ವಾರಾಂತ್ಯಕ್ಕೆ ಶುರು ಆರಿದ್ರಾ ಮಳೆ ಅಬ್ಬರ

Vijayavani-Featured-Image
Published on

ಆರ್​​.ತುಳಸಿಕುಮಾರ್​

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ಆಶಾದಾಯಕವಾಗಲಿದ್ದು, ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಸುರಿದಿದ್ದು, ಬರಗಾಲವನ್ನು ದೂರ ಮಾಡಿದೆ. ಇದರ ಹೊರತಾಗಿಯೂ ಕೆಲ ಪ್ರದೇಶಗಳಲ್ಲಿ ಮಾತ್ರ ಕೊರತೆಯಾಗಿದ್ದರೂ, ಅಲ್ಲೂ ಮುಂದಿನ ದಿನಗಳಲ್ಲಿ ಹೆಚ್ಚು ವರ್ಷಧಾರೆಯಾಗುವ ನಿರೀಕ್ಷೆ ಇದೆ.

ಈ ತಿಂಗಳ 2ರಂದು ರಾಜ್ಯ ಪ್ರವೇಶಿಸಿರುವ ಮುಂಗಾರು ಮಾರುತ ಆರಂಭದಲ್ಲೇ ಉತ್ತಮ ಮಳೆಯನ್ನು ಸುರಿಸಿದೆ. ಪೂರ್ವ ಮುಂಗಾರು ಅವಧಿಯಲ್ಲೂ ವಾಡಿಕೆಗಿಂತ ಶೇ.31ರಷ್ಟು ಮಳೆಯಾಗಿತ್ತು. ಹೀಗಾಗಿ ಈ ಮುಂಗಾರಿನ ಅವಧಿಯಲ್ಲೂ ವರ್ಷವೈಭವ ಕಾಣಲು ಅಡ್ಡಿಯಿಲ್ಲ. ನದಿ, ಜಲಾಶಯಗಳಿಗೆ ನೀರು ಹರಿದು ಬರಲಿದೆ. ಇದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆಯಾಗದು. ಒಟ್ಟಾರೆ ವಾಡಿಕೆಯಷ್ಟೇ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಾಮಾನ್ಯವಾಗಿ ಪೂರ್ವ ಮುಂಗಾರು ಉತ್ತಮ ಮಳೆ ಸುರಿಸಿದರೆ ಮುಂಗಾರು ಕೂಡ ಅದೇ ಹಾದಿಯಲ್ಲಿ ಮುಂದುವರಿಯುತ್ತದೆ ಎಂಬ ಪ್ರತೀತಿ ಇದೆ. ಕೆಲವೊಮ್ಮೆ ಮಾತ್ರ ಅಂದಾಜಿಸಿದ್ದಕ್ಕಿಂತ ವ್ಯತಿರಿಕ್ತವಾಗಿರುತ್ತದೆ. ಈ ಬಾರಿಯ ಪೂರ್ವ ಮುಂಗಾರು ಅವಧಿಯಲ್ಲಿ 3 ಜಿಲ್ಲೆಗಳಲ್ಲಿ ಅತೀ ಹೆಚ್ಚು, 18 ಜಿಲ್ಲೆಗಳಲ್ಲಿ ಹೆಚ್ಚು ಹಾಗೂ 10 ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಮಳೆಯಾಗಿತ್ತು. ತಾಲೂಕುವಾರು ಪೈಕಿ 47ರಲ್ಲಿ ಅತೀ ಹೆಚ್ಚು, 83ರಲ್ಲಿ ಹೆಚ್ಚು, 84ರಲ್ಲಿ ವಾಡಿಕೆ, 21ರಲ್ಲಿ ಕೊರತೆ ಹಾಗೂ 1 ತಾಲೂಕಿನಲ್ಲಿ ಅತೀ ಕೊರತೆ ಮಳೆ ದಾಖಲಾಗಿತ್ತು.

