

ನವೀನ್ ಬಿಲ್ಗುಣಿ ಶಿವಮೊಗ್ಗ
ಶಿವಮೊಗ್ಗ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ತೆರಿಗೆ ಸಂಗ್ರಹವಾಗಿದೆ. ಕಳೆದ 2022-23ನೇ ಸಾಲಿನಲ್ಲಿ ನಿರೀಕ್ಷೆಗೂ ಮೀರಿ 50 ಕೋಟಿ ರೂ. ತೆರಿಗೆ ವಸೂಲಾಗಿದ್ದರೆ ಪ್ರಸಕ್ತ ಬಾರಿ ಜುಲೈನಲ್ಲೇ ಬರೋಬ್ಬರಿ 30 ಕೋಟಿ ತೆರಿಗೆ ಹಣ ಪಾಲಿಕೆ ಖಜಾನೆ ಸೇರಿದೆ.
ನಗರಪಾಲಿಕೆ ಇದ್ದಾಗ, ತದನಂತರ ಮಹಾನಗರ ಪಾಲಿಕೆ ಆಗಿ ಮೇಲ್ದರ್ಜೆಗೇರಿದ ಬಳಿಕ ಇಷ್ಟು ವರ್ಷಗಳ ಅವಧಿಯಲ್ಲಿ ಈ ಪ್ರಮಾಣದ ತೆರಿಗೆ ಸಂಗ್ರಹ ಆಗಿರಲಿಲ್ಲ. ಪ್ರತಿ ಬಾರಿಯೂ ಕಂದಾಯ ಅಧಿಕಾರಿಗಳು ಅನೇಕ ರೀತಿಯಲ್ಲಿ ಸರ್ಕಸ್ ಮಾಡಿದರೂ ನಿರೀಕ್ಷಿತ ತೆರಿಗೆ ವಸೂಲಾತಿ ಮಾಡುವುದೇ ಕಷ್ಟವಾಗುತ್ತಿತ್ತು. ಆದರೆ ಕಳೆದ ಬಾರಿ (2022-23) ಹೆಚ್ಚಾಗಿ ಜನರೇ ನಾನಾ ತೆರಿಗೆಗಳನ್ನು ಪಾವತಿಸಿರುವುದು ವಿಶೇಷವಾಗಿದೆ.
ಜಿಲ್ಲೆಯಲ್ಲಿ ಕಳೆದ ಬಾರಿ 1,01,369 ಮಂದಿ ತೆರಿಗೆ ಪಾವತಿಸಿದ್ದು 43.09 ಕೋಟಿ ರೂ. ಆಸ್ತಿ ತೆರಿಗೆಯೇ ಸಂಗ್ರಹವಾಗಿದೆ. ಜಾಹೀರಾತು, ಸ್ವಯಂಘೋಷಿತ ಆಸ್ತಿ ತೆರಿಗೆ ಸೇರಿದಂತೆ ಬೇರೆ ಬೇರೆ ತೆರಿಗೆ ಸೇರಿ 50 ಕೋಟಿ ರೂ. ದಾಟಿದೆ. ಪ್ರಸಕ್ತ ಬಾರಿ ಪಾಲಿಕೆ 46 ಕೋಟಿ ರೂ. ಆಸ್ತಿ ತೆರಿಗೆ ಗುರಿ ಇಟ್ಟುಕೊಂಡಿದ್ದು ಈ ಬಾರಿಯೂ ಕಳೆದ ಬಾರಿಗಿಂತ ಹೆಚ್ಚು ಕರ ವಸೂಲಾತಿ ನಿರೀಕ್ಷಿಸುವಂತಾಗಿದೆ.
34.49 ಕೋಟಿ ರೂ. ಸಂಗ್ರಹವೇ ಗರಿಷ್ಠ
ಇದುವರೆಗಿನ ಪಾಲಿಕೆ ಆಡಳಿತ ಅವಧಿಯಲ್ಲಿ 2021-22ರಲ್ಲಿ 34.49 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಆಗಿದ್ದೇ ದಾಖಲೆಯಾಗಿತ್ತು. ಆದರೆ 2022-23ನೇ ಸಾಲಿನಲ್ಲಿ ಅದನ್ನೂ ಮೀರಿದ ಸಾಧನೆಯನ್ನು ಪಾಲಿಕೆ ಆಡಳಿತ ಮಾಡಿ ತೋರಿಸಿದೆ. ಪಾಲಿಕೆ ಆಡಳಿತಾವಧಿಯಲ್ಲೇ ಇದು ದೊಡ್ಡ ಮೊತ್ತವಾಗಿದೆ. 2017-18ರಲ್ಲಿ 17.91 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಆಗಿತ್ತು. ತದನಂತರ 2018-19ರಲ್ಲಿ 21.17 ಕೋಟಿ ರೂ., 2019-20ರಲ್ಲಿ 23.66 ಕೋಟಿ ರೂ., 2020-21ರಲ್ಲಿ 25.98 ಕೋಟಿ ರೂ.ಗಳ ತೆರಿಗೆ ಸಂಗ್ರಹ ಮಾಡಲಾಗಿತ್ತು. 2023-24ನೇ ಸಾಲಿನ ಜುಲೈ 25ರವರೆಗೆ 29.71 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದೆ.ಒಂದು ಲಕ್ಷ ಗಟಿ ದಾಟಿದ ಕರದಾತರು
ಪಾಲಿಕೆ ಆಸ್ತಿ ತೆರಿಗೆ ಪಾವತಿದಾರರ ಸಂಖ್ಯೆ ಕಳೆದ ಹತ್ತಾರು ವರ್ಷಗಳಲ್ಲಿ 75 ಸಾವಿರ ದಾಟುತ್ತಿರಲಿಲ್ಲ. ಆದರೆ ಕಳೆದ ವರ್ಷ ಈ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಇದರಿಂದಲೇ ಆಸ್ತಿ ತೆರಿಗೆ ಪ್ರಮಾಣ ಹೆಚ್ಚಳ ಆಗಲು ಕಾರಣವಾಗಿದೆ. 2017-18ರಲ್ಲಿ 76,939 ಮಂದಿ ಆಸ್ತಿ ತೆರಿಗೆ ಪಾವತಿ ಮಾಡಿದ್ದರು. 2018-19ರಲ್ಲಿ 74,840, 2019-20ರಲ್ಲಿ 81,356, 2020-21ರಲ್ಲಿ 84,919 ಮತ್ತು 2021-22ರಲ್ಲಿ 99,247 ಮಂದಿ ಆಸ್ತಿ ತೆರಿಗೆ ಪಾವತಿಸಿದ್ದರು. 2022-23ನೇ ಸಾಲಿನಲ್ಲಿ ಈ ಪ್ರಮಾಣ 1,01,369ಕ್ಕೆ ಏರಿಕೆ ಆಗಿದೆ. 2023-24ರಲ್ಲಿ ಜುಲೈ ಅಂತ್ಯದವರೆಗೆ 59,968 ಮಂದಿ ಆಸ್ತಿ ತೆರಿಗೆ ಪಾವತಿಸಿದ್ದಾರೆ.
