

ಮಂಚಾಲೆಯು ಗುರುರಾಯರೇ ಬಯಸಿ ಪಡೆದ ಭಗವಂತನ ದಿವ್ಯತಾಣ. ಈ ನಿಟ್ಟಿನಲ್ಲಿ ಗುರುರಾಯರು ನೆಲೆಸಿರುವ ಬೃಂದಾವನವಷ್ಟೇ ಮಂತ್ರಾಲಯವಲ್ಲ ಹೊರತು, ಇಡೀ ಮಂತ್ರಾಲಯಕ್ಷೇತ್ರವೇ ಗುರುರಾಯರಿರುವ ತ್ರಿದಶಾಲಯ. ಗುರುರಾಯರ ಕುಲದೇವರು ಶ್ರೀನಿವಾಸದೇವರಾದರೆ ಅವರ ಕುಲದೇವತೆ ಹಾಗೂ ಗ್ರಾಮದೇವತೆ ಮಹಾಲಕ್ಷಿ್ಮೕ (ಮಂಚಾಲಮ್ಮ). ಈಕೆಯ ಆಜ್ಞೆಯನ್ನು ಪಡೆದೇ ಗುರುರಾಯರು ಮಂತ್ರಾಲಯದಲ್ಲಿ ಬೃಂದಾವನದಿ ನೆಲೆಸಿದರು.
ಗುರುರಾಯರು ಬೃಂದಾವನವನ್ನು ಪ್ರವೇಶಿಸುವ ಮುನ್ನ ತಮಗೆ ಅಭಿಮುಖವಾಗಿ ತಮ್ಮ ಉಪಾಸ್ಯಮೂರ್ತಿಯಾದ ಮುಖ್ಯಪ್ರಾಣದೇವರನ್ನು ಪ್ರತಿಷ್ಠಾಪಿಸಿದ್ದು ಆಯುರಾರೋಗ್ಯಾದಿಗಳನ್ನು ಬಯಸಿ ಬರುವ ಭಕ್ತರಿಗೆ ಈತನೇ ಅಭಯಪ್ರದನಾಗಿದ್ದಾನೆ. ಕೆಲವರು ಇದನ್ನು ರಾಯರ ಸಾಕ್ಷಾತ್ ಶಿಷ್ಯ ಶ್ರೀ ಯೋಗೀಂದ್ರತೀರ್ಥರು ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳುವುದೂ ಉಂಟು. ಹನುಮಂತನನ್ನು, ರಾಯರನ್ನು ಕಾಣಲು ಸಾಲುಗಟ್ಟಿ ಬರುವ ಭಕ್ತರಿಗೆ ಮೊದಲು ಕಾಣಸಿಗುವ ದೇವತೆಯೇ ರುದ್ರದೇವರು. ಇವರನ್ನು ಪ್ರತಿಷ್ಠಾಪಿಸಿದ್ದು ಶ್ರೀ ಯೋಗೀಂದ್ರತೀರ್ಥರು.
ಇವರ ತರುವಾಯ ಕಾಣುವ ದಿವ್ಯಸನ್ನಿಧಾನವೇ ಶ್ರೀ ರಾಘವೇಂದ್ರತೀರ್ಥರದ್ದು. ಪ್ರಧಾನವಾಗಿ ಭಕ್ತರು ರಾಯರಲ್ಲಿ ಗಮನಿಸಬೇಕಾದದ್ದು ಅದರ ಮೇಲಿರಿಸಲಾಗಿರುವ ಶ್ರೀ ಲಕ್ಷಿ್ಮೕನರಸಿಂಹದೇವರ ಹಾಗೂ ರಾಯರ ವೃಂದಾವನದ ಹೃದಯಭಾಗದಲ್ಲಿರುವ ಶ್ರೀ ಲಕ್ಷಿ್ಮೕವೇಂಕಟೇಶ್ವರನ ವಿಗ್ರಹ. ಒಬ್ಬನು ರಾಯರನ್ನು ಪ್ರಹ್ಲಾದಾವತಾರದಲ್ಲಿ ಸಲಹಿದ ಹೆದ್ದೆ ೖವವಾದರೆ ಮತ್ತೊಬ್ಬ ಗುರುರಾಯರ ಪೂರ್ವಾಶ್ರಮದ ಕುಲದೈವ.
