

ದೇವಿಯು ಲೀಲಾಮಹಾರಾಣಿಗೆ ಸಮಾಧಿ ಅವಸ್ಥೆಯನ್ನು ಉಂಟುಮಾಡಿ ಅವಳು ಸೂಕ್ಷ್ಮ ಶರೀರದಲ್ಲಿರುವಾಗಲೇ ಅವಳಿಗೆ ಅನೇಕ ದರ್ಶನಗಳನ್ನು ಮಾಡಿಸಿದಳು. ಆ ದಂಪತಿಗಳ ಹಿಂದಿನ ಜನ್ಮ, ಲೀಲಾ ಮಹಾರಾಣಿಯ ಹಿಂದಿನ ನೂರಾರು ಜನ್ಮಗಳು, ಬ್ರಹ್ಮಾಂಡದ ವಿಸ್ತಾರ, ಬೇರೆ ಬ್ರಹ್ಮಾಂಡಗಳು ಇವಿಷ್ಟನ್ನೂ ದರ್ಶನ ಮಾಡಿಸಿದಳು.
ಲೀಲಾ ಮಹಾರಾಣಿಯ ಅಪೇಕ್ಷೆಯಂತೆ ಪದ್ಮ ಮಹಾರಾಜನ ಮುಂದಿನ ಜನ್ಮ ವಿದೂರಥನಿದ್ದಲ್ಲಿಗೆ ಅವಳನ್ನು ಶ್ರೀದೇವಿಯು ಅದೇ ಸೂಕ್ಷ್ಮ ರೂಪದಿಂದ ಕರೆತಂದಿದ್ದಾಳೆ. ಸಾಮ್ರಾಟನಾದ ವಿದೂರಥನ ರಾಜಧಾನಿ ಸಮೀಪದಲ್ಲಿ ಘನಘೋರ ಸಂಗ್ರಾಮ ನಡೆಯುತ್ತಿದೆ. ಅವನ ಸಾಮಂತರಲ್ಲಿಯೆ ಕೆಲವರು ತಿರುಗಿ ಬಿದ್ದಿದ್ದರಿಂದ ಆ ಯುದ್ಧ ನಡೆಯುತ್ತಿದೆ. ಭಾರತ ದೇಶದಲ್ಲಿ ಆ ಕಾಲದಲ್ಲಿರುವ ಎಲ್ಲಾ ದೇಶ (ರಾಜ್ಯ)ಗಳ ಸೈನಿಕರು ಮಹಾಯುದ್ಧದಲ್ಲಿ ಭಾಗವಹಿಸಿದ್ದಾರೆ.
ಆ ಕಾಲದ ದೇಶಗಳ ಯಾದಿಯನ್ನು ಸಮಗ್ರವಾಗಿ ಈ ಸಂದರ್ಭದಲ್ಲಿ ಶ್ರೀ ವಸಿಷ್ಠರು ಕೊಟ್ಟಿದ್ದಾರೆ. ಪೂರ್ವದಿಕ್ಕಿನಿಂದ ಆರಂಭಿಸಿ ಪ್ರದಕ್ಷಿಣಾಕಾರವಾಗಿ ಈಶಾನ್ಯದಿಕ್ಕಿನ ಪರ್ಯಂತ ಆ ಕಾಲದ ಎಲ್ಲಾ ಸಣ್ಣ ರಾಜ್ಯಗಳ ಪಟ್ಟಿಯನ್ನು ಕೊಟ್ಟಿರುವುದು ಶ್ರೀವಸಿಷ್ಠರ ಅಗಾಧ ಜ್ಞಾನಕ್ಕೆ ಸಾಕ್ಷಿಯಾಗಿದೆ. ಯುದ್ಧವು ನಿರ್ಣಾಯಕ ಘಟ್ಟವನ್ನು ತಲುಪಿದೆ. ಯುದ್ಧರಂಗದಲ್ಲಿರುವ ಸಾಕಷ್ಟು ಸೈನಿಕರು ಹತರಾಗಿದ್ದಾರೆ. ಈಗ ಹೆಚ್ಚು ಪರಾಕ್ರಮಿಗಳಾದ ವೀರರು ದ್ವಂದ್ವಯುದ್ಧದಲ್ಲಿ ತೊಡಗಿಕೊಂಡಿದ್ದಾರೆ. ದ್ವಂದ್ವ ಯುದ್ಧದಲ್ಲಿ ಯಾವ ಸೈನಿಕರಿಂದ ಯಾವ ಸೈನಿಕರು ಹೇಗೆ ಹತರಾಗುತ್ತಿದ್ದಾರೆಂದು ಎಳೆ ಎಳೆಯಾಗಿ ಬಿಡಿಸಿ ಶ್ರೀ ವಸಿಷ್ಠರು ಹೇಳುತ್ತಿದ್ದಾರೆ.