12 ಕೋಟಿ ರೂ. ಸೆಸ್‌ಗೆ ಬಳಕೆ
ಪ್ರತಿ ವರ್ಷ ಸಂಗ್ರಹವಾಗುವ ತೆರಿಗೆಯಲ್ಲಿ ಪಾಲಿಕೆ ಗ್ರಂಥಾಲಯ, ಆರೋಗ್ಯ, ನಗರಾಭಿವೃದ್ಧಿ ಸೇರಿ ನಾನಾ ಸೆಸ್‌ಗಳಿಗೆ ಬರೋಬ್ಬರಿ 12 ಕೋಟಿ ರೂ. ಮೀಸಲಿಡಬೇಕಿದೆ. ಹಾಗಾಗಿ ತೆರಿಗೆ ಸಂಗ್ರಹದಲ್ಲಿ ಸೆಸ್‌ಗೆ ಬಳಕೆ ಆಗುವ ಹಣವನ್ನು ಲೆಕ್ಕಕ್ಕೇ ಇಡದಂತಹ ಸ್ಥಿತಿ ಇದೆ. ಕಳೆದ ಬಾರಿ 50 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೂ ಪಾಲಿಕೆ ಬಳಕೆಗೆ ಸಿಗುವುದು 38 ಕೋಟಿ ರೂ. ಮಾತ್ರ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.ತೆರಿಗೆ ಸಂಗ್ರಹಕ್ಕೆ ಹಲವು ವಿಘ್ನ
ಪಾಲಿಕೆ ಆವರಣ ಸೇರಿ ನಗರದ ಹಲವೆಡೆ ತೆರಿಗೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಆನ್‌ಲೈನ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಆದರೆ ಸರ್ವರ್ ಸಮಸ್ಯೆ ಒಳಗೊಂಡಂತೆ ಕರ ಸಂಗ್ರಹಕ್ಕೆ ಹಲವು ವಿಘ್ನಗಳು ಎದುರಾಗುತ್ತಲೇ ಇವೆ. ಪಾಲಿಕೆ ಕಂದಾಯ ವಿಭಾಗದಲ್ಲಿ ಜನರಿಂದ ಸರಿಯಾಗಿ ಕರ ಸಂಗ್ರಹಿಸುವುದಿಲ್ಲ ಎಂಬ ಆರೋಪಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಆಸ್ತಿ ತೆರಿಗೆ ವಸೂಲಾತಿ
ವರ್ಷ-ಕೋಟಿ ರೂ.ಗಳಲ್ಲಿ
2017-18-17.19
2018-19-21.17
2019-20-23.66
2020-21-25.98
2021-22-34.49
2022-23-43.09
2023-24-29.71(ಜು.25ರವರೆಗೆ)
ತೆರಿಗೆ ಪಾವತಿದಾರರು
ವರ್ಷ- ಕರದಾತರು
2017-18-76,939
2018-19-74,840
2019-20-81,356
2020-21-84,919
2021-22-99,247
2022-23-1,01,369
2023-24-59,968(ಜು.25ರವರೆಗೆ)
ಪಾಲಿಕೆಯಲ್ಲಿ ಕಳೆದ ಸಾಲಿನಲ್ಲಿ 43.09 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಪ್ರಸಕ್ತ ಬಾರಿ 46 ಕೋಟಿ ರೂ. ಆಸ್ತಿ ತೆರಿಗೆ ಗುರಿ ಇಟ್ಟುಕೊಂಡಿದ್ದೇವೆ. ಕಂದಾಯ ಇಲಾಖೆಯಲ್ಲಿ ಕೈಗೊಂಡ ಕೆಲ ನಿರ್ಧಾರಗಳಿಂದ ದಾಖಲೆ ಪ್ರಮಾಣದಲ್ಲಿ ಕಳೆದ ವರ್ಷ ಕರ ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲೂ ಹೆಚ್ಚು ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗುವುದು.
ಕೆ.ಮಾಯಣ್ಣ ಗೌಡ, ಮಹಾನಗರ ಪಾಲಿಕೆ ಆಯುಕ್ತ