ಮುಂಗಾರಿನಲ್ಲಿ ಮಳೆ ಮಿಂಚು:

ಪ್ರಸಕ್ತ ವರ್ಷದ ಜೂನ್ 1ರಿಂದ 19ರ ವರೆಗೆ ರಾಜ್ಯದಲ್ಲಿ ಸರಾಸರಿ ಶೇ.13ಕ್ಕಿಂತ ಹೆಚ್ಚು ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳು ವಾಡಿಕೆಗಿಂತ ಹೆಚ್ಚು ಮಳೆ ಕಂಡಿವೆ. ಆದರೆ, ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗಿನಲ್ಲಿ ಸರಾಸರಿ ಶೇ. -38 ಮಳೆ ಕೊರತೆ ಉಂಟಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲೂ ಸರಾಸರಿ ಶೇ. -32ರಷ್ಟು ಕೊರತೆ ಕಂಡಿದೆ. ಇದರಿಂದಾಗಿ ಜಲಾಶಯಗಳಿಗೆ ಹೆಚ್ಚು ನೀರು ಹರಿದುಬಂದಿಲ್ಲ. ಆದರೂ ಸಮಸ್ಯೆ ಉಂಟಾಗದಂತೆ ಡ್ಯಾಂಗಳಲ್ಲಿ ನಿಧಾನವಾಗಿ ನೀರಿನ ಹರಿವು ಏರುತ್ತಿದೆ. ಈ ವಾರಾಂತ್ಯದಿಮದಲೇ ಮಲೆನಾಡಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವಾರವಿಡೀ ಅತಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಎಚ್ಚರಿಕೆ ನೀಡಿರುವುದು ಪ್ರವಾಹದ ರೀತಿ ಮಳೆನೀರು ಜಲಾಶಯಗಳಿಗೆ ಹರಿದುಬರುವುದೆಂದು ನಿರೀಕ್ಷಿಸಲಾಗಿದೆ.

ಪೂರ್ವ ಮುಂಗಾರು ಮಳೆ ಮಾಹಿತಿ (ಮಿ.ಮೀ.ಗಳಲ್ಲಿ):

ಪ್ರದೇಶದ ಹೆಸರು ವಾಡಿಕೆ ವಾಸ್ತವ ಶೇ.ವಾರು

ಉತ್ತರ ಒಳನಾಡು 138 168 +22

ದಕ್ಷಿಣ ಒಳನಾಡು 79 102 +29

ಮಲೆನಾಡು 163 243 +49

ಕರಾವಳಿ 156 207 +33

ರಾಜ್ಯ ಸರಾಸರಿ 115 151 +31

(ಅಂಕಿ-ಅಂಶ: ಮಾ.1ರಿಂದ ಮೇ 31ರವರೆಗೆ)

ಜೂನ್ ತಿಂಗಳಲ್ಲಿ ಮಳೆ ವಿವರ (ಮಿ.ಮೀ.ಗಳಲ್ಲಿ):

ಪ್ರದೇಶದ ಹೆಸರು ವಾಡಿಕೆ ವಾಸ್ತವ ಶೇ.ವಾರು

ಉತ್ತರ ಒಳನಾಡು 49 88 +79

ದಕ್ಷಿಣ ಒಳನಾಡು 65 125 +92

ಮಲೆನಾಡು 193 120 -38

ಕರಾವಳಿ 454 311 -32

ರಾಜ್ಯ ಸರಾಸರಿ 116 132 13

(ಅಂಕಿ-ಅಂಶ: ಜೂನ್ 19ರವರೆಗೆ)

ಅತೀ ಹೆಚ್ಚು ಮಳೆಯಾದ ಜಿಲ್ಲೆಗಳು (ಜೂ.1-19):

ಜಿಲ್ಲೆ ಮಳೆ ಪ್ರಮಾಣ

ಬೀದರ್ 133.5 ಮಿ.ಮೀ.

ಕಲಬುರಗಿ 141.8 ಮಿ.ಮೀ.

ಯಾದಗಿರಿ 118.1 ಮಿ.ಮೀ.

ವಿಜಯಪುರ 163.1 ಮಿ.ಮೀ.

ಬಾಗಲಕೋಟೆ 136.5 ಮಿ.ಮೀ.

ಬೆಳಗಾವಿ 140.3 ಮಿ.ಮೀ.

ಕೊಪ್ಪಳ 110.5 ಮಿ.ಮೀ.

ರಾಯಚೂರು 114.5 ಮಿ.ಮೀ.

ಬಳ್ಳಾರಿ 137.7 ಮಿ.ಮೀ.

ವಿಜಯನಗರ 95.3 ಮಿ.ಮೀ.

ಚಿತ್ರದುರ್ಗ 68 ಮಿ.ಮೀ.

ತುಮಕೂರು 105.1 ಮಿ.ಮೀ.