‘ಶ್ರೀರಾಮ! - ಗೌಡದೇಶದ ಭಟರು ದಂಡಾಯಧ (ಲಾಠಿ)ಗಳನ್ನು ತಿರುಗಿಸುತ್ತಾ ಮುನ್ನುಗ್ಗಿ ಬರುತ್ತಿದ್ದರು. ಅದರಿಂದ ಬರುತ್ತಿರುವ ಗುಡುಗುಡು ಶಬ್ದವನ್ನು ಕೇಳಿ ಗಾಂಧಾರ ಗೋವುಗಳು (ಗೋವಿನಂತಿರುವ ಗಾಂಧಾರ ದೇಶದ ಸೈನಿಕರು) ದ್ರವಿಡರಂತೆ ಓಡಿ ಹೋದವು (ಗಾಂಧಾರ ಸೈನಿಕರು ಸೋತು ಹೋದರು).
ಇನ್ನೊಂದೆಡೆ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿರುವ ಶಕರು ಬಿಳಿ ಬಟ್ಟೆಗಳನ್ನು ಧರಿಸುವ ಪಾರಸೀಕರ ಮೇಲೆ ಪ್ರಬಲವಾಗಿ ಆಕ್ರಮಣ ಮಾಡುತ್ತಿದ್ದರು. ನೀಲಿಯ ವಸ್ತ್ರವನ್ನು ಧರಿಸಿರುವ ಶಕರ ಗುಂಪು ಆಕಾಶದಲ್ಲಿರುವ ಸಮುದ್ರದಂತೆ ಮತ್ತು ಪರ್ವತಗಳಿಂದ ಶಬ್ದಮಾಡುತ್ತಾ ಧುಮುಕಿ ಬರುವ ನದಿಗಳಂತೆ ಪಾರಸೀಕರ ಮೇಲೆ ಮುಗಿಬಿದ್ದಿತು. ಇದರಿಂದ ಪಾರಸೀಕರಿಗೆ ದಟ್ಟವಾದ ರಾತ್ರಿಯ ಕತ್ತಲು ಕವಿದಂತೆ ಭ್ರಮೆಯುಂಟಾಯಿತು. ಹಾಗಾಗಿ ಪಾರಸೀಕರು ಸೋತುಹೋದರು.
ಶಕರ ಮತ್ತು ಪಾರಸೀಕರ ಆಯುಧ ಪ್ರಯೋಗಗಳು (ಯುದ್ಧವು) ಯುದ್ಧರಂಗದಲ್ಲಿರುವವರಿಗೆ, ಕ್ಷೀರಸಾಗರದಲ್ಲಿ (ಸಮುದ್ರ ಮಥನಕ್ಕೋಸ್ಕರ) ತಂದಿರಿಸಲ್ಪಟ್ಟ ಮಂದರ ಪರ್ವತದ ವನಗಳಂತೆ ಕಂಡವು. ಯುದ್ಧವನ್ನು ನೋಡುತ್ತಿರುವವರಿಗೆ ಹಿಮಾಲಯ ಪರ್ವತದ ಸಾನುಪ್ರದೇಶದಲ್ಲಿರುವ ವನಗಳಂತೆ ಕಂಡಿತು.(ಪಾರಸೀಕರು ಬಿಳಿಯ ಬಟ್ಟೆಯನ್ನು ಧರಿಸಿದ್ದರಿಂದ ಮತ್ತು ಶಕರು ನೀಲಿ ಬಟ್ಟೆ ಧರಿಸಿದ್ದರಿಂದ ಹೀಗೆ ಕಂಡಿತು)’.
