ಎಲ್ಲವನ್ನೂ ಮುನ್ನಡೆಸುತ್ತಿರುವುದು ಅವ್ಯಕ್ತವಾಗಿರುವ ಪರಬ್ರಹ್ಮ ಸ್ವರೂಪ

-67cb2d053963b
Published on
ನಾವುಣ್ಣುವನ್ನಗಳು ನಾವು ಕುಡಿವುದಕಗಳು|

ನಾವುಸಿರುವೆಲರುಗಳು ನಾವುಡುವ ವಸ್ತ್ರ||

ಭೂವ್ಯೋಮಗಳ ಯಂತ್ರ ಸಂಘದುತ್ಪನ್ನಗಳು|

ಜೀವವೆರಡರ ಶಿಶುವು-ಮಂಕುತಿಮ್ಮ||119||

ನಾವು ಉಣ್ಣುವ ಅನ್ನ, ನಾವು ಕುಡಿಯುವ ನೀರು, ನಾವು ಉಸಿರಾ ಡುವ ಗಾಳಿ, ನಾವು ಉಡುವ ವಸ್ತ್ರಗಳೆಲ್ಲವೂ ಭೂಮಿ ಮತ್ತು ಆಕಾಶದ ಸಂಘಟನೆಯಿಂದ ನಡೆಯುವ ಯಂತ್ರದ ಉತ್ಪನ್ನಗಳಾಗಿವೆ. ಜೀವವೆನ್ನುವುದು ಈ ಎರಡರ ಶಿಶು ಎನ್ನುತ್ತದೆ ಈ ಕಗ್ಗ.

ಮನುಷ್ಯನು ತನ್ನ ಮತಿಶಕ್ತಿಯಿಂದ ಸುಗಮ ಜೀವನಕ್ಕೆ ಅನಿವಾರ್ಯವೆನ್ನಿಸುವಂಥ ಹಲವು ಹೊಸ ಉತ್ಪನ್ನಗಳನ್ನು ರೂಪಿಸಿದ್ದಾನೆ. ವಿಜ್ಞಾನದ ವಿಮರ್ಶಾತ್ಮಕ ಪಥದಲ್ಲಿ ಬೆರಗಾಗಿಸುವ ಸಾಧನೆಗಳನ್ನು ಮಾಡಿದ್ದಾನೆ. ಆದರೂ ತನ್ನ ಜೀವನಕ್ಕೆ ಅಗತ್ಯವೂ, ಅನಿವಾರ್ಯವೂ ಆಗಿರುವ ನೀರು, ಗಾಳಿ, ಆಹಾರಗಳನ್ನು ಪ್ರಕೃತಿಯ ನೆರವಿಲ್ಲದೆ ಸ್ವತಂತ್ರವಾಗಿ ಸೃಷ್ಟಿಸಲಾರ. ಅವೆಲ್ಲ ಸಾಧನೆಗೂ ಪ್ರಕೃತಿಯೇ ಆಧಾರ. ಪರಿಸರವನ್ನು, ಅಲ್ಲಿರುವ ಸಂಪನ್ಮೂಲಗಳನ್ನುಳಿದು ಮನುಷ್ಯನ ಸಾಧನೆಗಳಿರಲು ಸಾಧ್ಯವಿಲ್ಲ, ವಿಜ್ಞಾನದ ಆವಿಷ್ಕಾರಗಳಿಲ್ಲ.

ಎಲ್ಲಾ ಜೀವಗಳನ್ನೂ ಪೋಷಿಸುವ ಭೂಮಿಯ ಹಸಿರಿಗೆ ಸೂರ್ಯನೇ ಚೈತನ್ಯದಾಯಕ, ನೆಲವೇ ಆಧಾರ. ಬೆಳಕಿನ ಬಿಸುಪಿಲ್ಲದೆ ಹಸಿರು ನಳನಳಿಸದು. ಹಸಿರಿಲ್ಲದಿದ್ದರೆ ಬುವಿಯಲ್ಲಿ ಉಸಿರುಳಿಯದು. ಸೂರ್ಯನ ನಿಯಮಿತ ಚಲನೆಗೆ ಅನುಸಾರವಾಗಿ ಕಾಲದ ಲೆಕ್ಕ. ನಕ್ಷತ್ರ, ಗ್ರಹಗಳ ಚಲನೆಯಲ್ಲಿರುವ ಗೊತ್ತುಪಾಡುಗಳಿಂದಾಗಿ ಋತು ಪರಿವರ್ತನೆ, ಮಳೆ-ಬಿಸಿಲು. ಅದಿಲ್ಲದಿದ್ದರೆ ಬೇಸಾಯವಿಲ್ಲ, ಬೆಳೆಯಿಲ್ಲ. ಅಷ್ಟೇ ಅಲ್ಲ ಭೂಗೋಳವು ತನ್ನ ಅಕ್ಷದಲ್ಲಿ ಸೂರ್ಯನನನ್ನು ಸುತ್ತುವುದರೊಂದಿಗೆ, ಇದ್ದಲ್ಲೇ ಪ್ರದಕ್ಷಿಣವಾಗಿ ಸುತ್ತುತ್ತದೆ. ವಸ್ತುಗಳನ್ನು ತನ್ನೆಡೆಗೆ ಆಕರ್ಷಿಸಿ ಹಿಡಿದಿಟ್ಟುಕೊಳ್ಳುತ್ತದೆ. ಈ ಪ್ರಕೃತಿ ನಿಯಮದಲ್ಲಿ ವ್ಯತ್ಯಾಸವಾದರೆ ಜೀವನವು ಸಾಧ್ಯವಿಲ್ಲ.