ರಾಯರ ಬೃಂದಾವನದ ಪಾದಭಾಗದಲ್ಲಿ ಪ್ರಹ್ಲಾದರಾಯರ ಎರಡು ಬೆಳ್ಳಿಯ ಉತ್ಸವಮೂರ್ತಿಗಳನ್ನು ಕಾಣಬಹುದು. ಒಂದು ಪ್ರಾಚೀನ, ಮತ್ತೊಂದು ನವೀನಕಾಲದ ವಿಗ್ರಹ. ನಾಲ್ಕು ದಿವ್ಯಸ್ತಂಭಗಳಿಂದ ನಿರ್ವಿುತವಾದ ಮಂಟಪದ ಮಧ್ಯದಲ್ಲಿ ವಿರಾಜಿಸುವ ಗುರುರಾಯರು ಸಾಕ್ಷಾತ್ ಮಂಟಪದೇವತೆಗಳಿಂದಲೇ ಆರಾಧಿತರಾಗಿ ಬೃಂದಾವನದೊಳು ಕುಳಿತು ಮೋಕ್ಷಶಾಸ್ತ್ರ ಉಪದೇಶಿಸುತ್ತಿರುವರು.
ಗುರುರಾಯರ ಬೃಂದಾವನವು ಸ್ವಲ್ಪ ಬಾಗಿದ್ದು ಅದಕ್ಕೆ ಮುಖ್ಯ ಕಾರಣರಾದವರುಶ್ರೀ ವಾದೀಂದ್ರತೀರ್ಥರು. ವಾದೀಂದ್ರತೀರ್ಥರು ಮಾಡಿದ ಭವ್ಯಸ್ತವನಕ್ಕೆ ಸೋತಲ್ಲವೇ ರಾಯರು ತಲೆಯಾಡಿಸಿದ್ದು! ಅಂದು ಗುರುರಾಯರಿಗಾಗಿ ಮೀಸಲಾಗಿದ್ದ ಭವ್ಯಶಿಲೆಯ ಬೃಂದಾವನವು ರಾಯರ ಪೀಠದಲ್ಲೇ ವಿರಾಜಮಾನರಾದ ಅವರ ಪೂರ್ವಾಶ್ರಮದ ಮರಿಮಗ ವಾದೀಂದ್ರತೀರ್ಥರ ಪಾಲಾಯಿತು. ರಾಯರಿಗೆ ಸಲ್ಲುವ ಸಕಲ ಸೇವೆಗಳು ಇವರಿಗೂ ಸಲ್ಲುತ್ತವೆ.
ಗುರುರಾಯರ ಬೃಂದಾವನದ ಮಹಾಪ್ರಾಕಾರಕ್ಕೆ ಸಮೀಪದಲ್ಲೇ ಪುರಾತನವಾದ ಅಶ್ವತ್ಥವೃಕ್ಷವೂ, ಬೇವಿನಮರವೂ ಇದ್ದು ಸಂತಾನಾಪೇಕ್ಷಿ ಭಕ್ತರು ರಾಯರನ್ನು ಸೇವಿಸುವಂತೆ ಇಲ್ಲಿಯೂ ನಾಗಪ್ರತಿಷ್ಠಾದಿಗಳನ್ನು ಕೈಗೊಂಡು ಅಶ್ವತ್ಥಪ್ರದಕ್ಷಿಣೆಯೊಂದಿಗೆ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿರುವುದು ಆಪ್ರಾಚೀನ ಕಾಲದಿಂದಲೂ ಕಂಡುಬಂದಿದೆ. ಇವುಗಳಲ್ಲದೆ ಶ್ರೀ ಸುಶಮೀಂದ್ರತೀರ್ಥ ಹಾಗೂ ಶ್ರೀ ಸುಯಮೀಂದ್ರತೀರ್ಥರ ಬೃಂದಾವನಗಳ ಮಧ್ಯೆ ಪ್ರಾಚೀನ ಶಮೀವೃಕ್ಷವೊಂದು ಬೇರುಬಿಟ್ಟಿದೆ. ಇತ್ತೀಚೆಗೆ ಶ್ರೀ ಸುಬುಧೇಂದ್ರತೀರ್ಥರು ಶಿಲಾಮಯ ತುಳಸೀಬೃಂದಾವನವನ್ನೂ ಇಲ್ಲೇ ಪ್ರತಿಷ್ಠಾಪಿಸಿರುವರು. ಕಾರ್ತಿಕಮಾಸದಲ್ಲಿ ಇಲ್ಲಿ ವಿಶೇಷ ದೀಪೋತ್ಸವವು ಜರುಗುತ್ತದೆ. ಉತ್ಥಾನದ್ವಾದಶೀ ಮತ್ತು ವಿಜಯದಶಮಿಗಳಂದು ಸ್ವಯಂ ಶ್ರೀಪಾದಂಗಳವರೇ ಮಹಾ ಆರತಿ ಬೆಳಗಿ ಈ ಸನ್ನಿಧಾನಕ್ಕೆ ಮೆರುಗು ತರುವರು.