‘ಯುದ್ಧರಂಗದ ದೃಶ್ಯವು ಭೂಮಿಯಲ್ಲಿದ್ದವರಿಗೆ, ಆಕಾಶದಲ್ಲಿ ಶಸ್ತ್ರ ಸಮೂಹಗಳೆಂಬ ಮೋಡಗಳು ಹಾರಿ ಬರುತ್ತಿದ್ದಂತೆ ಕಾಣುತ್ತಿದ್ದರೆ; ಆಕಾಶದಲ್ಲಿದ್ದು ನೋಡುತ್ತಿರುವ ದೇವತೆಗಳಿಗೆ ಸಮುದ್ರದಲ್ಲಿ ಕುಣಿಯುತ್ತಿರುವ ಅಲೆಗಳು ಅದೇ ರೀತಿ ಕುಣಿಯುತ್ತಿರುವ ಅಲೆಗಳೊಂದಿಗೆ ಪರಸ್ಪರ ಘರ್ಷಣೆ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿತ್ತು. ಯುದ್ಧರಂಗದ ಆಕಾಶಕಾನನವು ನೂರಾರು ಶ್ವೇತಛತ್ರ ಗಳಿಂದ, ಬಾಣಗಳೆಂಬ ಪತಂಗಗಳಿಂದ ಮತ್ತು ಶಕ್ತ್ಯಾಯುಧಗಳಿಂದ ತುಂಬಿಕೊಂಡಿದ್ದು ದಟ್ಟವಾಗಿ ಕಾಣುತ್ತಿತ್ತು.’
‘ಕೇಕಯ ದೇಶದ ಸೈನಿಕರು ತಮಗೆ ಎದುರಾದ ಶತ್ರುಗಳನ್ನು ವಿರಾಸವ (ಯುದ್ಧದಲ್ಲಿ ಕುಡಿಯುವ ಮದ್ಯ)ಪಾನ ಮಾಡಿದವರು ಚೀರಾಡುವ ರೀತಿಯಲ್ಲಿ ಆಕ್ರಂದನ ಮಾಡುತ್ತಾ ಓಡಿ ಹೋಗುವಂತೆ ಮಾಡಿದರು. ಕಂಕ ಜನಾಂಗದ ಸೈನಿಕರು, ಹದ್ದುಗಳ ಸಮೂಹಗಳು ಆಕಾಶದಲ್ಲಿ ಮುತ್ತಿಕೊಂಡಿದ್ದರಿಂದ ಉಂಟಾದ ದಟ್ಟ ಧೂಳಿನಿಂದ ನೆಲದ ಮೇಲಿದ್ದವರ ಮುಖವೆಲ್ಲ ಮುಚ್ಚುವಂತೆ, ಶತ್ರುಗಳನ್ನು ಆಕ್ರಮಿಸಿ ದಿಗ್ಭ್ರಾಂತರಾಗುವಂತೆ ಮಾಡಿದರು’.
