ಬೀದಿ ನಾಯಿಗಳ ಬಗ್ಗೆ ಕೊಟ್ಟ ತೀರ್ಪು, ನನ್ನನ್ನು ವಿಶ್ವದಾದ್ಯಂತ ಪ್ರಸಿದ್ಧನನ್ನಾಗಿ ಮಾಡಿತು; ಸುಪ್ರೀಂಕೋರ್ಟ್ ನ್ಯಾ. ವಿಕ್ರಮ್ ನಾಥ್ ಹಾಸ್ಯ| Stray Dog Order

Justice Vikram Nath
Published on

Stray Dog Order: ಸುಪ್ರೀಂಕೋರ್ಟ್​ನಲ್ಲಿ ಪ್ರಕರಣಗಳ ವಿಚಾರಣೆ ಜೊತೆಗೆ ಹಾಸ್ಯ ಮಾಡೋದಕ್ಕೆ ಹೆಸರುವಾಸಿಯಾಗಿರುವ ಸುಪ್ರೀಂಕೋರ್ಟ್ ಹಿರಿಯ ನ್ಯಾಯಾಧೀಶ ವಿಕ್ರಮ್ ನಾಥ್ ಅವರು ಬೀದಿ ನಾಯಿಗಳ ಬಗ್ಗೆ ನಾವು ನೀಡಿದ ತೀರ್ಪು ನನ್ನನ್ನು ವಿಶ್ವದಾದ್ಯಂತ ಪ್ರಸಿದ್ದನನ್ನಾಗಿ ಮಾಡಿದೆ ಎಂದು ಶನಿವಾರ(ಆಗಸ್ಟ್ 30) ಹಾಸ್ಯವಾಗಿ ಹೇಳಿದರು.

ಕೇರಳದ ತಿರುವನಂತಪುರಂನಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (NALSA) ಆಯೋಜಿಸಿದ್ದ ಮಾನವ-ವನ್ಯಜೀವಿ ಸಂಘರ್ಷದ ಕುರಿತಾದ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ನ್ಯಾಯಮೂರ್ತಿ ನಾಥ್, ಈ ಪ್ರಕರಣವನ್ನು ವಿಚಾರಣೆ ನಡೆಸಲು ತಮಗೆ ವಹಿಸಿದ್ದಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

"ಬಹಳ ಸಮಯದಿಂದ, ನಾನು ನನ್ನ ಸಣ್ಣಪುಟ್ಟ ಕೆಲಸಗಳಿಗೆ ಕಾನೂನು ವಲಯದಲ್ಲಿ ಹೆಸರುವಾಸಿಯಾಗಿದ್ದೇನೆ. ಆದರೆ ಈ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಇಡೀ ನಾಗರಿಕ ಸಮಾಜದಲ್ಲಿ ನನಗೆ ಮನ್ನಣೆ ನೀಡಿದ ಬೀದಿ ನಾಯಿಗಳಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಹಾಸ್ಯಮಯವಾಗಿ ಹೇಳಿದಾಗ ಸಭೆ ನಗೆ ಗಡಲಲ್ಲಿ ತೇಲಿತು"

ನಾಯಿ ಪ್ರಿಯರಲ್ಲದೆ, ನಾಯಿಗಳು ಸಹ ನನಗೆ ಆಶೀರ್ವಾದ ಮತ್ತು ಶುಭಾಶಯಗಳನ್ನು ನೀಡುತ್ತಿವೆ ಎಂಬ ಸಂದೇಶಗಳು ನನಗೆ ಬರುತ್ತಿವೆ" ಎಂದು 2027 ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರಾಗಲಿರುವ ನ್ಯಾಯಮೂರ್ತಿ ವಿಕ್ರಮ್​ ನಾಥ್ ಹೇಳಿದ್ದಾರೆ.

ಬೀದಿ ನಾಯಿಗಳ ಕುರಿತಾದ ತೀರ್ಪು

ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಸೆರೆಹಿಡಿಯಲಾದ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಂದ ಬಿಡುಗಡೆ ಮಾಡುವುದನ್ನು ನಿಷೇಧಿಸುವ ಇಬ್ಬರು ನ್ಯಾಯಾಧೀಶರ ಪೀಠದ ಆಗಸ್ಟ್ 11 ರ ಆದೇಶವನ್ನು ಆಗಸ್ಟ್ 22 ರಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ವಿಶೇಷ ಮೂವರು ನ್ಯಾಯಾಧೀಶರ ಪೀಠವು ಮಾರ್ಪಡಿಸಿತು.

ತಿದ್ದುಪಡಿಯಾದ ತೀರ್ಪಿನಲ್ಲಿ ರೇಬೀಸ್ ಅಥವಾ ಆಕ್ರಮಣಕಾರಿ ಸ್ವಭಾವವಿರುವ ಶ್ವಾನಗಳನ್ನು ಹೊರತುಪಡಿಸಿ, ಉಳಿದ ಶ್ವಾನಗಳನ್ನು ಕ್ರಿಮಿನಾಶಕಗೊಳಿಸಿ, ಅವುಗಳಿಗೆ ಲಸಿಕೆ ಹಾಕಿ ಮೂಲ ಸ್ಥಳಗಳಿಗೆ ಮರಳಿ ಬಿಡುಗಡೆ ಮಾಡಲು ಅನುಮತಿ ನೀಡಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net