

ಆಕೆ ಅಕ್ಷರವನ್ನೇ ಕಲಿತವಳಲ್ಲ. ಆದರೆ, ವಿಶ್ವವಿದ್ಯಾಲಯಗಳ ಅಧ್ಯಯನದ ವಿಷಯ ವಸ್ತುವಾದರು! ಊರು ಬಿಟ್ಟು ಹೋದವರಲ್ಲ. ಆದರೆ, ತಮ್ಮ ಕಾರ್ಯದ ಮೂಲಕ ಇಡೀ ದೇಶಕ್ಕೇ ಪರಿಚಿತರಾದರು. ಅಂಥ ಅಪರೂಪದ ಕಾಡಿನ ವಿಶ್ವಕೋಶ ಅಂಕೋಲಾದ ತುಳಸಿ ಗೌಡ ಇನ್ನಿಲ್ಲ.
ತುಳಸಿ ಗೌಡ ಅಕ್ಷರ ಕಲಿತವರಲ್ಲ ಆದರೆ, ಅವರ ಕುರಿತ ಪಾಠವನ್ನು ಪ್ರಾಥಮಿಕ ಹಾಗೂ ವಿಶ್ವವಿದ್ಯಾಲಯದ ಪಠ್ಯದಲ್ಲಿ ಅಳವಡಿಸಲಾಗಿದೆ. ಅವರ ಪರಿಸರ ಪ್ರೇಮದ ಕುರಿತಾಗಿ 6ನೇ ತರಗತಿಯ ವಿದ್ಯಾರ್ಥಿಗಳ ಪಠ್ಯದಲ್ಲಿ ಪಾಠವೊಂದನ್ನು ಸೇರಿಸಲಾಗಿತ್ತು. ಹಲವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅವರ ಮನೆಗೆ ಆಗಮಿಸಿ, ಅವರ ಪರಿಸರ ಜ್ಞಾನವನ್ನು ಅಧ್ಯಯನ ಮಾಡಿದ್ದಾರೆ. ಪ್ರತಿಷ್ಠಿತ ಕಂಪನಿಗಳು, ವಿವಿಧ ಸಂಸ್ಥೆಗಳು ಅವರನ್ನು ಕರೆದು ಅವರ ಅನುಭವವನ್ನು ಆಲಿಸಿವೆ.
ತಮ್ಮ 25ನೇ ವಯಸ್ಸಿನಲ್ಲಿ ತಮ್ಮದೇ ಊರಿನ ಅರಣ್ಯ ಇಲಾಖೆ ನರ್ಸರಿಯಲ್ಲಿ ಗಿಡಗಳನ್ನು ಬೆಳೆಸುವ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ, ಅದನ್ನು ಎಂದಿಗೂ ಒಂದು ಹಣ ತರುವ ವೃತ್ತಿ ಎಂದು ಅವರು ನೋಡಲಿಲ್ಲ. ವೈಯಕ್ತಿಕ ಕಾಳಜಿ, ಪ್ರೀತಿಯಿಂದ ಕೆಲಸ ಮಾಡಿದ ತುಳಸಿ ಅವರು ನಂತರ ಪರಿಸರದ ಒಂದು ಭಾಗವಾಗಿ ಹೋದರು. ಗಿಡಗಳನ್ನು ತಮ್ಮ ಮಕ್ಕಳಂತೆ ನೋಡಲಾರಂಭಿಸಿದರು. ಅದು ಅವರನ್ನು ಇತರರಿಗಿಂತ ಭಿನ್ನವಾಗಿ ನೋಡಲು ಕಾರಣವಾಯಿತು ಎನ್ನುತ್ತಾರೆ ಖ್ಯಾತ ಲೇಖಕಿ ಅಕ್ಷತಾ ಕೃಷ್ಣಮೂರ್ತಿ.
30 ವರ್ಷಗಳಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ಬೆಳೆಸಿದ ಕೀರ್ತಿ ಅವರದ್ದು. ಅವರು ಕಾಡಿನ ಪ್ರತಿ ಗಿಡಗಳ ಪ್ರಭೇದಗಳನ್ನು ಗುರುತಿಸುತ್ತಿದ್ದರು. ಅವುಗಳು ಯಾವಾಗ ಹೂವು ಬಿಟ್ಟು, ಕಾಯಿಯಾಗುತ್ತವೆ, ಅವುಗಳ ಬೀಜಗಳನ್ನು ಸಂಗ್ರಹಿಸುವುದು ಹೇಗೆ? ಅವುಗಳನ್ನು ಎಷ್ಟು ದಿನ ನೆನೆಸಿಟ್ಟರೆ ಮೊಳಕೆಯೊಡೆಯುತ್ತವೆ. ಅವುಗಳನ್ನು ಪೋಷಿಸುವುದು ಹೇಗೆ? ಅವುಗಳ ಉಪಯುಕ್ತತೆ ಏನು ಮುಂತಾದ ಮಾಹಿತಿಯ ಕಣಜವಾಗಿದ್ದರು. ಕಾಡಿನ ಜ್ಞಾನ ಹೊಂದಿದ ವೃಕ್ಷ ಕೋಶದಂತಾಗಿದ್ದರು.