ಸೂರ್ಯನು ಬಿಸಿಲು-ಬೆಳಕನ್ನು ನೀಡುತ್ತಾನೆ, ಆದರೆ ತಣಿವನ್ನಲ್ಲ. ನೀರು ಜೀವನಾಧಾರವಾಗಿ ತಂಪೆರೆಯುತ್ತದೆಯೇ ಹೊರತು ಅಗ್ನಿಯಾಗುವುದಿಲ್ಲ. ಗಾಳಿಯು ಚಲಿಸುವುದೆ ಹೊರತು ಸ್ಥಿರವಾಗಿ ಒಂದೆಡೆ ನಿಲ್ಲುವುದಿಲ್ಲ. ಆವರಿಸಿಕೊಂಡಿರುವ ಆಕಾಶವು ಕೊನೆಯಾಗುವುದಿಲ್ಲ. ಇವೆಲ್ಲವನ್ನೂ ಒಳಗೊಂಡಿರುವ ನಿಸರ್ಗವು ಆಯಾಯ ಕಾಲ-ಋತುವಿಗೆ ಅನುಗುಣವಾಗಿ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತದೆ. ನಿತ್ಯ ನೂತನವಾಗಿರುತ್ತದೆ.

ಬುವಿಯ ಹಸಿರು, ನೆಲದಿಂದ ನೀರು,ಪೋಷಕಾಂಶವನ್ನು ಹೀರಿ ಜೀವಗಳಿಗೆ ಜೀವದಾಯಕವಾಗುತ್ತವೆ. ಅಷ್ಟೇ ಅಲ್ಲ ಪರಿಸರದಲ್ಲಿರುವ ಕೋಟ್ಯಂತರ ಜೀವರಾಶಿಗಳೆಲ್ಲವೂ ಪರಸ್ಪರ ಪೂರಕವಾಗಿ ಬಾಳುತ್ತವೆ. ನಿಸರ್ಗವನ್ನು ಅಲ್ಲಿ ನಡೆಯುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಂದು ಸಮನ್ವಯ, ಸಂಯೋಜಿತ ಕಾರ್ಯಕೌಶಲವಿರುವುದು ಸ್ಪಷ್ಟವಾಗುತ್ತದೆ. ಈ ಸಮತೋಲನದ ಸ್ಥಿತಿಗೆ ಸ್ವಲ್ಪ ಧಕ್ಕೆಯಾದರೂ ಪ್ರಾಕೃತಿಕ ವಿಕೋಪಗಳು, ವೈಪರೀತ್ಯಗಳು ಸಂಭವಿಸುತ್ತವೆ.

ಉರಿವ ಸೂರ್ಯನ ಶಾಖವು ಹದವಾಗಿ ಭೂಮಿಯನ್ನು ಸೋಕುವುದರೊಂದಿಗೆ, ಬೆಚ್ಚಗಿನ ಹೊದಿಕೆಯಂತೆ ಕಾಪಾಡುತ್ತದೆ. ಸೂರ್ಯ, ಭೂಮಿ ಮತ್ತು ವ್ಯೋಮದಲ್ಲಿರುವ ಗ್ರಹ, ನಕ್ಷತ್ರಾದಿಗಳು ನಿಯಮಿತ ಕ್ರಮದೊಳಗೆ ಒಂದು ಯಂತ್ರದಂತೆ ಕಾರ್ಯಾಚರಿಸುತ್ತಿವೆ. ಮನುಜ ನಿರ್ವಿುತ ಯಂತ್ರವಾದರೂ ಕೆಡಬಹುದು, ಸ್ಥಗಿತವಾಗಬಹುದು ಆದರೆ ವ್ಯೋಮಾಕಾಶದೊಳಗೆ ಸಂಯೋಜಿಸಲ್ಪಟ್ಟಿರುವ ನಿಸರ್ಗ ಯಂತ್ರವು ಎಂದಿಗೂ ಸಮಸ್ಯೆ ಉಂಟುಮಾಡಲಾರದು. ಚಿರನೂತನವಾದ ಈ ರಕ್ಷಕ ಯಂತ್ರವು ಚರ ಜೀವಜಗತ್ತನ್ನು ಕಾಪಾಡುತ್ತಿದೆ.

