ಯುವಕನ ಮೇಲೆ ಹಲ್ಲೆ ಮಾಡಿದ ಪುಂಡರು

Crime Logo
Published on

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಗೆ ಕೇರಳದಿಂದ ನಗರಕ್ಕೆ ಬಂದಿದ್ದ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಭಾನುವಾರ ರಾತ್ರಿ ಡೈರಿ ಸರ್ಕಲ್ ಬಳಿಯ ಖಾಸಗಿ ಕಾಲೇಜು ಬಳಿ ಈ ಘಟನೆ ನಡೆದಿದೆ. ಸ್ಟಾಲಿನ್ ಹಲ್ಲೆಗೊಳಗಾದ ಯುವಕ.
ನ್ಯೂ ಇಯರ್ ಪಾರ್ಟಿಗೆಂದು ಯುವಕ ಸ್ಟಾಲಿನ್ ಕೇರಳದಿಂದ ಬೆಂಗಳೂರಿಗೆ ಬಂದಿದ್ದಾನೆ. ಸ್ಟಾಲಿನ್ ಡೈರಿ ಸರ್ಕಲ್ ಸಮೀಪವಿರುವ ಖಾಸಗಿ ಕಾಲೇಜು ಬಳಿಯ ಪಬ್‌ನಲ್ಲಿ ಗೆಳೆಯರ ಜತೆ ಪಾರ್ಟಿ ಮಾಡುತ್ತಿದ್ದನು. ಕೆಲ ಹೊತ್ತಿನ ಬಳಿಕ ಸ್ಟಾಲಿನ್ ಗೆಳೆಯರು ಪಬ್ನಿಂದ ಹೊರಗೆ ಬಂದಿದ್ದಾರೆ. ಹೀಗೆ ಹೊರಗೆ ಬಂದವರು ಯುವತಿಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸ್ಟಾಲಿನ್ ಗೆಳಯರ ಜತೆ ಇಬ್ಬರು ಯುವಕರು ಜಗಳ ತೆಗೆದಿದ್ದಾರೆ. ಇದನ್ನು ತಿಳಿದ ಸ್ಟಾಲಿನ್, ಏನಾಯ್ತು ಎಂದು ಘಟನಾ ಸ್ಥಳಕ್ಕೆ ಬಂದು ನೋಡುತ್ತಿದ್ದಾಗ ಆ ಇಬ್ಬರು ಯುವಕರು ಸ್ಟಾಲಿನ್ ಮೇಲೂ ಹಲ್ಲೆ ಮಾಡಿದ್ದಾರೆ. ಗಲಾಟೆಯಲ್ಲಿ ಸ್ಟಾಲಿನ್ ಅವರ ಹಲ್ಲು ಮುರಿದಿದೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ತಡೆದಿದ್ದಾರೆ. ಬಳಿಕ ಪೊಲೀಸರು ವಿಚಾರಿಸಿದಾಗ ತಾನು ಕೇರಳದ ಎಸ್.ಪಿಯೊಬ್ಬರ ಮಗ ಎಂದು ಸ್ಟಾಲಿನ್ ಹೇಳಿದ್ದಾನೆ. ಗಲಾಟೆಯ ನಂತರ ಪರಸ್ಪರ ಕ್ಷಮೆ ಕೋರಿ ಯುವಕರು ಸ್ಥಳದಿಂದ ತೆರಳಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net