

ಬೆಂಗಳೂರು: ರಾಜ್ಯದ ಜನರಲ್ಲಿ ಕನ್ನಡ ಭಾಷೆ ಬಗ್ಗೆ ಇನ್ನಷ್ಟು ಅಭಿಮಾನ ಮೂಡಿಸಲು, ಇನ್ನಷ್ಟು ಚೈತನ್ಯಗೊಳಿಸುವ ಸಲುವಾಗಿ ಸರ್ಕಾರ ಒಂದು ವರ್ಷಪೂರ್ತಿ ಕನ್ನಡೋತ್ಸವ ನಡೆಸಲು ಮುಂದಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಿದೆ. ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ಆರಂಭವಾಗಿ, ಮುಂದಿನ ವರ್ಷ ನವೆಂಬರ್ ತನಕ ಇಡೀ ವರ್ಷ ಕನ್ನಡ ಅಭಿಯಾನ ವರ್ಷಾಚರಣೆ ನಡೆಸಲಿದೆ.
ಕನ್ನಡ ನಾಡು- ನುಡಿ, ನೆಲ- ಜಲ, ಸಾಹಿತ್ಯ- ಸಂಸ್ಕೃತಿ ಹಾಗೂ ಭವ್ಯತೆ ಬಗ್ಗೆ ವಿವಿಧ ಇಲಾಖೆಗಳ ಮೂಲಕ ಇಡೀ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ರಾಜ್ಯವು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ತಾಣವಾಗಿದೆ. ದೇಶ, ವಿದೇಶಗಳ ಜನರು ಉದ್ಯೋಗ ಅರಸಿ ಬಂದು ಇಲ್ಲಿ ನೆಲೆಸಿದ್ದಾರೆ. ಇಂತಹ ಕನ್ನಡೇತರರನ್ನು ಒಳಗೊಂಡಂತೆ ಯುವ ಸಮುದಾಯ ಮತ್ತು ಜನಸಾಮಾನ್ಯರಲ್ಲಿ ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡಿಸುವುದು ವರ್ಷಾಚರಣೆಯ ಉದ್ದೇಶವೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ ‘ವಿಜಯವಾಣಿ’ಗೆ ತಿಳಿಸಿದರು. ಕರೊನೋತ್ತರ ಕರ್ನಾಟಕದಲ್ಲಿ ಇಡೀ ವರ್ಷ ಕನ್ನಡೋತ್ಸಾಹ ಮೂಲಕ ಜನರನ್ನು ಚೈತನ್ಯಗೊಳಿಸಲು ವಿಶೇಷ ಕಾರ್ಯಕ್ರಮಗಳಿಗೆ ಎಲ್ಲ ಇಲಾಖೆಗಳ ಸಹಕಾರ ಕೋರಲಾಗಿದೆ. ಸರ್ಕಾರ ಮಾತ್ರವಲ್ಲದೆ, ವಿವಿಧ ಕನ್ನಡ ಪರ ಸಂಘಟನೆಗಳ ನೆರವನ್ನು ಪಡೆಯಲಾಗುತ್ತದೆ. ಹಣ ಎಷ್ಟು ವೆಚ್ಚವಾಗುತ್ತದೆ ಎಂಬುದಕ್ಕಿಂತ ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಇದರ ಉದ್ದೇಶವೆಂದು ಅವರು ವಿವರಿಸಿದರು.
ಕನ್ನಡದಲ್ಲಿ ಅನೇಕ ತಂತ್ರಾಂಶಗಳನ್ನು ಪರಿಚಯ ಮಾಡಿಸಲಾಗುತ್ತಿದೆ. ಇದರ ಜತೆಗೆ ಕನ್ನಡದ ಬಗ್ಗೆ ನಾಡಿನ ಜನರಲ್ಲಿ ಅಭಿಮಾನ ಮೂಡಿಸುವುದು ಸಹ ಕನ್ನಡ ವರ್ಷಾಚರಣೆಯ ಪ್ರಮುಖ ಉದ್ದೇಶವಾಗಿದೆ. | ಡಾ.ಕೆ.ಮುರಳೀಧರ ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