ಎಣ್ಣೆಹೊಳೆಕೊಪ್ಪಲು ಜಲಾವೃತ

ಎಣ್ಣೆಹೊಳೆಕೊಪ್ಪಲು ಜಲಾವೃತ
Published on

ಎಸ್.ರಾಜು ಪಾಂಡವಪುರ

ಕೆಆರ್‌ಎಸ್ ಅಣೆಕಟ್ಟೆಯಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ತಟದಲ್ಲಿರುವ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮ ಜಲಾವೃತಗೊಂಡಿದ್ದು, ಗ್ರಾಮಸ್ಥರು ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ.

ಕಾವೇರಿ ನದಿಯಲ್ಲಿ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಯುತ್ತಿರುವ ಪರಿಣಾಮ ತಡೆಗೋಡೆ ಇಲ್ಲದ ಭಾಗದಿಂದ ಗ್ರಾಮಕ್ಕೆ ನೀರು ನುಗ್ಗಿದ್ದು, ಮನೆಗಳ ಮುಂದೆ ಮಂಡಿಯುದ್ದ ನೀರು ನಿಂತಿದೆ. ಗ್ರಾಮದ ಅಕ್ಕಪಕ್ಕದಲ್ಲಿರುವ ಜಮೀನುಗಳಿಗೂ ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಪ್ರವಾಹ ಪರಿಸ್ಥಿತಿ ಎದುರಾದಾಗಲೆಲ್ಲ ಗ್ರಾಮಕ್ಕೆ ನೀರು ನುಗ್ಗುವುದು ಸಾಮಾನ್ಯವಾಗಿದ್ದು, ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದರೆ ಗ್ರಾಮಸ್ಥರು ಆತಂಕದಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ. ಪ್ರವಾಹದಿಂದಾಗಿ ಒಂದೆಡೆ ಮನೆಯಿಂದ ಹೊರಬರಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮತ್ತೊಂದು ಕಡೆ ರೈತರು ಬೆಳೆ ನಷ್ಟ ಅನುಭವಿಸಬೇಕಾಗಿದೆ. ಜತೆಗೆ ನೀರಿನ ಹರಿವಿನೊಂದಿಗೆ ಸರಿಸೃಪಗಳು, ಜಲಚರಗಳು ಗ್ರಾಮಕ್ಕೆ ನುಗ್ಗುತ್ತಿದ್ದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ.