ಚಿಕ್ಕಬಳ್ಳಾಪುರ 108.5 ಮಿ.ಮೀ.

ಕೋಲಾರ 116.4 ಮಿ.ಮೀ.

ಬೆಂಗಳೂರು ಗ್ರಾ. 103.2 ಮಿ.ಮೀ.

ಬೆಂಗಳೂರು ನಗರ 122.8 ಮಿ.ಮೀ.

ಮಂಡ್ಯ 77.5 ಮಿ.ಮೀ.

ಚಾಮರಾಜನಗರ 84.8 ಮಿ.ಮೀ.

ಹೆಚ್ಚು ಮಳೆಯಾಗಿರುವ ಜಿಲ್ಲೆಗಳು:

ಧಾರವಾಡ 104.6 ಮಿ.ಮೀ.

ಗದಗ 93.1 ಮಿ.ಮೀ.

ರಾಮನಗರ 81.4 ಮಿ.ಮೀ.

ವಾಡಿಕೆ ಮಳೆಯಾದ ಜಿಲ್ಲೆಗಳು:

ದಾವಣಗೆರೆ 60.8 ಮಿ.ಮೀ.

ಹಾಸನ 85.5 ಮಿ.ಮೀ.

ಮೈಸೂರು 69.2 ಮಿ.ಮೀ.

ಮಳೆ ಕೊರತೆ ಆಗಿರುವ ಜಿಲ್ಲೆಗಳು:

ಉತ್ತರಕನ್ನಡ 273.6 ಮಿ.ಮೀ. (ಶೇ. -27)

ದಕ್ಷಿಣಕನ್ನಡ 316.1 ಮಿ.ಮೀ. (ಶೇ. -37)

ಉಡುಪಿ 409.4 ಮಿ.ಮೀ. (ಶೇ. -34)

ಹಾವೇರಿ 57.8 ಮಿ.ಮೀ. (ಶೇ. -23)

ಶಿವಮೊಗ್ಗ 143.9 ಮಿ.ಮೀ. (ಶೇ. -43)

ಚಿಕ್ಕಮಗಳೂರು 97.2 ಮಿ.ಮೀ. (ಶೇ. -43)

ಕೊಡಗು 167.2 ಮಿ.ಮೀ. (ಶೇ. -40)

ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ:

ಶನಿವಾರದಿಂದ (ಜೂ.22) ಆರಿದ್ರಾ ಮಳೆ ಅಡಿಯಿರಿಸಲಿದೆ. ಈ ದಿನದಿಂದಲೇ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ಅತಿ ಭಾರೀ ಮಳೆಯಾಗುವ ಕಾರಣ ರೆಡ್ ಅಲರ್ಟ್ ನೀಡಲಾಗಿದೆ. ಇದೇ ರೀತಿ ಮಲೆನಾಡಿನ ನಾಲ್ಕೂ ಜಿಲ್ಲೆಗಳಲ್ಲಿ ಭಾನುವಾರ ಹಾಗೂ ಸೋಮವಾರ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಕೊಡಲಾಗಿದೆ. ಇದೇ ಅವಧಿಯಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ವರ್ಷಧಾರೆಯಾಗಿ ಇಡೀ ರಾಜ್ಯವನ್ನು ಆವರಿಸಿಕೊಳ್ಳಲಿದೆ.

ಪ್ರಸ್ತುತ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ವಾರಾಂತ್ಯದಿಂದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಅತೀ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಜುಲೈನಲ್ಲಿ ಒಳ್ಳೆಯ ವರ್ಷಧಾರೆ ನಿರೀಕ್ಷಿಸಬಹುದಾಗಿದ್ದು, ಆಷಾಢ ಗಾಳಿಯಿಂದ ಒಂದಿಷ್ಟು ಕಡಿಮೆಯಾಗಬಹುದು. ಆಗಸ್ಟ್‌ನಿಂದ ಮತ್ತೆ ಮಳೆ ಬಿರುಸುಗೊಳ್ಳಲಿದೆ. ಈ ವರ್ಷ ವಾಡಿಕೆ ಅಥವಾ ತುಸು ಹೆಚ್ಚಾಗಿಯೇ ಮಳೆಯಾಗಬಹುದು.

- ಸಿ.ಎಸ್.ಪಾಟೀಲ್, ಹವಾಮಾನ ವಿಜ್ಞಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net