಲಾಯಿತು. ಈ ಕಾರ್ಯಕ್ರಮಕ್ಕೆ ಆಪ್ತರು ಸಹ ಆಗಮಿಸಿದ್ದರು.

ಇನ್ನು ಕಲ್ಯಾಣಿ ಅವರ ಪತಿ ಪ್ರೇಮದ ಬಗ್ಗೆ ಸ್ಥಳೀಯರು ಹೆಮ್ಮೆ ಪಡುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net