‘ಮನೆಯಲ್ಲಿ ಕಾಡುತ್ತಿದ್ದ ಬಡತನ ನನ್ನನ್ನು ನರ್ಸರಿ ಕೆಲಸಕ್ಕೆ ಕೊಂಡೊಯ್ದಿತು. ಪ್ರಾರಂಭದಲ್ಲಿ ನನಗೆ ದಿನಕ್ಕೆ 1 ರೂ. ಸಂಬಳ ನೀಡುತ್ತಿದ್ದರು. ದಿನ ಕಳೆಯುತ್ತಿದ್ದಂತೆ ನನಗೆ ಗಿಡ-ಮರಗಳ ಮೇಲೆ ಪ್ರೀತಿ ಮೂಡಲು ಕಾರಣವಾಯಿತು’ ಎಂದು ತುಳಸಿ ಗೌಡ ತಮ್ಮ ಪ್ರಾರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರು. ‘ಗಿಡ ಇದ್ದರೆ ನಾವೂ ಇರುತ್ತೇವೆ ಗಿಡ ಬೆಳೆಸಿ, ಉಳಿಸಿ’ ಎಂದು ಅವರು ತೀರ ಇತ್ತೀಚಿನವರೆಗೂ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರಿದರು.
ತುಳಸಿ ಗೌಡ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಿದವರು. ಅವರ ಪರಿಸರ ಪ್ರೇಮಕ್ಕೆ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ. ಮೃತರ ಕುಟುಂಬಸ್ಥರು, ಬಂಧುಗಳು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. | ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ
ತುಳಸಿ ಗೌಡ ಅವರ ತಾಯಿ ನೀಲಿ ಗೌಡ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಉದ್ಯೋಗ ಮಾಡುತ್ತಿದ್ದರು. ತಾನು ತಾಯಿಯಿಂದಲೇ ಗಿಡ, ಮರಗಳ ಬಗ್ಗೆ ಕಲಿತೆ ಎಂದು ತುಳಸಿ ಗೌಡ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ‘ಆಗ ಶಾಲೆ ಇತ್ತು. ಆದರೆ, ನನಗೆ ಹೋಗಲು ಮನಸಾಗಲಿಲ್ಲ. ತಾಯಿ ನೀಲಿಯ ಜತೆ ಊರಿನ ನರ್ಸರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ’ ಎಂದು ಅವರು ಹೇಳುತ್ತಿದ್ದರು. ‘ಕಾಡಿನಲ್ಲಿ ಹತ್ತಾರು ಕಿಮೀ ಓಡಾಡಿ ಚೀಲಗಟ್ಟಲೇ ಮರಗಳ ಬೀಜ ಸಂಗ್ರಹಿಸುತ್ತಿದ್ದೆವು’ ಎಂದು ಹೇಳುತ್ತಿದ್ದರು.
