ಹಲ್ಲೆ ವಿಡಿಯೋ ವೈರಲ್, ಐವರು ಸೆರೆ

asault
Published on

ಬೆಂಗಳೂರು: ಜಾಲತಾಣಗಳಲ್ಲಿ ವೈರಲ್ ಆಗಿದ್ದ ಯುವಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೆ.ಆರ್.ಪುರದ ಟಿ.ಸಿ. ಪಾಳ್ಯದ ಅನುಷ್ ಕ್ಯಾಲ್ವೀನ್ (23), ಮುತ್ತು (19), ಕಲ್ಯಾಣನಗರದ ವಿನೀಷ್ (26), ಕೆ.ಆರ್. ಪುರದ ಸಂದೀಪ್ (35) ಮತ್ತು ಉಮಾಶಂಕರ್ ರೆಡ್ಡಿ (37) ಬಂಧಿತರು. ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಕಳೆದ ಮಾ. 31ರ ಸಂಜೆ 6 ಗಂಟೆಯಲ್ಲಿ ಹೆಣ್ಣೂರಿನ ಕಲ್ಯಾಣನಗರದ ಹೊರವರ್ತುಲ ರಸ್ತೆಯಲ್ಲಿ ಸುರೇಶ್ ಎಂಬಾತನನ್ನು ಇಬ್ಬರು ಯುವಕರು ಅಡ್ಡಗಟ್ಟಿ ಸ್ಟೀಲ್‌ಪೈಪ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮರಾದಲ್ಲಿ ಹಲ್ಲೆ ದೃಶ್ಯಾವಳಿ ಸೆರೆಯಾಗಿತ್ತು. ಎಲ್ಲೆಡೆ ವೈರಲ್ ಆಗಿತ್ತು. ಹೆಣ್ಣೂರು ಪೊಲೀಸರು 3 ಪ್ರತ್ಯೇಕ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಇದರ ಮೇರೆಗೆ ಹಲ್ಲೆಗೆ ಒಳಗಾಗಿದ್ದ ಸುರೇಶ್ ಕೊಟ್ಟ ಸುಳಿವಿನ ಮೇರೆಗೆ ಅನುಷ್, ಮುತ್ತು, ವಿನೀಶ್, ಸಂದೀಪ್ ಹಾಗೂ ಉಮಾ ಶಂಕರ ರೆಡ್ಡಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಚ್‌ಆರ್‌ಬಿ ಲೇಔಟ್‌ನಲ್ಲಿ ಇರುವ ಹೆರಿಟೇಜ್ ಮಿಲ್ಕ್ ಪ್ರಾಡಕ್ಟೃ್ ಕಂಪನಿಯಲ್ಲಿ ಸುರೇಶ್ ಅಕೌಂಟೆಂಟ್ ಆಗಿ 5 ತಿಂಗಳಿಂದ ಕೆಲಸ ಮಾಡುತ್ತಿದ್ದರು. ಆಂಧ್ರಪ್ರದೇಶದವರಾದ ಅವರು ಮಾರತ್ತಹಳ್ಳಿಯಲ್ಲಿ ನೆಲೆಸಿದ್ದ. ಇದೆ ಕಂಪನಿಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿ 6 ವರ್ಷಗಳಿಂದ ಉಮಾಶಂಕರ್ ರೆಡ್ಡಿ ಕೆಲಸ ಮಾಡುತ್ತಿದ್ದ. ಕೆಲಸದ ವಿಚಾರವಾಗಿ ಸುರೇಶ್‌ನೊಂದಿಗೆ ಮನಸ್ತಾಪ ಮಾಡಿಕೊಂಡಿದ್ದ. ಕೆಲಸ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದ ಸುರೇಶ್, ತಪ್ಪುಗಳು ನಡೆದಾಗ ಮೇಲಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದ.

ಇದರಿಂದ ಸುರೇಶ್ ಮತ್ತು ಉಮಾಶಂಕರ್ ರೆಡ್ಡಿ ನಡುವೆ ವೈಮನಸ್ಸು ಹೆಚ್ಚಾಗಿತ್ತು. ಈ ವಿಚಾರವನ್ನು ಸಹೋದ್ಯೋಗಿ ವಿನೀಷ್‌ನೊಂದಿಗೆ ಚರ್ಚಿಸಿದ್ದ. ಸುರೇಶ್‌ಗೆ ನವ್ಮ ತಂಟೆಗೆ ಬರದಂತೆ ಬುದ್ಧಿ ಕಲಿಸಬೇಕೆಂದು ಇಬ್ಬರು ತೀರ್ಮಾನಿಸಿದ್ದರು. ಇದಕ್ಕೆ ಒಪ್ಪಿಕೊಂಡ ವಿನೀಷ್, ಪರಿಚಯಸ್ಥರನ್ನು ಕರೆದು ಸುರೇಶ್ ಮೇಲೆ ಹಲ್ಲೆ ಮಾಡಲು ಸುಪಾರಿ ಕೊಟ್ಟಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net