ಬಸವೇಶ್ವರರ ಸಾವಿರದ ವಚನಕ್ಕೆ 1,400 ಗಾಯಕರ ಧ್ವನಿ

Allama Prabhu Maidan
ಶಿವಮೊಗ್ಗ ಬಸವ ಜಯಂತಿ ಆಚರಣಾ ಸಮಿತಿಯಿಂದ ಬಸವೋತ್ಸವ ಅಂಗವಾಗಿ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಸಾವಿರಾದ ವಚನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
Published on

ಶಿವಮೊಗ್ಗ: ನಗರದ ಅಲ್ಲಮಪ್ರಭು ಮೈದಾನ ಐತಿಹಾಸಿಕ ಕಾರ್ಯಕ್ರಮವೊಂದಕ್ಕೆ ಶುಕ್ರವಾರ ಸಂಜೆ ಸಾಕ್ಷಿಯಾಯಿತು. ಒಂದಲ್ಲ, ಎರಡಲ್ಲ, ಸಾವಿರಾರು ಮಂದಿ ಬೃಹತ್ ವೇದಿಕೆಯಲ್ಲಿ ಒಂದೇ ಧ್ವನಿ ಮತ್ತು ಒಂದೇ ಕಂಠದ ಮೂಲಕ ವಿಶ್ವಗುರು, ಜಗಜ್ಯೋತಿ ಬಸವೇಶ್ವರರ ವಚನಗಳಿಗೆ ಧ್ವನಿಯಾದರು. ಅಭೂತಪೂರ್ವ ಸಾವಿರದ ವಚನಕ್ಕೆ ಸಿಹಿಮೊಗೆಯ ಸಾವಿರಾರು ವಚನಪ್ರಿಯರ ಮನಗಳು ಅರಳಿದವು.

ಶಿವಮೊಗ್ಗ ಬಸವ ಜಯಂತಿ ಆಚರಣಾ ಸಮಿತಿಯಿಂದ ಬಸವೋತ್ಸವ ಅಂಗವಾಗಿ ಅಲ್ಲಮಪ್ರಭು ಮೈದಾನದ 260 ಅಡಿ ವಿಶಾಲ ವಿಶಾಲ ವೇದಿಕೆಯಲ್ಲಿ ನಡೆದ ಡಾ. ಸಿ.ಅಶ್ವತ್ಥ ಅವರ ರಾಗ ಸಂಯೋಜನೆಯ ‘ಸಾವಿರದ ವಚನ’ ರೋಮಾಂಚನಕಾರಿ ಗಾಯನ ಸಂಜೆಯು ಮಲೆನಾಡಿನ ಶ್ರೋತೃಗಳನ್ನು ವಚನದ ಕಂಠಸಿರಿಯಲ್ಲಿ ತೇಲಿಸಿತು.

ಧರ್ಮಾತೀತವಾಗಿ ನಡೆದ ಐತಿಹಾಸಿಕ ವಚನ ಗಾಯನದಲ್ಲಿ 1,400 ಗಾಯಕರು ಶರಣ ಬಸವಣ್ಣನ 38 ವಚನಗಳಿಗೆ ಧ್ವನಿಗೂಡಿಸಿದರು. ಶಿವಮೊಗ್ಗ ಮಾತ್ರವಲ್ಲದೆ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಗಾಯಕರು ಬೃಹತ್ ವೇದಿಕೆಯಲ್ಲಿ ಬಸವಣ್ಣನ ವಚನಗಳನ್ನು ಹಾಡಿದರು.

‘ಅಯ್ಯ ನೀನು ನೀರಾಕಾರವಾಗಿದ್ದಲ್ಲಿ’ ವಚನದ ಮೂಲಕ ಆರಂಭವಾದ 38 ವಚನಗಳ ಗಾಯನಕ್ಕೆ ನಗರದ 14 ಸಂಗೀತ ಶಾಲೆಗಳ ಸಂಗೀತ ಶಿಕ್ಷಕರು ಸಹಕಾರ ನೀಡಿದರು. ನಮ್ಮ ನಡಿಗೆ ಶರಣ ತತ್ವದೆಡೆಗೆ ಕಾರ್ಯಕ್ರಮದ ಮೂಲಕ ಮೊದಲ ಬಾರಿಗೆ ಸಾವಿರಾರು ಧ್ವನಿಗಳು ಒಂದೇ ವೇದಿಕೆ, ಒಂದೇ ಧ್ವನಿ, ಒಂದೇ ಕಂಠದ ಮೂಲಕ ಬಸವಣ್ಣನ ವಚನಗಳಿಗೆ ಧ್ವನಿಯಾಗಿದ್ದು ವಿಶೇಷ.

ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಡಾ. ಬಸವಮರುಳಸಿದ್ಧ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಸೇರಿ ಶಿವಮೊಗ್ಗ ಜಿಲ್ಲಾ ಮಠಾಧೀಶ ಪರಿಷತ್‌ನ ಮಠಾಧೀಶರು, ಅರ್ಚ್‌ಬಿಶಪ್ ಷರಾವೋ, ಮುಸ್ಲಿಂ ಧರ್ಮಗುರುಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಚನ ಗಾಯನಕ್ಕೆ ಯಾರೆಲ್ಲ ಗಣ್ಯರು?

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಡಿ.ಜಿ.ಶಾಂತನಗೌಡ, ಎಸ್.ಎಸ್.ಚನ್ನಬಸಪ್ಪ, ಎಂಎಲ್ಸಿ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಮಾಜಿ ಎಂಎಲ್ಸಿಗಳಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಆರ್.ಪ್ರಸನ್ನಕುಮಾರ್, ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಪ್ರಮುಖರಾದ ವಿಜಯಕುಮಾರ್ ಸಂತೇಕಡೂರು, ಕೆ.ಇ.ಕಾಂತೇಶ್, ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ಪಿ.ದಿನೇಶ್, ಎಚ್.ಸಿ.ಯೋಗೇಶ್, ಇ.ವಿಶ್ವಾಸ್, ಜಿಪಂ ಸಿಇಒ ಎನ್.ಹೇಮಂತ್, ಎಡಿಸಿ ಸಿದ್ದಲಿಂಗ ರೆಡ್ಡಿ ಮತ್ತಿತರರು ವಚನ ಗಾಯನಕ್ಕೆ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net