ಒಂದೊಮ್ಮೆ ಈ ವ್ಯವಸ್ಥೆಯಲ್ಲಿ ಒಂದಿಷ್ಟು ಏರುಪೇರಾದರೂ ಭೂಮಿಯ ಬದುಕು ದುಸ್ತರವಾಗುತ್ತದೆ. ಹಾಗಾಗಿ ಭೂಮಿ ಮತ್ತು ವ್ಯೋಮ ಮತ್ತಲ್ಲಿರುವ ಗೋಚರ, ಅಗೋಚರ ವಸ್ತುಗಳು ಜೀವಗಳನ್ನು ಮಗುವಿನಂತೆ ಪಾಲಿಸುತ್ತಿವೆ. ಜೀವವಾದರೋ ಪಂಚಭೂತಗಳಾದ ಭೂಮಿ, ನೀರು,ಅಗ್ನಿ,ವಾಯು, ಆಕಾಶಗಳಿಂದ ಪೋಷಿತವಾಗಿದೆ. ಇವುಗಳಿಂದಲೇ ಪಂಚೇಂದ್ರಿಯಗಳಾದ ಗಂಧ, ರುಚಿ, ಬೆಳಕು, ಸೋಕು, ಸದ್ದು ಕೆಲಸಮಾಡುತ್ತವೆ. ಜೊತೆಗೆ ಮನಸ್ಸು, ಬುದ್ಧಿ, ಅಹಂಕಾರಗಳೆಂಬ ಅಂತಃಕರಣಗಳು ಸೇರಿ ಜೀವದ ಕಾರ್ಯಕೌಶಲ. ಪಂಚಕಮೇಂದ್ರಿಯಗಳಾದ ವಾಕ್ಕು, ಕೈ, ಕಾಲು, ಅಧೋಧ್ವಾರಗಳು ಸೇರಿದ ವ್ಯವಸ್ಥೆಯಿಂದಾಗಿ ಜೀವಜಗತ್ತು. ಇವೆಲ್ಲಾ ಸಂಯೋಜಿತ ವ್ಯವಸ್ಥೆಯು ಭೂಮಿ-ಸೂರ್ಯ ರದ್ದು ಮಾತ್ರವೇನು? ಖಂಡಿತಾ ಅಲ್ಲ. ಪ್ರಕೃತಿಯಲ್ಲಿರುವ ಸತ್ತಾ್ವತಿಶಯಗಳಲ್ಲಿ, ವಿಸ್ಮಯಗಳಲ್ಲಿ ವ್ಯಕ್ತವಾಗುವ ಅವ್ಯಕ್ತವಾಗಿ ರುವ ಪರಬ್ರಹ್ಮ ಸ್ವರೂಪವು ಎಲ್ಲವನ್ನೂ ಮುನ್ನಡೆಸುತ್ತಿದೆ ಎನ್ನುವುದೆ ನಿತ್ಯ ಸತ್ಯ.

ಈ ಅನೂಹ್ಯವೂ, ಅನನ್ಯವೂ ಆದ ಸೃಷ್ಟಿ ವ್ಯವಸ್ಥೆಯನ್ನು ಅರಿಯಲು ಯತ್ನಿಸುವುದೆ ಜೀವೋತ್ಕರ್ಷ. ಮನುಷ್ಯ ವಾಸಕ್ಕೆ ಮನೆಯು ಬೇಕು. ಮನುಷ್ಯನಿದ್ದರೆ ಮಾತ್ರ ಮನೆಗೆ ಜೀವಕಳೆ. ಇಲ್ಲವೆಂದರೆ ಪಾಳು ಬಿದ್ದ ಮನೆ, ಜಡ. ದೇಹವೆನ್ನುವ ಜಡದೊಳಗೆ ಚೈತನ್ಯವಿರುವುದರಿಂದ ಅದಕ್ಕೆ ಜೀವಕಳೆ. ಆ ಚೈತನ್ಯದ ವಿಕಸನಕ್ಕೆ ಪಂಚಭೂತಗಳಿಂದ ರಚಿತವಾದ ದೇಹವು ಬೇಕು. ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳನ್ನೊಳಗೊಂಡು ದೇಹದ ನಿರ್ವಣ.

(ಲೇಖಕರು ಉಪನ್ಯಾಸಕರು, ಕವಯಿತ್ರಿ, ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net