

ವಾಷಿಂಗ್ಟನ್: ಭಾರತ ಬಹಳ ವರ್ಷಗಳಿಂದ ಅಮೆರಿಕದ ವಸ್ತುಗಳ ಮೇಲೆ ಹೆಚ್ಚಿನ ಸುಂಕ ಹೇರುವ ಮೂಲಕ ಹೊಡೆತ ನೀಡುತ್ತಿದೆ. ಆದರೂ ಭಾರತ ಭೇಟಿ ವೇಳೆ ವಾಣಿಜ್ಯ ವ್ಯವಹಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಯಾವುದನ್ನೂ ಸ್ಪಷ್ಟವಾಗಿ ಹೇಳದೆ ಕುತೂಹಲ ಹುಟ್ಟಿಸಿದ್ದಾರೆ. ಕೊಲರಾಡೊದಲ್ಲಿ ಗುರುವಾರ ರ್ಯಾಲಿಯೊಂದರಲ್ಲಿ ಮಾತನಾಡಿದ ಟ್ರಂಪ್, ‘ವಾಣಿಜ್ಯ ಸುಂಕಗಳಿಗೆ ಸಂಬಂಧಿಸಿ ಭಾರತದ ಧೋರಣೆಯ ಹೊರತಾಗಿಯೂ ಮೋದಿಯನ್ನು ನಿಜವಾಗಿಯೂ ಮೆಚ್ಚುತ್ತೇನೆ. ವ್ಯಾಪಾರ ವ್ಯವಹಾರದ ಬಗ್ಗೆ ಅವರೊಂದಿಗೆ ರ್ಚಚಿಸುತ್ತೇನೆ. ಭಾರತವು ಅಮೆರಿಕದ ಮೇಲೆ ಅತಿ ಹೆಚ್ಚಿನ ಸುಂಕ ವಿಧಿಸಿದ ದೇಶಗಳಲ್ಲಿ ಒಂದಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ. ಭಾರತ ಭೇಟಿ ವೇಳೆ ದೊಡ್ಡ ಒಡಂಬಡಿಕೆಗೆ ಸಹಿಹಾಕುವ ನಿರೀಕ್ಷೆ ಅನಗತ್ಯ. ಭಾರತದಿಂದ ಪೂರಕ ಹಾಗೂ ಅನುಕೂಲಕರ ಧೋರಣೆ ಹೊರಬರದಿದ್ದರೆ ಈ ಕುರಿತ ಮಾತುಕತೆಗಳು ನಿಧಾನಗೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋಟಿ ಜನರ ಸ್ವಾಗತ!
‘ಅಹಮದಾಬಾದ್ ವಿಮಾನ ನಿಲ್ದಾಣದಿಂದ ಮೊಟೆರಾ ಮೈದಾನ ಮಾರ್ಗದಲ್ಲಿ ತಮ್ಮನ್ನು ಸ್ವಾಗತಿಸಲು ಒಂದು ಕೋಟಿ ಜನರು ಸೇರಲಿದ್ದಾರೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಹಮದಾಬಾದ್ನಲ್ಲಿ ನಡೆಯುವ ‘ನಮಸ್ತೆ ಟ್ರಂಪ್’ ರ‍್ಯಾಲಿ ನಿಜಕ್ಕೂ ನನ್ನಲ್ಲಿ ಉತ್ಸಾಹ ಮೂಡಿಸಿದೆ. ಬಹಳಷ್ಟು ಜನರು ಈ ಕಾರ್ಯಕ್ರಮಕ್ಕೆ ಬರುತ್ತಾರೆ. ಆದರೆ ರ‍್ಯಾಲಿ ನಡೆಯುವ ಸ್ಥಳಕ್ಕೆ ಆಗಮಿಸಲು ಸಾವಿರಾರು ಜನರಿಗೆ ಸಾಧ್ಯವಾಗುವುದಿಲ್ಲ. ಇದು ತುಂಬಾ ಕಷ್ಟದ ಸನ್ನಿವೇಶ ಎಂದು ಟ್ರಂಪ್ ಹೇಳಿದ್ದಾರೆ.
ಪುತ್ರಿ, ಅಳಿಯನೂ ಬರಲಿದ್ದಾರೆ
ಟ್ರಂಪ್ ಜೊತೆ ಅವರ ಪುತ್ರಿ ಇವಾಂಕಾ ಹಾಗೂ ಅಳಿಯ ಜರೆಡ್ ಕುಶ್ನರ್ ಕೂಡ ಆಗಮಿಸಲಿದ್ದಾರೆ. ಉನ್ನತ ಮಟ್ಟದ ನಿಯೋಗದಲ್ಲಿ ಟ್ರಂಪ್ ಪತ್ನಿ ಕೂಡ ಇರುತ್ತಾರೆ. ಹಣಕಾಸು ಕಾರ್ಯದರ್ಶಿ ಸ್ಟೀವನ್ ಮುಚಿನ್ ಮತ್ತು ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರೋಸ್ ನಿಯೋಗದಲ್ಲಿರುವ ಇತರ ಪ್ರಮುಖರು.