ರೀಲ್ಸ್ ಮಾಡಲು ಬೈಕ್‌ನಲ್ಲಿ ಹುಚ್ಚಾಟ ತೋರಿದ ಯೂಟ್ಯೂಬರ್‌ಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್

reels
Published on

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ‘ರೀಲ್ಸ್’ ಮಾಡಲು ಬೈಕ್ ಚಲಾಯಿಸಿ ಕಾರಿನ ಗಾಜು ಹೊಡೆದು ಹುಚ್ಚಾಟ ತೋರಿದ್ದ ಯೂಟ್ಯೂಬರ್ ಟ್ರಾಫಿಕ್ ಪೊಲೀಸರಿಗೆ ಲಾಕ್ ಆಗಿದ್ದಾನೆ. ಜಾಲತಾಣದಲ್ಲಿ ಬಂದ ದೂರಿನ ಮೇರೆಗೆ ಯಲಹಂಕ ಸಂಚಾರ ಠಾಣೆ ಪೊಲೀಸರು ಬೈಕ್ ಸವಾರರನ್ನು ವಶಕ್ಕೆ ಪಡೆದು ‘ದಂಡ’ ವಿಧಿಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

ಭಾರತಿನಗರದ ಮಹಮ್ಮದ್ ಜಾವೀದ್ ಯೂಟ್ಯೂಬರ್. ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 2500 ರೂ.ದಂಡ ವಿಧಿಸಿದ್ದಾರೆ. ಈ ಹುಚ್ಚಾಟದ ವಿಡಿಯೋವನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿ ಜಾವೀದ್ ಸಿಕ್ಕಿಬಿದ್ದಿದ್ದಾನೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೇ ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಛದ್ಮ ವೇಷ ಧರಿಸಿಕೊಂಡು ಬೈಕ್‌ನಲ್ಲಿ ಅತಿವೇಗವಾಗಿ ಅಡ್ಡಾದಿಡ್ಡಿಯಾಗಿ ಜಾವೀದ್ ಓಡಿಸಿಕೊಂಡು ಹೋಗುತ್ತಿದ್ದ. ಆಗ ಕಾರಿಗೆ ಮುಂದೆ ಸಾಗಲು ಜಾಗ ಕೊಡದೆ ಹುಚ್ಚಾಟ ತೋರಿದ ಜಾವೀದ್, ಯಲಹಂಕದ ಬೈಪಾಸ್ ಬಳಿ ಆ ಕಾರಿನ ಮಿರಾರ್‌ನ್ನು ಕೈಯಿಂದ ಹೊಡೆದು ಪರಾರಿಯಾಗಿದ್ದ.

ಈ ಕೃತ್ಯದ ವಿಡಿಯೋವನ್ನು ತನ್ನ ‘ಮಿಸ್ಟರ್ ಕ್ರೇಜ್’ ಯೂಟ್ಯೂಬ್ ಚಾನೆಲ್‌ನಲ್ಲಿ ಆಪ್ ಲೋಡ್ ಮಾಡಿದ್ದ. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಯಲಹಂಕ ಸಂಚಾರ ಪೊಲೀಸರು, ಆರೋಪಿತ ಯೂಟ್ಯೂಬರ್‌ನನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ. ಅಲ್ಲದೆ ಸಿಗ್ನಲ್ ಜಂಪ್ ಮಾಡಿದ ತಪ್ಪಿಗೆ ಆ ಕಾರಿನ ಮಾಲೀಕನಿಗೆ ಸಹ 500 ರೂ. ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net