ಅವೈಜ್ಞಾನಿಕ ಕಾಮಗಾರಿ: 2018ರಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆನಂತರದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ 7 ಕೋಟಿ ರೂ. ವೆಚ್ಚದಲ್ಲಿ ಒಂದು ಕಿ.ಮೀ ಉದ್ದ ತಡೆಗೋಡೆ ನಿರ್ಮಿಸಲಾಗಿದೆಯಾದರೂ ಕಾಮಗಾರಿ ಅವೈಜ್ಞಾನಿಕವಾಗಿರುವ ಕಾರಣ ಸಮಸ್ಯೆ ಉದ್ಭವಿಸುತ್ತಿದೆ. ಗ್ರಾಮದ ಹಿರಿಯರು ನದಿ ಪ್ರವಾಹ ತಡೆಯಲು ಸೈಜು ಕಲ್ಲುಗಳಿಂದ ತಡೆಗೋಡೆ ನಿರ್ಮಿಸಿದ್ದರು. ಇತ್ತೀಚೆಗೆ ನಿರ್ಮಾಣವಾಗಿರುವ ಕಾಂಕ್ರೀಟ್ ತಡೆಗೋಡೆಯನ್ನು ಕಲ್ಲಿನ ತಡೆಗೋಡೆಯ ಮುಂಭಾಗದಲ್ಲಿ ನಿರ್ಮಿಸಲಾಗಿದ್ದು, ಹಿಂಬದಿಯಲ್ಲಿ ನಿರ್ಮಿಸಿದ್ದರೆ ಅನುಕೂಲವಾಗುತ್ತಿತ್ತು. ಇದೊಂದು ರೀತಿಯಲ್ಲಿ ಅವೈಜ್ಞಾನಿಕವಾಗಿದೆ. ನಿರ್ಮಾಣದ ಬಳಿಕ ಗೋಡೆ ಹಿಂಬದಿಗೆ ಮಣ್ಣು ಭರ್ತಿ ಮಾಡಿ ಬಿಗಿಗೊಳಿಸಿಲ್ಲ. ಗ್ರಾಮದ ನಿವಾಸಿಗಳು ಬಳಸುವ ತ್ಯಾಜ್ಯ ನೀರು ಹೊರ ಹೋಗಲು ತಡೆಗೋಡೆಯಲ್ಲಿ ರಂಧ್ರಗಳನ್ನು ಕೊರೆಯಲಾಗಿಲ್ಲ. ಇದರಿಂದಲೂ ಗ್ರಾಮಸ್ಥರು ಸಮಸ್ಯೆ ಅನುಭವಿಸವಂತಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ನದಿಯ ಮತ್ತೊಂದು ದಡದಲ್ಲಿರುವ ಜಮೀನುಗಳಿಗೆ ತೆರಳಲು ಅನುಕೂಲ ಆಗುವಂತೆ ಸೇತುವೆ ನಿರ್ಮಾಣ ಮಾಡುವುದಕ್ಕಾಗಿ ನದಿಗೆ 100 ಮೀ. ಉದ್ದದಷ್ಟು ತಡಗೋಡೆ ನಿರ್ಮಾಣವಾಗಿಲ್ಲ. ಈ ಭಾಗದಿಂದಲೇ ನದಿ ನೀರು ಗ್ರಾಮವನ್ನು ಆವರಿಸುತ್ತಿದ್ದು, ಗ್ರಾಮದ ಅರ್ಧ ಭಾಗ ಜಲಾವೃತವಾಗಿದೆ. ಇದಿರಿಂದಾಗಿ ಪ್ರವಾಹ ಎದುರಾದಗಲೆಲ್ಲ ಗ್ರಾಮಸ್ಥರು ಭಯದಲ್ಲೇ ಕಾಲ ಕಳೆಯಬೇಕಾಗಿದೆ. ಎಣ್ಣೆಹೊಳೆಕೊಪ್ಪಲು ಗ್ರಾಮ ದ್ವೀಪದಂತಿದ್ದು, ನದಿ ನೀರು ಗ್ರಾಮ ಪ್ರವೇಶಿಸದಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಬೇಕು. ಪ್ರವಾಹ ಎದುರಾದಾಗ ಗ್ರಾಮಕ್ಕೆ ಆಗಮಿಸುವ ಅಧಿಕಾರಿಗಳ ತಂಡ ಭರವಸೆಗಳನ್ನು ನೀಡಿ ವಾಪಸಾಗುತ್ತಾರೆ. ಪ್ರವಾಹ ಪರಿಸ್ಥಿತಿ ತಿಳಿಯಾದ ಬಳಿಕ ಇತ್ತ ಗಮನ ಹರಿಸುವುದಿಲ್ಲ. ಅಣೆಕಟ್ಟೆಯಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದರೆ ಹೆಚ್ಚಿನ ಅನಾಹುತ ಸಂಭವಿಸುತ್ತದೆ ಎಂದು ಗ್ರಾಮದ ನಿವಾಸಿ ರೈತಸಂಘ ಮುಖಂಡ ಎಣ್ಣೆಹೊಳೆಕೊಪ್ಪಲು ವೈ.ಜಿ.ಮಂಜು ದೂರುತ್ತಾರೆ.

ಪ್ರವಾಹಕ್ಕೂ ಮುನ್ನ ಅಧಿಕಾರಿಗಳ ಭೇಟಿ: ಪ್ರವಾಹ ಪರಿಸ್ಥಿತಿಗೂ ಮುನ್ನ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ನೇತೃತ್ವದ ತಂಡ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ವಹಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಆದರೆ 2-3 ದಿನಗಳ ಅಂತರದಲ್ಲಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ನೀರು ಗ್ರಾಮಕ್ಕೆ ನುಗ್ಗದಂತೆ ತಡೆಯಲು ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಮುಂದೆ ಪ್ರವಾಹ ತಗ್ಗಿದ ಬಳಿಕ ತಡೆಗೋಡೆ ನಿರ್ಮಾಣ ಆಗುತ್ತದೆಯೇ ಕಾದು ನೋಡಬೇಕಿದೆ.

ಪ್ರವಾಹ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಸ್.ಸಂತೋಷ್, ಸಣ್ಣ ನೀರಾವರಿ ಇಲಾಖೆ ಎಇಇ ನಿರ್ಮಲೇಶ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಎಣ್ಣೆಹೊಳೆಕೊಪ್ಪಲು ವೈ.ಜಿ.ಮಂಜು, ವೈ.ಪಿ.ರಘು, ರಾಘವೇಂದ್ರ, ಕೃಷ್ಣಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net