ಸಸಿ ಮಾಡಿ ನೆಟ್ಟು ಬೆಳೆಸುವುದರಲ್ಲೇ ಜೀವನದ ಸಾರ್ಥಕ್ಯ ಕಂಡು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ವೃಕ್ಷಮಾತೆ ತುಳಸಿ ಗೌಡ ಅವರ ನಿಧನಕ್ಕೆ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮತ್ತು ಎಂಡಿ ಡಾ. ಆನಂದ ಸಂಕೇಶ್ವರ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ವೃಕ್ಷ ಮಾತೆ ಎಂದೇ ಹೆಸರಾದ ಪದ್ಮಶ್ರೀ ಪುರಸ್ಕೃತ ತುಳಸಿ ಗೋವಿಂದ ಗೌಡ (84) ಅಂಕೋಲಾ ತಾಲೂಕು ಹೊನ್ನಳ್ಳಿ ಗ್ರಾಮದ ಸ್ವಗೃಹದಲ್ಲಿ ಸೋಮವಾರ ನಿಧನ ಹೊಂದಿದರು. ಹಾಲಕ್ಕಿ ಜನಾಂಗಕ್ಕೆ ಸೇರಿದ ಅವರು ಓದು, ಬರಹ ಬಾರದಿದ್ದರೂ ಲಕ್ಷಾಂತರ ಗಿಡಗಳನ್ನು ಬೆಳೆಸಿ ಮಾದರಿಯಾಗಿದ್ದರು. ಕಳೆದ ಏಪ್ರಿಲ್ನಲ್ಲಿ ಅವರು ಪಾರ್ಶ್ವವಾಯು ಕಾಯಿಲೆಗೆ ತುತ್ತಾದರು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಸ್ವಗ್ರಾಮ ಹೊನ್ನಳ್ಳಿಗೆ ಕರೆತಂದು ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಸಾಯಂಕಾಲ ಅವರು ಕೊನೆಯುಸಿರೆಳೆದರು. ಆವರಿಗೆ, ಪುತ್ರ ಸುಬ್ರಾಯ, ಪುತ್ರಿ ಸೋಮಿ ಹಾಗೂ ಅಪಾರ ಬಂಧುಗಳಿದ್ದಾರೆ. ಇಂದು (ಮಂಗಳವಾರ) ಅಂಕೋಲಾದಲ್ಲಿ ತುಳಸಿ ಗೌಡ ಅವರ ಅಂತಿಮ ಸಂಸ್ಕಾರ ನಡೆಯಲಿದೆ.
ತುಳಸಿ ಗೌಡರ ಪರಿಸರದ ಕಾಳಜಿಗಾಗಿ ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು. 1999ರಲ್ಲಿ ಅವರಿಗೆ ಪ್ರತಿಷ್ಠಿತ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಘೋಷಿಸಿ, 2021ರಲ್ಲಿ ಪ್ರದಾನ ಮಾಡಲಾಯಿತು. ಬರಿಗಾಲಲ್ಲಿ ತೆರಳಿ ಆಗಿನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಪ್ರಶಸ್ತಿ ಸ್ವೀಕರಿಸಿ ಅವರು ಸುದ್ದಿಯಾಗಿದ್ದರು. ಅಲ್ಲದೆ, ಮಂಡ್ಯ ಜಿಲ್ಲೆಯ ಇಂಡವಾಳು ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಸಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ, ನಿಡುಮಾಮಿಡಿ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ತುಳಸಿ ಭಾಜನರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ನಾಲ್ಕು ತಾಲೂಕುಗಳಲ್ಲಿ ಮಾತ್ರ ಇರುವ ಹಾಲಕ್ಕಿ ಒಕ್ಕಲಿಗ ಜನಾಂಗಕ್ಕೆ ತುಳಸಿ ಗೌಡ ಸೇರಿದವರು. ರವಿಕೆ ಹಾಕದೇ ಬೆನ್ನು ಕಾಣುವಂತೆ ಸೀರೆಯುಟ್ಟು, ಕುತ್ತಿಗೆಯ ತುಂಬ ಕರಿಮಣಿ ಸರ ಹಾಕಿಕೊಳ್ಳುವುದು ಸಮುದಾಯದ ಹೆಣ್ಣುಮಕ್ಕಳ ಸಂಪ್ರದಾಯ. ತುಳಸಿ ಅವರೂ ಅದೇ ವೇಷಭೂಷಣ ಧರಿಸುತ್ತಿದ್ದರು. ಶಿಕ್ಷಣ, ಉದ್ಯೋಗ, ರಾಜಕೀಯ ಮುಂತಾದ ಕ್ಷೇತ್ರದಲ್ಲಿ ಹಾಲಕ್ಕಿ ಒಕ್ಕಲಿಗರು ಸಾಕಷ್ಟು ಹಿಂದುಳಿದಿದ್ದಾರೆ. ಆದರೆ, ಸಂಪ್ರದಾಯ, ಸಂಸ್ಕೃತಿ ಹಾಗೂ ಕಾಡಿನ ಜ್ಞಾನದಲ್ಲಿ ಸಮುದಾಯ ಸಾಕಷ್ಟು ಶ್ರೀಮಂತವಾಗಿದೆ. ಈ ಸಮುದಾಯದ ಜನರಲ್ಲಿರುವ ವಿಶಿಷ್ಟ ಕಾಡಿನ ಜ್ಞಾನ, ಮತ್ತು ಮುಗ್ಧತೆ ಅವರಿಗೆ ಗೊತ್ತಿಲ್ಲದೇ ತುಳಸಿ ಅವರನ್ನು ಎತ್ತರಕ್ಕೆ ಕೊಂಡೊಯ್ದಿತು.
