

ಒಮ್ಮೆ ಎಲ್ಲ ಗೋಪಾಲಕರೂ ಸೇರಿ, ಒಂದು ಉತ್ಸವ ಮಾಡುವುದಾಗಿ ಕೃಷ್ಣನ ಮುಂದೆ ಹೇಳಿದರು. ಶ್ರೀಕೃಷ್ಣ ಅಜ್ಞ ಜನರಂತೆ ‘ಉತ್ಸವ ಏತಕ್ಕಾಗಿ?’ ಎಂದು ಕೇಳಿದ. ಇಂದ್ರನನ್ನು ಪ್ರತಿವರ್ಷವು ಪೂಜಿಸುವಂತೆ ಈ ವರುಷವೂ ಮಳೆ-ಬೆಳೆಗಾಗಿ ಪೂಜಿಸುತ್ತಿದ್ದೇವೆ ಎಂದರು ಗೋಪಾಲಕರು. ಶ್ರೀಕೃಷ್ಣ ಹೇಳಿದ: ’ಗೋಪಾಲಕರೇ! ನೀವು ಇಂದು ಗೋವುಗಳು, ಬ್ರಾಹ್ಮಣರು, ಅಗ್ನಿ ಇವುಗಳನ್ನು ಪೂಜಿಸಿರಿ! ನಾವು ಪ್ರತಿನಿತ್ಯವೂ ನಮ್ಮ ಸಮೀಪದಲ್ಲಿಯೇ ಇರುವ ಪ್ರಕೃತಿ, ಗೋವುಗಳು, ಬೆಟ್ಟ, ಮರಗಳಿಂದ ಪ್ರಯೋಜನವನ್ನು ಪಡೆಯುತ್ತಿದ್ದೇವೆ.
ಇವುಗಳ ಒಳಗೆ ಭಗವಂತನು ಅಂತರ್ಯಾಮಿಯಾಗಿ ಇದ್ದಾನೆಂದು ಭಾವಿಸುವ ಪ್ರಕೃತಿಯ ಪೂಜೆಯೂ ನಮ್ಮ ಬದುಕಿಗೆ ಕಾರಣವಾಗಿದೆ. ಆದ್ದರಿಂದ ಇಂಥ ಗೋವರ್ಧನಗಿರಿಯನ್ನು ಕುರಿತು ನಾವೆಲ್ಲರೂ ಸೇರಿ ಆರಾಧಿಸ ಬೇಕು. ನಮ್ಮ ಕಣ್ಣೆದುರಿಗೆ ಕಾಣುವ ಪ್ರಕೃತಿಯ ರೂಪದಲ್ಲಿರುವ ಭಗವಂತನನ್ನು ಪೂಜಿಸೋಣ’ ಎಂದ. ಅದನ್ನು ಒಪ್ಪಿ ಎಲ್ಲ ಗೋಪಾಲಕರು ಗೋವರ್ಧನಗಿರಿಯ ಆರಾಧನೆಯಲ್ಲಿ ತೊಡಗಿದರು. ಅತ್ತ ದೇವೇಂದ್ರನು ಸಿಟ್ಟಾದನು. ಬೃಂದಾವನವನ್ನೆಲ್ಲ ನಿರಂತರ ಮಳೆಸುರಿಸಿ ಮುಳುಗಿಸಿ ಬಿಡುತ್ತೇನೆ ಎಂದು ಹೆದರಿಸಿದ. ಆದರೆ ಶ್ರೀಕೃಷ್ಣನು ಅದೇ ಗೋವರ್ಧನ ಗಿರಿಯನ್ನು ಜನರ ರಕ್ಷಣೆಗೆಂದು ಎತ್ತಿಹಿಡಿದ.
ಭಕ್ತನಾದ ದೇವೇಂದ್ರನು ಉನ್ಮತ್ತನಾಗಿ ವರ್ತಿಸಿದಾಗ ಅವನ ಮದವನ್ನು ದಮನಮಾಡಲು, ಗೋಪಾಲಕರೆಲ್ಲರೂ ಇಂದ್ರನ ಪ್ರಳಯಕಾಲದ ಸೃಷ್ಟಿಯಿಂದ ಕಂಗೆಡದಂತೆ ಗಿರಿಯನ್ನು ಉದ್ಧರಿಸುತ್ತ ಶ್ರೀಕೃಷ್ಣನು ಹೇಳುತ್ತಾನೆ: ‘ನನ್ನ ಪಾದ ಕಮಲಗಳನ್ನೇ ಆಶ್ರಯಿಸಿರುವ, ನನ್ನನ್ನೇ ಸ್ವಾಮಿ ಎಂದರಿತಿರುವ ಮನೆಯವರಾದ ಗೋಪಾಲಕರನ್ನು ನನ್ನ ಅದ್ಭುತವಾದ ಯೋಗ ಸಾಮರ್ಥ್ಯದಿಂದ ಕಾಪಾಡುತ್ತೇನೆ. ಇದು ನಾನು ಮನಬಿಚ್ಚಿ ಧರಿಸಿದ ವ್ರತ’ ಎಂದು ಗಿರಿಯನ್ನು ಒಂದು ಸಣ್ಣ ಕೊಡೆ ಹಿಡಿಯುವಂತೆ ಅನಾಯಾಸವಾಗಿ ಎತ್ತಿಹಿಡಿದ.
ಎಲ್ಲರನ್ನೂ ಇಂದ್ರನ ಉಪದ್ರವದಿಂದ ರಕ್ಷಿಸಿದ. ಶ್ರೀಕೃಷ್ಣನುಗೋವರ್ಧನ ಪರ್ವತವನ್ನು ಮಾತ್ರ ಎತ್ತಿದ್ದಲ್ಲ. ಸಮಗ್ರ ಗೋಪಾಲಕ ಸಮಾಜವನ್ನೇ ಎತ್ತಿಹಿಡಿದ. ನೊಂದ ಮನಗಳನ್ನೆಲ್ಲ ಸಂತೈಸಿದ. ಏಳುದಿನಗಳ ಕಾಲ ಕೇವಲ ತನ್ನ ಸಿಹಿನೋಟದಿಂದಲೇ ಅಮೃತಾನಂದವನ್ನು ನೀಡಿದ.