ಚಕ್ರಬಡ್ಡಿ ಮನ್ನಾ ಪ್ಲ್ಯಾನ್; ಸುಪ್ರೀಂ ಅಸಮಾಧಾನ

Supreme Court
Published on

ನವದೆಹಲಿ: ಕರೊನಾ ಸಂದರ್ಭದಲ್ಲಿ ಸಾಲದ ಮಾಸಿಕ ಕಂತು (ಇಎಂಐ) ಪಾವತಿ ಮುಂದೂಡಿಕೆ ವಿನಾಯಿತಿ (ಮಾರಟೋರಿಯಂ) ಅವಧಿಯಲ್ಲಿನ ಚಕ್ರ ಬಡ್ಡಿ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್​ಗೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿದಾರರು ಎತ್ತಿದ್ದ ಹಲವು ವಿಚಾರಗಳಿಗೆ ಉತ್ತರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಅಕ್ಟೋಬರ್ 13ರೊಳಗೆ ಪರಿಷ್ಕೃತ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಹಾಗೂ ಆರ್​ಬಿಐಗೆ ಸೂಚಿಸಿದೆ.

ಕೆ.ವಿ. ಕಾಮತ್ ಸಮಿತಿ ಸೆಪ್ಟೆಂಬರ್ 7ರಂದು ಸಲ್ಲಿಸಿರುವ ವರದಿಯಲ್ಲಿನ ಕೆಲವು ಕ್ಷೇತ್ರವಾರು ನಿರ್ದಿಷ್ಟ ಕ್ರಮಗಳ ಶಿಫಾರಸುಗಳ ಬಗ್ಗೆ ಅಫಿಡವಿಟ್ ಮೌನವಾಗಿದೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಪೀಠ ಹೇಳಿದೆ. ಸರ್ಕಾರ ತನ್ನದೇ ನೀತಿ-ನಿರ್ಧಾರಗಳ ಅನುಷ್ಠಾನಕ್ಕೆ ಕೈಗೊಳ್ಳಲಾದ ಕ್ರಮಗಳ ಬೆಗ್ಗೆಯೂ ಅದು ವಿವರ ನೀಡಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿತು. ರಿಯಲ್ ಎಸ್ಟೇಟ್ ಮತ್ತು ಇಂಧನ ಉತ್ಪಾದಕರು ವ್ಯಕ್ತಪಡಿಸಿರುವ ಅಂಶಗಳನ್ನು ಪರಿಶೀಲಿಸಿ ಹೊಸ ಅಫಿಡವಿಟ್​ನಲ್ಲಿ ದಾಖಲಿಸುವಂತೆಯೂ ಸೂಚಿಸಿತು. ಚಕ್ರಬಡ್ಡಿ ಮನ್ನಾ ಯೋಜನೆಯ ಲಾಭ ಏನೆಂಬುದು ಜನರಿಗೆ ತಿಳಿಯುವಂತಾಗಲು ಸೂಕ್ತ ಆದೇಶ ಹೊರಡಿಸಬೇಕು ಎಂದು ಹೇಳಿತು.

ಸಾಲಗಾರರಿಗೆ ಅನುಕೂಲವಾಗುವ ಉದ್ದೇಶದಿಂದ ಸಣ್ಣ ಉದ್ದಿಮೆದಾರರು, ಶಿಕ್ಷಣ ಮತ್ತು ಗೃಹ ಸಾಲ, ಕ್ರೆಡಿಟ್ ಕಾರ್ಡ್ ಬಾಕಿದಾರರಿಗೆ ಚಕ್ರಬಡ್ಡಿ ಮನ್ನಾ ಮಾಡುವುದಾಗಿ ಶನಿವಾರದ ಅಫಿಡವಿಟ್​ನಲ್ಲಿ ಕೇಂದ್ರ ಸರ್ಕಾರ ಹೇಳಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net