ಮುಖ್ಯವಾಗಿ ಗುರುರಾಯರ ಹಾಗೂ ವಾದೀಂದ್ರತೀರ್ಥರ ಸನ್ನಿಧಾನವಲ್ಲದೆ ಮಠದ ಆವರಣದಲ್ಲೇ ಇನ್ನೂ ಆರು ಮಹಾತಪಸ್ವಿಗಳ ಬೃಂದಾವನಗಳಿವೆ. ಇವರಲ್ಲಿ ಶ್ರೀ ಸುಜ್ಞಾನೇಂದ್ರತೀರ್ಥರ ಶಿಷ್ಯರಾಗಿದ್ದ ಶ್ರೀ ಸುಧಮೇಂದ್ರತೀರ್ಥರು ಒಬ್ಬರಾದರೆ, ಮತ್ತೊಬ್ಬರು ಶ್ರೀ ಸುವ್ರತೀಂದ್ರತೀರ್ಥರು. ಇವರ ಶಿಷ್ಯರಾಗಿದ್ದ ಶ್ರೀ ಸುಯಮೀಂದ್ರತೀರ್ಥರು ಇನ್ನೊಬ್ಬರಾದರೆ ದೇಶದಾದ್ಯಂತ ಗುರುರಾಯರ ಮೃತ್ತಿಕಾ ಬೃಂದಾವನಗಳನ್ನು ಪ್ರತಿಷ್ಠಾಪಿಸಿ ರಾಯರ ಅನುಗ್ರಹವನ್ನು ಮನೆ-ಮನಗಳಿಗೆ ತಲುಪಿಸಿದ ಹೆಸರಾಂತ ಶ್ರೀ ಸುಜಯೀಂದ್ರತೀರ್ಥರೂ ಇಲ್ಲೇ ನೆಲೆಸಿದ್ದಾರೆ. ನಡೆದಾಡುವ ರಾಯರೆಂದೇ ಪ್ರಸಿದ್ಧರಾಗಿದ್ದ ಶ್ರೀ ಸುಶಮೀಂದ್ರತೀರ್ಥರ ಮತ್ತು ಪ್ರಸಕ್ತ ಪೀಠಾಧಿಪತಿಗಳ ಆಶ್ರಮಗುರುಗಳಾಗಿದ್ದ ಶ್ರೀ ಸುಯತೀಂದ್ರತೀರ್ಥರ ಬೃಂದಾವನವೂ ಇಲ್ಲೇ ಗುರುರಾಯರ ಸಾಮೀಪ್ಯ ಪಡೆದಿವೆ. ಇಂತು ಯತಿಕುಲವನ್ನೇ ತೋಳತೆಕ್ಕೆಯಲ್ಲಿರಿಸಿಕೊಂಡ, ನದೀದೇವತೆಗಳಿಂದ ಆರಾಧಿತವಾದ, ದೇವದೇವೋತ್ತಮನಿಂದ ವಿಹಾರ ಮಾಡಲ್ಪಟ್ಟಿರುವ, ಗುರುಕುಲೋತ್ತುಂಗ ಶ್ರೀ ರಾಯರನ್ನು ಹಡೆದಿರುವ ಶ್ರೀಮನ್ಮಂತ್ರಾಲಯವು ತ್ರಿದಶಾಲಯವೇ ಸರಿ.