

ಶಿವಮೊಗ್ಗ: ನಾವೀನ್ಯ ಕಲಿಕೆಗೆ ತಾಂತ್ರಿಕ ಪುಸ್ತಕಗಳು ಪ್ರೇರಕ ಶಕ್ತಿಯಾಗಿವೆ ಎಂದು ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ನಗರದ ಎಸ್‌ಆರ್‌ಎನ್‌ಎಂ ಅನ್ವಯಿಕ ವಿಜ್ಞಾನ ಕಾಲೇಜಿನ ಬಿಸಿಎ ವಿಭಾಗ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕ ಜಿ.ಎಸ್.ಪ್ರದೀಪ್ ಅವರ ಪೈಥಾನ್ ಪ್ರೋಗ್ರಾಮಿಂಗ್ ತಾಂತ್ರಿಕ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಇಂದಿನ ತಂತ್ರಜ್ಞಾನ ನಾಳೆಗೆ ಹಳೆಯದಾಗುವ ಮಟ್ಟಿಗೆ ತಾಂತ್ರಿಕ ಯುಗ ಬದಲಾಗುತ್ತಿದೆ. ಜಗತ್ತು ಸದಾ ನಾವೀನ್ಯ ಸಂಶೋಧನೆಗಳ ಅನುಷ್ಠಾನದಲ್ಲಿ ನಿರತವಾಗಿದೆ. ಅಂತಹ ಬದಲಾವಣೆಗಳ ಅರಿವು ತಾಂತ್ರಿಕ ವಿದ್ಯಾರ್ಥಿಗಳಿಗೆ ಅಗತ್ಯ ಎಂದು ತಿಳಿಸಿದರು.
ಪೈಥಾನ್ ಎಂಬ ಆಂಗ್ಲ ಹಾಸ್ಯ ಧಾರಾವಾಹಿ ಹೆಸರು ಪ್ರೋಗ್ರಾಮಿಂಗ್ ಭಾಷೆಯೊಂದರ ಹೆಸರಾಗಿ ನಾಮಕರಣಗೊಳ್ಳಲು ಪ್ರೇರಣೆಯಾಯಿತು. ಇಂತಹ ಪ್ರೋಗ್ರಾಮಿಂಗ್ ಭಾಷೆ ಇತಿಹಾಸದಿಂದ ಪ್ರಸ್ತುತ ಅನ್ವೇಷಣೆಯವರೆಗಿನ ಹಲವು ವಿಚಾರಗಳನ್ನು ಪುಸ್ತಕದ ಮೂಲಕ ಅಧ್ಯಯನ ನಡೆಸಲಾಗಿದೆ ಎಂದರು.
ಪುಸ್ತಕದ ಲೇಖಕ ಜಿ.ಎಸ್.ಪ್ರದೀಪ್ ಮಾತನಾಡಿ, ನವೀನ ವಿಚಾರ ಮತ್ತು ಪರಿಕರಗಳೊಂದಿಗೆ ಪೈಥಾನ್ ಪ್ರೋಗ್ರಾಮಿಂಗ್ ಭಾಷೆಯು ಅದ್ಭುತ ಕಲಿಕಾ ಸಾಧನವಾಗಿದೆ. ಈ ಹಿನ್ನೆಲೆಯಲ್ಲಿ ಪೈಥಾನ್ ಕುರಿತ ಪುಸ್ತಕ ಬರೆಯಲು ಪ್ರೇರಣೆಯಾಯಿತು ಎಂದು ಹೇಳಿದರು.
ವೆಬ್ ಡೆವಲಪ್‌ಮೆಂಟ್, ಕೃತಕ ಬುದ್ಧಿಮತ್ತೆ ಕಾರ್ಯನಿರ್ವಹಣೆ ಸೇರಿ ಇಂದಿನ ಪ್ರತಿಯೊಂದು ತಾಂತ್ರಿಕ ಪ್ರಯೋಗಗಳಲ್ಲೂ ಪೈಥಾನ್ ಭಾಷೆ ಮೇಲುಗೈ ಸಾಧಿಸಿದೆ. ಮುಂದಿನ ದಿನಗಳಲ್ಲಿ ಪಿಎಲ್‌ಎಸ್‌ಕ್ಯುಎಲ್ ತಂತ್ರಜ್ಞಾನ ಕುರಿತು ಪುಸ್ತಕ ಬರೆಯಲಿದ್ದೇನೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಕೆ.ಎಲ್.ಅರವಿಂದ, ಬಿಸಿಎ ವಿಭಾಗದ ಮುಖ್ಯಸ್ಥ ಎಚ್.ಎಸ್.ದತ್ತಾತ್ರಿ, ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಎಚ್.ಕೆ.ಪ್ರದೀಪ್ ಇದ್ದರು.