‘ಅಂಗ ದೇಶದ ಸೈನಿಕರು ಕಿರಾತ ಸೈನಿಕರ ಮೇಲೆ ಘೋರವಾದ ಆಕ್ರಮಣವನ್ನು ಮಾಡಿದರು. ಇದರಿಂದ ಕಿರಾತ ಸೇನೆಗಳೆಂಬ ಕನ್ಯೆಯರು ತಮ್ಮ ಕಲಕಲ ಶಬ್ದಗಳಿಂದ ಅನಂಗರಾಗಿ ಹೋದರು. (ಅಂಗರಹಿತರಾಗಿ ಅಂದರೆ, ಶರೀರದ ಅಂಗಗಳೆಲ್ಲ ಕತ್ತರಿಸಲ್ಪಟ್ಟವರಾಗಿ ಎಂಬುದಾಗಿ ಒಂದು ಅರ್ಥ. ಮನ್ಮಥನ ಉದ್ರೇಕಕ್ಕೆ ಒಳಗಾದವರಾಗಿ ಎಂದು ಇನ್ನೊಂದರ್ಥ. ಎರಡನೆ ಅರ್ಥದಲ್ಲಿ ದುರ್ಬಲರಾಗಿ ಹೋದರು ಎಂಬುದಾಗಿ ತಾತ್ಪರ್ಯ.) ಈ ಸ್ಥಿತಿಯಲ್ಲಿ ಅಂಗ ದೇಶದ ಸೈನಿಕರು ಭೈರವನಂತೆ ಭಯಂಕರವಾಗಿ ಘರ್ಜಿಸಿದರು’.
‘ಕಾಶಜನಪದದ ಸೈನಿಕರು ಸಮುದ್ರ ಮಧ್ಯದಲ್ಲಿರುವ ದ್ವೀಪದೇಶಗಳಿಗೆ ಸೇರಿದವರು. ಅವರು ತದ್ದೇಹಕರೆಂಬ ಸೈನಿಕರನ್ನು ಆಕ್ರಮಿಸಿದರು. ಮಾಯಾಯುದ್ಧದಲ್ಲಿ ವಿಶಾರದರಾದ ಕಾಶ ಸೈನಿಕರು ಪಕ್ಷಿಯ ರೂಪಗಳನ್ನು ಧರಿಸಿ ಶತ್ರುಗಳಿಗೆ ಗೊತ್ತಾಗದಂತೆ ಮುಗಿಬಿದ್ದರು.
ರಭಸದಿಂದ ಬಡಿದುಕೊಳ್ಳುತ್ತಿರುವ ರೆಕ್ಕೆಗಳಿಂದ ಬಿರುಗಾಳಿಯಂತಹ ಗಾಳಿಯನ್ನು ಎಬ್ಬಿಸಿದ್ದರಿಂದ ಧೂಳಿ ಕಣಗಳು ಹಾರಿ ಹೋಗುವಂತೆ ತದ್ದೇಹಕ ಸೈನಿಕರು ಹಾರಿ ಹೋದರು (ಸೋತು ಹೋದರು). ನಾರ್ಮದರೆಂಬ ಸೈನಿಕರು (ಪ್ರಾಯಶಃ ನರ್ಮದಾ ನದಿ ಪ್ರದೇಶದ ಸೈನಿಕರು) ಯುದ್ಧೋನ್ಮತ್ತರಾಗಿ (ಯುದ್ಧಾವೇಶದಿಂದ ಕೂಡಿದವರಾಗಿ) ತಮ್ಮ ಶತ್ರುಗಳನ್ನು ಗೆದ್ದ ಸಂಭ್ರಮದಲ್ಲಿ ಕುಣಿದಾಡುತ್ತಿದ್ದರು. ಎಲ್ಲಾ ಆಯುಧಗಳನ್ನು ಬಿಟ್ಟು, ಯುದ್ಧ ವಸ್ತ್ರಗಳನ್ನು ಬಿಟ್ಟು, ತಮ್ಮನ್ನು ತಾವು ಅಲಂಕರಿಸಿಕೊಂಡು ಹಾಸ್ಯ ಮಾಡುತ್ತಾ, ಕೇಕೆ ಹಾಕಿ ನಗುತ್ತಾ, ಕುಣಿದಾಡಿದರು.’
(ಪ್ರತಿಕ್ರಿಯಿಸಿ: vvsudina@gmail.com, info.swarnavalli@gmail.com)