ತುಳಸಿ ಹುಟ್ಟಿದ್ದು, ಅಂಕೋಲಾದ ಉಳುವರೆ ಎಂಬ ಗಂಗಾವಳಿ ನದಿ ದಡದ ಊರಿನಲ್ಲಿ. ಕಷ್ಟ ಎಂಬುದು ಅವರ ಬದುಕಿನ ಭಾಗವಾಗಿತ್ತು. ಆದರೆ, ಅವರು ಗಿಡದ ಚಿಗುರಿನಲ್ಲಿ ತಮ್ಮ ಬದುಕಿನ ಖುಷಿಯನ್ನು ಕಂಡರು. ಅವರು ಚಿಕ್ಕಂದಿನಲ್ಲಿದ್ದಾಗಲೇ ತಂದೆ ನಾರಾಯಣ ಗೌಡ ತೀರಿ ಹೋದರು. ತಾಯಿ ನೀಲಿ ಗೌಡ ಇಬ್ಬರು ಹೆಣ್ಣುಮಕ್ಕಳ ಜತೆ ತಮ್ಮ ತವರು ಶಿರೂರಿಗೆ ಬಂದರು. ತಾಯಿಯ ತಂದೆ ಎಂದರೆ, ಅಜ್ಜನ ಆಶ್ರಯದಲ್ಲಿ ಶಿರೂರಿನಲ್ಲಿ ತುಳಸಿ ಕುಟುಂಬ ಬೆಳೆಯಿತು. ಕೆಲ ವರ್ಷಗಳ ಬಳಿಕ ಅವರ ಕುಟುಂಬ ಒಂದಿಷ್ಟು ಜಮೀನು ಮಾಡಿಕೊಂಡು ಹೊನ್ನಳ್ಳಿ ಗ್ರಾಮಕ್ಕೆ ಸ್ಥಳಾಂತರಗೊಂಡಿತು.
14ನೇ ವರ್ಷಕ್ಕೆ ತುಳಸಿ ಅವರ ವಿವಾಹವಾಯಿತು. ಪತಿ ಗೋವಿಂದ ಗೌಡ ಅವರು ಮನೆ ಅಳಿಯನಾಗಿ ಹೊನ್ನಳ್ಳಿಯಲ್ಲಿ ಕೃಷಿ ಮಾಡಿಕೊಂಡು ಬದುಕಿದರು. ತುಳಸಿ, ಅರಣ್ಯ ಇಲಾಖೆಯಲ್ಲಿ ದುಡಿದು ಬದುಕು ಸಾಗಿಸುತ್ತಿದ್ದರು. ತುಳಸಿ ಅವರಿಗೆ ಸಂದ ಹೆಸರಾಂತ ಪ್ರಶಸ್ತಿಗಳನ್ನು ಚಂದವಾಗಿಡುವಷ್ಟು ದೊಡ್ಡ, ಸುಸಜ್ಜಿತ ಮನೆ ಇಂದಿಗೂ ಕುಟುಂಬಕ್ಕಿಲ್ಲ. ಸುಲಭವಾಗಿ ವಾಹನ ತೆರಳುವಂಥ ರಸ್ತೆಯೂ ಅವರ ಮನೆಗಿರಲಿಲ್ಲ.
ತುಳಸಿ ಗೌಡ ಎಂದಿಗೂ ಅರಣ್ಯ ಇಲಾಖೆಯಲ್ಲಿ ಸಂಬಳಕ್ಕಾಗಿ ದುಡಿದವರಲ್ಲ. ಪ್ರಶಸ್ತಿ ಪಡೆಯಬೇಕು ಎಂದು ಗಿಡ ನೆಟ್ಟವರಲ್ಲ. ಅವರ ಮುಗ್ಧತೆ, ಪ್ರಾಮಾಣಿಕತೆ ಅವರನ್ನು ಅಷ್ಟು ಎತ್ತರಕ್ಕೆ ಬೆಳೆಸಿತು. ಅವರ ಬದುಕೇ ಒಂದು ಪುಸ್ತಕ. ಅವರ ಸಾಧನೆ, ಇತರರಿಗೆ ಮಾದರಿಯಾಗಿದೆ. | ಅಕ್ಷತಾ ಕೃಷ್ಣಮೂರ್ತಿ ತುಳಸಿ ಅವರ ಬಗ್ಗೆ ಅಧ್ಯಯನ ಮಾಡಿದ ಲೇಖಕಿ